ನಿಮ್ಮನ್ನು ಬಿಟ್ಟರೆ ಯಾರು ಬಿಗ್​ಬಾಸ್​ ನಿರೂಪಣೆ ಮಾಡಬಹುದು? ಸುದೀಪ್​ ಕೊಟ್ಟ ಖಡಕ್​ ಉತ್ತರ ಹೀಗಿತ್ತು…

Kichcha Sudeepa
Published on

ಬೆಂಗಳೂರು: ಬಿಗ್​ಬಾಸ್​ ಸೀಸನ್​ 11ಕ್ಕೆ (Bigg Boss Kannada 11) ದಿನಗಣನೆ ಆರಂಭವಾಗಿದೆ. ಸೆ. 29ರಿಂದ ಬಿಗ್​ಬಾಸ್​ ಸೀಸನ್​ 11 (BBK11) ಆರಂಭವಾಗಲಿದ್ದು, ಈ ಬಾರಿಯೂ ನಟ ಕಿಚ್ಚ ಸುದೀಪ್ (Kichcha Sudeepa)​ ಅವರೇ ನಿರೂಪಣೆ ಮಾಡುವುದು ಖಚಿತವಾಗಿದೆ. ಆದರೆ, ಕೆಲ ದಿನಗಳ ಹಿಂದೆ ಒಂದು ವದಂತಿ ಹಬ್ಬಿತ್ತು. ಅದೇನೆಂದರೆ, ಸುದೀಪ್ ಈ ಬಾರಿ ನಿರೂಪಣೆ ಮಾಡುವುದಿಲ್ಲ ಅವರ, ಬದಲಿಗೆ ಬೇರೆ ಕಲಾವಿದರು ನಿರೂಪಣೆ ಮಾಡಲಿದ್ದಾರೆ ಎಂಬ ವಿಷಯ ಬಹಳ ಚರ್ಚೆಯಾಗಿತ್ತು. ಈ ನಡುವೆ ನಟ ರಿಷಬ್​ ಶೆಟ್ಟಿ, ಉಪೇಂದ್ರ ಮತ್ತು ರಮೇಶ್​ ಅರವಿಂದ್​ ಹೆಸರು ಸಹ ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಸುದೀಪ್​ ಅವರೇ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎನ್ನುವ ಮೂಲಕ ವದಂತಿಗೆ ಕಲರ್ಸ್​ ಕನ್ನಡ ವಾಹಿನಿ ಪೂರ್ಣ ವಿರಾಮ ಹಾಕಿದೆ.

ತಾಜಾ ಸಂಗತಿ ಏನೆಂದರೆ, ನಿನ್ನೆಯಷ್ಟೇ ಕಲರ್ಸ್​ ಕನ್ನಡ ವಾಹಿನಿ ವತಿಯಿಂದ ಬಿಗ್​ಬಾಸ್​ ಸೀಸನ್​ 11ರ ಕುರಿತು ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಸುದೀಪ್​ ಅವರಿಗೆ ಬಹಳ ವಿಶೇಷವಾದ ಪ್ರಶ್ನೆಯೊಂದು ಎದುರಾಯಿತು. ಈ ಸೀಸನ್​ ಅನ್ನು ನಿರೂಪಣೆ ಮಾಡುವುದಕ್ಕೆ ನಾನು ರೆಡಿ ಇರಲಿಲ್ಲ ಎಂದು ನೀವು ಹೇಳಿದ್ರಿ. ಒಂದು ವೇಳೆ ಮುಂದಿನ ಸೀಸನ್​ ಸಂದರ್ಭದಲ್ಲಿ ನಿರೂಪಣೆ ಮಾಡೋದೇ ಇಲ್ಲ ಅಂತ ನೀವು ನಿರ್ಧಾರ ಮಾಡಿದರೆ ಮತ್ತು ನಿಮ್ಮ ಸ್ಥಾನಕ್ಕೆ ಬೇರೆ ಯಾರನ್ನಾದರೂ ನೀವೇ ಆಯ್ಕೆ ಮಾಡಿ ಎಂದು ಕಲರ್ಸ್​ ಕನ್ನಡದವರು ಕೇಳಿದರೆ ಯಾವ ನಟರ ಹೆಸರನ್ನು ಸೂಚಿಸುತ್ತೀರಾ ಎಂದು ವರದಿಗಾರರೊಬ್ಬರು ಪ್ರಶ್ನೆ ಕೇಳಿದರು.

