ಕುಷ್ಕ ತಿನ್ನಲು ರೆಡಿ

kuska mar 20
Published on

‘ಈಗ ‘ಕುಷ್ಕ’ ತಯಾರಾಗಿದೆ. ನಿಮ್ಮೆಲ್ಲರ ಸಹಕಾರ ಇದ್ದರೆ ಮುಂದೆ ‘ಬಿರಿಯಾನಿ’ ಮಾಡ್ತೀವಿ ...’ ಇಂಥದ್ದೊಂದು ಹೇಳಿಕೆ ನಿರ್ವಪಕ ಮಧು ಗೌಡ ಅವರಿಂದ ಬಂತು. ಅವರು ಮುಂದೆ ‘ಬಿರಿಯಾನಿ’ ಎಂಬ ಸಿನಿಮಾ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಈಗಂತೂ ‘ಕುಷ್ಕ’ ಎಂಬ ಚಿತ್ರ ಮಾಡಿ ಮುಗಿಸಿ, ಬಿಡುಗಡೆಗೆ ಕಾಯುತ್ತಿದ್ದಾರೆ.

ಮಾರ್ಚ್ 13ಕ್ಕೆ ಆ ಚಿತ್ರ ಬಿಡುಗಡೆಯಾದ ನಂತರ, ಅವರ ಮುಂದಿನ ನಡೆ ಗೊತ್ತಾಗಲಿದೆ. ಅದು ನಂತರದ ಮಾತು. ಸದ್ಯ ‘ಕುಷ್ಕ’ ಬಗ್ಗೆ ಹೇಳುವುದಾದರೆ, ಈ ಚಿತ್ರ ಒಂದೂವರೆ ವರ್ಷಗಳ ಹಿಂದೆ ಪ್ರಾರಂಭವಾಗಿತ್ತು. ಗುರುಪ್ರಸಾದ್, ಸಂಜನಾ ಆನಂದ್, ಚಂದನ್ ಗೌಡ, ಶೋಭರಾಜ್, ರಾಕ್​ಲೈನ್ ಸುಧಾಕರ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದು, ವಿಕ್ರಮ್ ಯೋಗಾನಂದ್ ನಿರ್ದೇಶನ ಮಾಡಿದ್ದಾರೆ. ‘ಹೀಗೊಂದು ದಿನ’ ನಂತರ ವಿಕ್ರಮ್ ನಿರ್ದೇಶಿಸುತ್ತಿರುವ ಎರಡನೆಯ ಚಿತ್ರ ಇದು.

ತಮ್ಮ ಚಿತ್ರವನ್ನು ಕ್ರೖೆಮ್ ಕಾಮಿಡಿ ಎಂದು ಬಣ್ಣಿಸುವ ವಿಕ್ರಮ್ ‘ವಜ್ರದ ಹಿಂದೆ ಬೀಳುವ ವ್ಯಕ್ತಿಗಳ ಕಥೆ ಇಲ್ಲಿದೆ. ಇಲ್ಲಿರುವ ಪ್ರತಿ ಪಾತ್ರವೂ ಕ್ರೖೆಮ್ ಮಾಡಿದಾಗ, ಏನೆಲ್ಲ ಅನಾಹುತ ಆಗುತ್ತದೆ ಅನ್ನೋದೇ ಚಿತ್ರದ ಕಥೆ. ರೆಗ್ಯುಲರ್ ಫಾಮುಲಾ ಬಿಟ್ಟು ಹೊಸ ಪ್ರಯತ್ನ ಮಾಡಿದ್ದೇವೆ’ ಎಂದು ಹೇಳುತ್ತಾರೆ. ಚಿತ್ರದಲ್ಲಿ ನಾಯಕ, ನಾಯಕಿ ಅಂತೇನೂ ಇರುವುದಿಲ್ಲವಂತೆ. ಆದರೆ, ನಟ-ನಿರ್ದೇಶಕ ಗುರುಪ್ರಸಾದ್ ಈ ಚಿತ್ರದ ಪ್ರಮುಖ ಆಕರ್ಷಣೆ ಎನ್ನುವುದನ್ನು ಅವರು ಮರೆಯುವುದಿಲ್ಲ. ಇನ್ನು ಚಿತ್ರಕ್ಕೆ ‘ಕುಷ್ಕ’ ಎಂಬ ಶೀರ್ಷಿಕೆ ಹೇಗೆ ಸೂಕ್ತ ಎಂದರೆ, ಅದನ್ನೂ ಸಿನಿಮಾದಲ್ಲೇ ನೋಡಿ ಎನ್ನುತ್ತಾರೆ ಅವರು. ರಾಕ್​ಲೈನ್ ಸುಧಾಕರ್ ಅವರದ್ದು ಇಲ್ಲಿ ಕುಡುಕನ ಪಾತ್ರ.ಚಿತ್ರೀಕರಣ ಮರುದಿನ ಎನ್ನುವಾಗ, ಹಿಂದಿನ ದಿನ ನಿರ್ದೇಶಕರು ಕಾಲ್ ಮಾಡಿ ಪಾತ್ರದ ಬಗ್ಗೆ ಹೇಳಿದರಂತೆ. ಆದರೂ ತಮ್ಮ ಕೈಲಾದಷ್ಟೂ ಚೆನ್ನಾಗಿ ಮಾಡಿದೆ ಎನ್ನುವ ಅವರು, ಇದೊಂದು ಒಳ್ಳೆಯ ಚಿತ್ರ ಆಗುತ್ತದೆ ಎಂಬ ನಂಬಿಕೆ ಇಟ್ಟುಕೊಂಡಿದ್ದಾರೆ.

ಅಭಿಮಾನ್ ಗುಪ್ತ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಐರಾ ಫಿಲಂಸ್ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net