ಅಂದುಕೊಂಡಿದ್ದೆ ಒಂದು ಆಗಿದ್ದು ಮತ್ತೊಂದು! 15 ಲಕ್ಷ ರೂ. ಕಳ್ಕೊಂಡು ಕಣ್ಣೀರಿಟ್ಟ ನಟಿ ಕಿರಣ್​ ರಾಥೋಡ್​

Kiran Rathore
Published on

ಹೈದರಾಬಾದ್​: ಕ್ಷಣ ಕ್ಷಣ, ಗನ್​ ಮತ್ತು ಮಾಣಿಕ್ಯ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ಕಿರಣ್​ ರಾಥೋಡ್ ಅವರು ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ಆದರೆ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದು, ಅಲ್ಲಿನ ಮಂದಿಗೆ ಹೆಚ್ಚು ಹತ್ತಿರವಾಗಿದ್ದಾರೆ. ತಮ್ಮ ಬೋಲ್ಡ್​ ಪಾತ್ರಗಳಿಂದಲೂ ಕಿರಣ್​ ಖ್ಯಾತಿ ಪಡೆದಿದ್ದರು. ಇತ್ತೀಚಿನ ದಿನಗಳಲ್ಲಿ ಅವಕಾಶಗಳು ಇಲ್ಲದಿರುವುದರಿಂದ ಸಿನಿ ಲೋಕದಿಂದ ದೂರವಿರುವ ಕಿರಣ್​, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ.

ತಾಜಾ ಸಂಗತಿ ಏನೆಂದರೆ 15 ಲಕ್ಷ ರೂಪಾಯಿ ಕಳೆದುಕೊಂಡಿರುವುದಾಗಿ ನಟಿ ಕಿರಣ್​ ರಾಥೋಡ್​ ಅಳಲು ತೋಡಿಕೊಂಡಿದ್ದಾರೆ. ಪ್ರಸ್ತುತ ಫ್ರಾನ್ಸ್​ನಲ್ಲಿ ಪ್ರತಿಷ್ಠಿತ ಕಾನ್ಸ್ ಚಲನಚಿತ್ರೋತ್ಸವ ನಡೆಯುತ್ತಿದೆ. ಹೀಗಾಗಿ ಕಿರಣ್ ರಾಥೋಡ್ ಅವರು ಅಲ್ಲಿಗೆ ಹೋಗಬೇಕಿದೆ. ಈಗಾಗಲೇ ಅವರ ತಂಡ ಅಲ್ಲಿಗೆ ಹೋಗಿದೆ. ಕಿರಣ್​ ಅವರು ಮೇ 13 ರಂದೇ ಫ್ರಾನ್ಸ್‌ಗೆ ಹೋಗಬೇಕಾಗಿತ್ತು. ಇದಕ್ಕಾಗಿ ಕಳೆದ ತಿಂಗಳು ವೀಸಾಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇನ್ನೂ ವೀಸಾ ಬಂದಿಲ್ಲ. ಹೋಟೆಲ್ ಬುಕ್ಕಿಂಗ್, ಟ್ರಾವೆಲ್ ಬುಕ್ಕಿಂಗ್ ಎಲ್ಲವನ್ನೂ ಈಗಾಗಲೇ ಮಾಡಿದ್ದಾರೆ. ಇದಕ್ಕಾಗಿ 15 ಲಕ್ಷ ರೂ. ಖರ್ಚು ಮಾಡಿದ್ದಾರೆ. ಆದರೆ, ಇನ್ನೂ ವೀಸಾ ಸಿಗದ ಕಾರಣ ಕಿರಣ್​ ಅವರು ತುಂಬಾ ಒತ್ತಡದಲ್ಲಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ತನ್ನ ದುಃಖವನ್ನು ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಕಿರಣ್​, ನಾನು ಮೇ 13 ರಂದು ಕಾನ್ಸ್ ಚಲನಚಿತ್ರೋತ್ಸವಕ್ಕೆ ಹೋಗಬೇಕಾಗಿತ್ತು. ನಮ್ಮ ತಂಡವು ಈಗಾಗಲೇ ಅಲ್ಲಿಗೆ ತಲುಪಿದೆ. ನಾನು ಒಂದು ತಿಂಗಳಿಂದ ವೀಸಾಗಾಗಿ ಕಾಯುತ್ತಿದ್ದೇನೆ. ಮುಂಗಡವಾಗಿ ಹೊಟೇಲ್ ಬುಕ್ಕಿಂಗ್ ಮತ್ತು ಟ್ರಾವೆಲ್ ಬುಕ್ಕಿಂಗ್ ವೆಚ್ಚಕ್ಕಾಗಿ ಈಗಾಗಲೇ ರೂ.15 ಲಕ್ಷ ಖರ್ಚು ಮಾಡಿದ್ದೇನೆ. ಇದರಿಂದಾಗಿ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇನೆ ಮತ್ತು ತುಂಬಾ ನೋವು ಅನುಭವಿಸಿದ್ದೇನೆ. ಸಂಬಂಧಪಟ್ಟ ವೀಸಾ ಏಜೆನ್ಸಿ ಇದಕ್ಕೆ ಉತ್ತರಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

ಕಿರಣ್​ಗೆ ನಡೆದ ಈ ಘಟನೆಯಿಂದ ಹಲವರು ಹುಬ್ಬೇರಿಸಿದ್ದಾರೆ. ಕಿರಣ್​ ಅವರಿಗೆ ಯಾಕೆ ವೀಸಾ ಕೊಟ್ಟಿಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸೆಲೆಬ್ರಿಟಿಗಳಿಗೆ ಇಂತಹ ಸನ್ನಿವೇಶಗಳು ಎದುರಾದರೆ, ಸಾಮಾನ್ಯ ಜನರು ವಿದೇಶಕ್ಕೆ ಹೋಗುವುದು ಇನ್ನೂ ಕಷ್ಟ ಎಂದು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. ಕಿರಣ್ ರಾಥೋಡ್​ಗೆ ಇನ್ನಾದರೂ ವೀಸಾ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net