ಈ ಪ್ರಶ್ನೆಗೆ ಉತ್ತರಿಸಿದ ಸುದೀಪ್​, ಸಿನಿಮಾದಲ್ಲಿ ಕತೆ ಹೇಳಲು ಯಾರಾದರೂ ನನ್ನ ಬಳಿ ಬಂದಾಗ ಕತೆ ಕೇಳಿದ ಬಳಿಕ ನಾನು ಮಾಡಲ್ಲ ನೀವು ಅವರ ಬಳಿ ಹೋಗಿ, ಅವರು ಮಾಡುತ್ತಾರೆ ಎಂದು ನಾನು ಹೇಳ್ತೀನಾ? ಮಾಡಲ್ಲ ಅಂತೀನಿ ಅಷ್ಟೇ. ಕತೆ ನನಗೆ ಇಷ್ಟವಾಗಲಿಲ್ಲ ಎನ್ನಬಹುದು ಅಥವಾ ನನ್ನಿಂದ ಮಾಡಲು ಸಾಧ್ಯವಿಲ್ಲ ಎಂದು ಹೇಳಬಹುದಷ್ಟೇ. ಆ ನಂತರದ ನಿರ್ಧಾರ ಅವರವರಿಗೆ ಬಿಟ್ಟಿದ್ದಾಗಿರುತ್ತದೆ. ಈ ವಿಚಾರದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಅವರಿಗೆ ಇರುತ್ತದೆ. ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಸದ್ಯಕ್ಕೆ ನನ್ನ ಗಮನ ಬಿಗ್​ಬಾಸ್​ ಸೀಸನ್​ 11ರ ಮೇಲಿದೆ. ಈ ಸೀಸನ್​ ನಮ್ಮ ಬಳಿ ಇರಬೇಕಾದರೆ ಇದನ್ನು ಹೇಗೆ ಮಾಡಬೇಕೆಂದು ಚಿಂತಿಸುತ್ತೇನೆ ಹೊರತು ಮುಂದಿನ ಸೀಸನ್​ ಬಗ್ಗೆ ಚಿಂತಿಸುವುದಿಲ್ಲ. ಒಂದು ವೇಳೆ ಮುಂದಿನ ಸೀಸನ್​ ಸಂದರ್ಭದಲ್ಲಿ ಅವರೇನಾದರೂ ನನ್ನ ಬಳಿ ಬಂದು ಕೇಳಿದರೆ ಮತ್ತು ಅವರ ಮಾತುಗಳು ನನಗೆ ಮನವರಿಕೆಯಾದರೆ ಆ ಸೀಸನ್​ ಕೂಡ ನಾನು ಮಾಡಬಹುದು ಎಂದು ಸುದೀಪ್​ ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕಲರ್ಸ್​ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್​ ಪ್ರಶಾಂತ್ ನಾಯಕ್, ಶೋ ಆರಂಭಕ್ಕೂ ಮುನ್ನವೇ ಈ ಬಾರಿ ಸ್ಪರ್ಧಿಗಳ ಹೆಸರನ್ನು ಬಹಿರಂಗಪಡಿಸುತ್ತೇವೆ ಎಂದರು. ಶನಿವಾರ (ಸೆ.28) ನಡೆಯಲಿರುವ ರಾಜಾ ರಾಣಿ ಗ್ರ್ಯಾಂಡ್​ ಫಿನಾಲೆಯಲ್ಲಿ ಬಿಗ್​ಬಾಸ್​ ಸೀಸನ್​ 11ರ ಕೆಲ ಸ್ಪರ್ಧಿಗಳ ಹೆಸರನ್ನು ಬಹಿರಂಗಪಡಿಸುವುದಾಗಿ ಪ್ರಶಾಂತ್ ನಾಯಕ್ ಹೇಳಿದರು. ಅಲ್ಲದೆ, ಈ ಬಾರಿಯ ಶೋನಲ್ಲಿ ಸ್ವರ್ಗ ಮತ್ತು ನರಕ ಎಂಬ ಪರಿಕಲ್ಪನೆ ಇರಲಿದೆ. ಇದೇ ಈ ಬಾರಿಯ ಹೊಸತನ. ಸ್ಪರ್ಧಿಗಳು ಸ್ವರ್ಗಕ್ಕೆ ಹೋಗಬೇಕೋ ಅಥವಾ ನರಕಕ್ಕೆ ಹೋಗಬೇಕೋ ಎಂಬುದನ್ನು ನಿರ್ಧರಿಸಲು ವೀಕ್ಷಕರು ಮತ ಚಲಾಯಿಸಬಹುದು ಎಂದು ಪ್ರಶಾಂತ್​ ನಾಯಕ್​ ತಿಳಿಸಿದರು.

