

ಬೆಂಗಳೂರು: ಸಾಮಾಜಿಕ ಜಾಲತಾಣವನ್ನು ಹೆಚ್ಚು ಬಳಸುವವರಿಗೆ ಸೋನು ಶ್ರೀನಿವಾಸ ಗೌಡರನ್ನು ಪರಿಚಯಿಸುವ ಅಗತ್ಯವಿಲ್ಲ. ಏಕೆಂದರೆ, ಆಕೆಯ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ವಿಡಿಯೋಗಳು ಮತ್ತು ಮೀಮ್ಸ್ ಯಾವಾಗಲೂ ಹರಿದಾಡುತ್ತಲೇ ಇರುತ್ತವೆ. ಪ್ರತಿಭೆಯಿಂದ ಗುರುತಿಸಿಕೊಳ್ಳಲು ಸಾಧ್ಯವಾಗದೇ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡಿರುವ ಮತ್ತು ಮಾಡುತ್ತಿರುವ ಸೋನು, ಇದೇ ವಿವಾದಗಳ ಕಾರಣಕ್ಕೆ ವಿವಾದಿತ ಬಿಗ್ಬಾಸ್ ಶೋನಲ್ಲೂ ಭಾಗವಹಿಸಿದ್ದು ಬಹುತೇಕರಿಗೆ ತಿಳಿದಿದೆ.
ತಾಜಾ ಸಂಗತಿಯೇನೆಂದರೆ ಸೋನು ಶ್ರೀನಿವಾಸ ಗೌಡ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಆದರೆ, ಈ ಬಾರಿ ಅವರು ಯಾವುದೇ ವಿವಾದವನ್ನು ಮಾಡಿಕೊಂಡಿಲ್ಲ. ಬದಲಾಗಿ ಗ್ಲಾಮರಸ್ ಫೋಟೋ ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿ ಏರಿಸಿದ್ದಾರೆ. ಅಲ್ಲದೆ, ಕೆಲವರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.
ಸೋನು ಶ್ರೀನಿವಾಸ ಗೌಡ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸಿಗರ ಸ್ವರ್ಗ ಮಾಲ್ಡೀವ್ಸ್ನಲ್ಲಿ ಬೀಡು ಬಿಟ್ಟಿರುವ ಸೋನು, ಪ್ರಕೃತಿಯ ಮಡಿಲಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಮಾಲ್ಡೀವ್ಸ್ಗೆ ಯಾರೇ ಆಗಲಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಏನಾದರೂ ಒಂದು ಅಪ್ಡೇಟ್ ಕೊಡಲೇಬೇಕು. ಇಲ್ಲದಿದ್ದರೆ, ಅವರ ಪ್ರವಾಸ ಪೂರ್ಣವಾಗುವುದೇ ಇಲ್ಲ. ಇದೀಗ ಸೋನು ಗೌಡ ಸಹ ಹಾಟ್ ಫೊಟೋಗಳನ್ನು ಇನ್ಸ್ಟಾಗ್ರಾಂನ್ಲಲಿ ಹರಿಬಿಟ್ಟಿದ್ದಾರೆ.
ಒಂದು ಕೈಯಲ್ಲಿ ಕೋಕೋ ಕೋಲಾ ಡ್ರಿಂಕ್ಸ್ ಗ್ಲಾಸ್ ಹಿಡಿದಿರುವ ಫೋಟೋಗಳು ಹಾಗೂ ಕಪ್ಪು ಬಣ್ಣದ ಸ್ವಿಮ್ ಶೂಟ್ ಧರಿಸಿ ಸೋನು ಗೌಡ ಕ್ಯಾಮೆರಾ ಮುಂದೆ ಹಾಟ್ ಅವತಾರಗಳಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಸಾವಿರಾರು ಲೈಕ್ಸ್ ಬಂದಿವೆ. ಆದರೆ, ಸೋನು ಅವರ ಹಾಟ್ ಅವತಾರಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಸಾಕಷ್ಟು ನೆಟ್ಟಿಗರು ಅಶ್ಲೀಲ ಕಾಮೆಂಟ್ಗಳ ಮೂಲಕ ಸೋನು ಅವರನ್ನು ನಿಂದಿಸಿದ್ದಾರೆ. ಇನ್ನು ಕೆಲವರು ಸೋನು ಬೆಂಬಲಕ್ಕೆ ನಿಂತಿದ್ದು, ಅವರ ಜೀವನ ಅವರ ಇಷ್ಟ ಎಂದಿದ್ದಾರೆ. ಕೆಟ್ಟ ಕಾಮೆಂಟ್ಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.
ವಿವಾದಗಳು ಹಾಗೂ ಬಿಗ್ಬಾಸ್ ಸ್ಪರ್ಧೆಯಿಂದ ಪಡೆದು ಖ್ಯಾತಿಯಿಂದ ಸೋನು ಶ್ರೀನಿವಾಸ್ ಗೌಡ ಅವರಿಗೆ ಸಿನಿಮಾ ಆಫರ್ಗಳು ಬರುತ್ತಿವೆ. ಬರೀ ಸಿನಿಮಾ ಮಾತ್ರವಲ್ಲ, ವೆಬ್ ಸಿರೀಸ್ ಮತ್ತು ಶಾರ್ಟ್ ಸಿನಿಮಾಗಳಲ್ಲೂ ಈಕೆ ಬಣ್ಣ ಹಚ್ಚಿದ್ದಾರಂತೆ. ಟಿಕ್ಟಾಕ್ ಮಾಡಿದಷ್ಟು ಸುಲಭವಲ್ಲ ಈ ಸಿನಿಮಾವೆಂದು ಆಕೆ ಹೇಳಿಕೊಂಡಿದ್ದಾರೆ. ಕ್ಯಾಡ್ಬರೀಸ್ ಜತೆಗೆ ಅನೇಕ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿದೆ. ಎಲ್ಲ ಸಿನಿಮಾಗಳಲ್ಲೂ ಬೋಲ್ಡ್ ಪಾತ್ರವನ್ನೇ ಮಾಡುವಂತೆ ಕೇಳುತ್ತಿದ್ದಾರೆ. ಆದರೆ ಈಗ ಅದರಿಂದಲೇ ಆರಂಭಿಸಿದರೆ ಮುಂದೆ ಬೇರೆ ಪಾತ್ರಗಳಿಗೆ ಅವಕಾಶ ಸಿಗುವುದಿಲ್ಲವೆಂದು ನಾನೇ ಸುಮ್ಮನಾಗಿದ್ದೇನೆ. ಬೇರೆ ರೀತಿಯ ಪಾತ್ರಗಳನ್ನು ಮಾಡುತ್ತೇನೆ ಎಂದು ಆಕೆ ಈ ಹಿಂದೆ ಹೇಳಿಕೊಂಡಿದ್ದರು.