‘ಮಂಗಳಾಪುರ’ದಲ್ಲಿ ಗೌತಮಿ: ‘ಬಿಗ್‌ಬಾಸ್ ಸೀಸನ್ 11ರ’ ಬಳಿಕ ನಟಿ ಕಾಣಿಸಿಕೊಳ್ಳುತ್ತಿರುವ ಮೊದಲ ಸಿನಿಮಾ

gowthami
Published on

ಬೆಂಗಳೂರು: ‘ಸತ್ಯ’ ಧಾರಾವಾಹಿಯ ಖಡಕ್ ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೆ ಹೆಚ್ಚು ಪರಿಚಯವಾದರು ನಟಿ ಗೌತಮಿ ಜಾಧವ್. ಪಾತ್ರಕ್ಕೆ ಸಿಕ್ಕ ಜನಮೆಚ್ಚುಗೆಯಿಂದ ಅವರು ‘ಬಿಗ್‌ಬಾಸ್ ಕನ್ನಡ ಸೀಸನ್ 11ರ’ ಸ್ಪರ್ಧಿಯಾಗಿದ್ದರು. ಈ ಶೋ ಮುಗಿದ ತುಂಬಾ ದಿನಗಳ ಬಳಿಕ ಗೌತಮಿ ಹೊಸ ಸುದ್ದಿಯನ್ನು ತಂದಿದ್ದು, ಬೆಳ್ಳಿತೆರೆಯಲ್ಲಿ ಮತ್ತೊಮ್ಮೆ ಮಿಂಚಲು ಸಿದ್ಧವಾಗುತ್ತಿದ್ದಾರೆ. ಹೌದು, ನಟ ರಿಷಿ ಹಾಗೂ ಅಭಿಮನ್ಯು ಕಾಶೀನಾಥ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ‘ಮಂಗಳಾಪುರಂ’ ಚಿತ್ರಕ್ಕೆ ಗೌತಮಿ ಜಾಧವ್ ನಾಯಕಿಯಾಗಿ ಆಯ್ಕೆಯಾಗಿದ್ದು, ವಿಶೇಷ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಚಿತ್ರತಂಡ ಅವರನ್ನು ಸ್ವಾಗತಿಸಿದೆ. ಈ ಹಿಂದೆ ‘ಕಿನಾರೆ’, ‘ಆದ್ಯ’ ಚಿತ್ರದಲ್ಲಿ ನಟಿಸಿದ್ದ ಗೌತಮಿಗೆ ‘ಮಂಗಳಾಪುರಂ’ ಮೂರನೇ ಸಿನಿಮಾ. ಈ ಹಿನ್ನೆಲೆಯಲ್ಲಿ ಈ ಚಿತ್ರದ ಪಾತ್ರ ಹಾಗೂ ವಿಶೇಷತೆ ಕುರಿತು ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ. ‘‘ಬಿಗ್‌ಬಾಸ್’ ಬಳಿಕ ನನಗೆ ಹಲವು ಸಿನಿಮಾಗಳಿಗೆ ಅವಕಾಶ ಬಂದಿದ್ದವು. ಆಯ್ಕೆಯಲ್ಲಿ ನಾನೇ ತಾಳ್ಮೆ ವಹಿಸಿದ್ದೆ. ಇನ್ನು ‘ಮಂಗಳಾಪುರಂ’ ತಂಡದಲ್ಲಿ ಮೊದಲು ಪತಿ ಅಭಿಷೇಕ್ ಸೇರ್ಪಡೆಯಾಗಿದ್ದರು. ಬಳಿಕ ತಂಡ ಕೂಡ ನಟಿಯ ಹುಡುಕಾಟದಲ್ಲಿರುವಾಗ ನನ್ನ ಬಗ್ಗೆ ವಿಚಾರಿಸಿದ್ದಾರೆ. ಹಲವು ಹಂತಗಳ ಮಾತುಕತೆ ಹಾಗೂ ಲುಕ್‌ಟೆಸ್ಟ್ ಬಳಿಕ ಈ ಚಿತ್ರಕ್ಕೆ ಆಯ್ಕೆಯಾದೆ. ತುಂಬಾ ವರ್ಷಗಳ ಬಳಿಕ ಮತ್ತೆ ಬೆಳ್ಳಿತೆರೆಗೆ ಬರುತ್ತಿರುವುದು ಖುಷಿಯಿದೆ. ನನ್ನದು ಸುಕನ್ಯಾ ಪಾತ್ರ. ಇದೊಂದು ಮಂಗಳೂರು ಭಾಗದ ಕಥೆಯಾಗಿದೆ. ಸದ್ಯ ಪೋಸ್ಟರ್‌ನಲ್ಲಿ ಪರಿಚಯಿಸಿರುವ ಸ್ಟ್‌ಲುಕ್‌ಗಿಂತ ಪಾತ್ರ ಇನ್ನು ವಿಭಿನ್ನವಾಗಿದೆ. ಇಲ್ಲಿ ಪಾತ್ರಕ್ಕಿಂತ ಕಥೆಯೇ ಮುಖ್ಯ ಅನಿಸುತ್ತದೆ. ಇನ್ನು ರಿಷಿ ಹಾಗೂ ಅಭಿಮನ್ಯು ಕಾಶೀನಾಥ್ ಇಬ್ಬರು ನುರಿತ ಕಲಾವಿದರಿದ್ದಾರೆ. ಇದೇ ತಿಂಗಳ 29ಕ್ಕೆ ಸಿನಿಮಾಗೆ ಮುಹೂರ್ತ ನೆರವೇರಲಿದೆ. ಬಳಿಕ ವರ್ಕ್‌ಶಾಪ್ ನಡೆಯಲಿದೆ. 25-30 ದಿನಗಳ ಕಾಲ ನನ್ನ ಪಾತ್ರದ ಶೂಟಿಂಗ್ ಶೆಡ್ಯೂಲ್ ಪ್ಲಾನ್ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಪತ್ನಿಯ ಚಿತ್ರಕ್ಕೆ ಪತಿಯ ಕ್ಯಾಮರಾ: ಗೌತಮಿ ಜಾಧವ್ ಪತಿ ಅಭಿಷೇಕ್ ಕಾಸರಗೋಡು ಈ ಸಿನಿಮಾ ತಂಡದಲ್ಲಿದ್ದಾರೆ. ‘ಕಿನಾರೆ’ ಚಿತ್ರ ತೆರೆಕಂಡು 10 ವರ್ಷಗಳ ಬಳಿಕ ಗೌತಮಿ ಹಾಗೂ ಅಭಿಷೇಕ್ ಒಂದೇ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಗೌತಮಿ ಕ್ಯಾಮರಾ ಮುಂದೆ ಅಭಿನಯಿಸಿದರೆ, ಪತಿ ಅಭಿಷೇಕ್ ಕ್ಯಾಮರಾ ಹಿಂದೆ ಇದ್ದು ಮಾರ್ಗದರ್ಶನ ಮಾಡಲಿದ್ದಾರೆ. ಈ ಕಾರಣಕ್ಕೆ ಈ ಸಿನಿಮಾ ನನಗೆ ವಿಶೇಷ ಎನ್ನುತ್ತಾರೆ ಗೌತಮಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net