

ಬೆಂಗಳೂರು: ಅನಾರೋಗ್ಯದ ನಿಮಿತ್ತ ಕಳೆದ ವಾರ ‘ವಾರದ ಕಥೆ ಕಿಚ್ಚನ ಜತೆ’ ಏಪಿಸೋಡ್ಗೆ ಗೈರಾಗಿದ್ದ ಸುದೀಪ್, ಈ ವಾರವಾದರೂ, ಗುಣಮುಖರಾಗಿ ಮತ್ತೆ ಕ್ಯಾಮರಾ ಮುಂದೆ ಬಂದೇ ಬರುತ್ತಾರೆ ಎಂದು ಸಾಕಷ್ಟು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ, ಈ ವಾರವೂ ಸುದೀಪ್ ‘ಬಿಗ್ಬಾಸ್’ನಿಂದ ದೂರ ಉಳಿಯಲಿದ್ದಾರೆ!
ಹೌದು, ಕನ್ನಡದಲ್ಲಿ ‘ಬಿಗ್ಬಾಸ್’ ರಿಯಾಲಿಟಿ ಶೋ ಅಂದ ತಕ್ಷಣ ಮೊದಲಿಗೆ ನೆನಪಿಗೆ ಬರುವುದು ‘ಕಿಚ್ಚ’ ಸುದೀಪ್. ತಮ್ಮ ವಿಭಿನ್ನ ನಿರೂಪಣಾ ಶೈಲಿ, ಮಾತುಗಾರಿಕೆ ಮೂಲಕವೇ ಈ ಕಾರ್ಯಕ್ರಮವನ್ನು ಅವರು ಎಂಟನೇ ಸೀಸನ್ವರೆಗೆ ಹೊತ್ತು ತಂದಿದ್ದಾರೆ. ಆದರೆ, ಈ ಎಂಟು ವರ್ಷಗಳಲ್ಲಿ ಅವರು ಯಾವತ್ತೂ ಕಾರ್ಯಕ್ರಮ ಮಿಸ್ ಮಾಡಿಕೊಂಡಿರಲಿಲ್ಲ. ಕಳೆದ ವಾರ ಮೊದಲ ಬಾರಿಗೆ ಅನಾರೋಗ್ಯದಿಂದ ಮಿಸ್ ಆಗಿದ್ದರು. ಈ ವಾರಾಂತ್ಯದ ಕಂತುಗಳಲ್ಲೂ ಸುದೀಪ್ ಇರುವುದಿಲ್ಲ. ಈ ಬಗ್ಗೆ ಸುದೀಪ್ಗೂ ಬೇಸರವಾಗಿದ್ದು, ಸುಧಾರಿಸಿಕೊಳ್ಳಲು ಇನ್ನಷ್ಟು ಕಾಲಾವಕಾಶ ಬೇಕಾಗಿದೆ ಎಂದಿದ್ದಾರೆ.
‘ಈ ಸಲವೂ ‘ವಾರದ ಕಥೆ ಕಿಚ್ಚನ ಜತೆ’ಯಲ್ಲಿ ನಾನಿರುವುದಿಲ್ಲ. ವೇದಿಕೆ ಮೇಲೆ ಸ್ಪರ್ಧಿಗಳ ಜತೆ ಮಾತನಾಡಲು ಅಣಿಯಾಗಬೇಕೆಂದರೆ, ಇನ್ನೊಂದಿಷ್ಟು ದಿನಗಳ ಕಾಲಾವಕಾಶದ ಅವಶ್ಯಕತೆ ಇದೆ. ಇಂಥ ಸಂದರ್ಭದಲ್ಲಿ ಚಿತ್ರೀಕರಣವನ್ನೇ ರದ್ದುಗೊಳಿಸಿದ ಕಲರ್ಸ್ ಕನ್ನಡಕ್ಕೆ ಮತ್ತು ನಿಮ್ಮೆಲ್ಲರ ಪ್ರಾರ್ಥನೆಗೆ ನನ್ನ ಧನ್ಯವಾದ’ ಎಂದಿದ್ದಾರೆ. ಅಂದಹಾಗೆ, ಕಳೆದ ವಾರದ ರೀತಿಯಲ್ಲಿಯೇ ಈ ಸಲವೂ ಕಡಿಮೆ ಮತ ಪಡೆದ ಒಬ್ಬ ಸ್ಪರ್ಧಿ ಮನೆಯಿಂದ ಹೊರಬರಲಿದ್ದಾರೆ.