ಇನ್ನು ಈ ಬಾರಿ ಬಿಗ್​ಬಾಸ್​ನಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ಕುತೂಹಲವೂ ಎಲ್ಲರಲ್ಲಿದೆ. ಸದ್ಯದ ಮಾಹಿತಿ ಪ್ರಕಾರ ಕೆಲ ಸಂಭಾವ್ಯ ಸ್ಪರ್ಧಿಗಳ ಹೆಸರು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಸೋಶಿಯಲ್​ ಮೀಡಿಯಾ ಸ್ಟಾರ್​ ವರ್ಷಾ ಕಾವೇರಿ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಇತ್ತೀಚೆಗಷ್ಟೇ ನಟ ಹಾಗೂ ಸೋಶಿಯಲ್​ ಮೀಡಿಯಾ ಸ್ಟಾರ್​ ವರುಣ್​ ಆರಾಧ್ಯ ಜತೆ ಲವ್​ ಬ್ರೇಕಪ್​ ಮಾಡಿಕೊಂಡು ವರ್ಷಾ ಕಾವೇರಿ ಸುದ್ದಿಯಾಗಿದ್ದರು. ನಟಿ ಪ್ರೇಮಾ ಅವರ ಹೆಸರು ಸಹ ಕೇಳಿಬರುತ್ತಿದೆ. ಸಿನಿಮಾಗಳಿಂದ ಅಂತರ ಕಾಯ್ದುಕೊಂಡು ಕಿರುತೆರೆ ಲೋಕದಲ್ಲಿ ಸಕ್ರಿಯರಾಗಿರುವ ಪ್ರೇಮಾ, ಬಿಗ್‌ ಬಾಸ್‌ ಸೀಸನ್‌‌ 11ಕ್ಕೆ ಗ್ರ್ಯಾಂಡ್‌ ಎಂಟ್ರಿ ಕೊಡ್ತಿದ್ದಾರೆ ಎನ್ನುವ ಚರ್ಚೆ ಸೋಷಿಯಲ್‌ ಮೀಡಿಯಾದಲ್ಲಿ ಶುರುವಾಗಿದೆ.

ಹಾಸ್ಯನಟ ರಾಘವೇಂದ್ರ, ತುಕಾಲಿ ಸಂತೋಷ್​ ಪತ್ನಿ ಮಾನಸ, ನಟಿ ಹಾಗೂ ಮಾಡೆಲ್​ ಜ್ಯೋತಿ ರೈ, ನಟಿ ಹಾಗೂ ಕನ್ನಡ ಹೋರಾಟಗಾರ್ತಿ ಅಶ್ವಿನಿ ಗೌಡ, ಸೋಶಿಯಲ್​ ಮೀಡಿಯಾ ಸ್ಟಾರ್​ ನಾಗರಾಜ್​ ಕುಡಪಲ್ಲಿ, ನಟಿ ಪ್ರಿಯಾ ಶಠಮರ್ಷಣ, ಕಾಮಿಡಿಯನ್​ ಮುಕಳೆಪ್ಪ, ನಟಿ ಪ್ರಿಯಾ ಸವದಿ, ಕಾಮಿಡಿಯನ್​ ಶಿವಪುತ್ರ, ಯುವ ರಾಜಕಾರಣಿ ನಿಶಾ ಯೋಗೇಶ್ವರ್​, ರಾಜಕಾರಣಿ ಮೊಹಮ್ಮದ್ ನಲಪಾಡ್​ ಹ್ಯಾರಿಸ್​, ನಟ ತ್ರಿವಿಕ್ರಮ್, ಸುನಿಲ್ ರಾವ್, ಭವ್ಯ ಗೌಡ, ಮೋಕ್ಷಾ ಪೈ ಹಾಗೂ ರೀಲ್ಸ್ ರೇಷ್ಮಾ ಹೀಗೆ ಬಹುತೇಕರ ಹೆಸರುಗಳು ಕೇಳಿ ಬರ್ತಿವೆ. ಖ್ಯಾತ ಯೂಟ್ಯೂಬರ್​ ಡಾ. ಬ್ರೋ ಹೆಸರು ಕೂಡ ಕೇಳಿಬಂದಿದೆ. ಆದರೆ, ಮೂರು ತಿಂಗಳ ಕಾಲ ಒಂದೇ ಕಡೆ ಇರಲು ನನ್ನಿಂದ ಸಾಧ್ಯವಿಲ್ಲ ಎಂದು ಡಾ. ಬ್ರೋ ಹೇಳಿದ್ದಾರೆ. ಒಂದು ವೇಳೆ ಅವರು ಬಂದರೂ ಕೂಡ ಅಚ್ಚರಿಪಡಬೇಕಿಲ್ಲ.

ಇನ್ನು ಮಾಧ್ಯಮ ಲೋಕದ ಆ್ಯಂಕರ್​ಗಳಾದ ಸುಕನ್ಯ, ಜಯಪ್ರಕಾಶ್​ ಶೆಟ್ಟಿ, ಅಜಿತ್​ ಹನುಮಕ್ಕನವರ್​, ಹರೀಶ್​ ನಾಗರಾಜು ಹಾಗೂ ರಾಧಾ ಹೀರೇಗೌಡರ್​ ಹೆಸರುಗಳು ಕೂಡ ಕೇಳಿಬರುತ್ತಿವೆ. ಆದರೆ, ಅಂತಿಮವಾಗಿ ಯಾರು ಮನೆಯ ಒಳಗೆ ಪ್ರವೇಶಿಸುತ್ತಾರೆ ಎಂಬುದು ತಿಳಿದುಕೊಳ್ಳಲು ಸೆ.29ರವರೆಗೆ ಕಾಯಬೇಕಿದೆ. ನಿಮ್ಮ ಪ್ರಕಾರ ಯಾರೆಲ್ಲ ಬಿಗ್​ಬಾಸ್​ ಮನೆಯನ್ನು ಪ್ರವೇಶಿಸಬಹುದು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net