

ಬೆಂಗಳೂರು: ‘‘ಬಿಗ್ ಬಾಸ್’ನಿಂದ ಹೊರಬಂದ ಮೇಲೆ ಶಾಕಿಂಗ್ ಸುದ್ದಿಗಳೇ ನನ್ನ ಕಿವಿಗೆ ಬಿದ್ದಿವೆ. ಮನೆಯಲ್ಲಿ ಅಜ್ಜಿ ತೀರಿಹೋಗಿದ್ದರು. ನಮ್ಮ ‘ಅರ್ಜುನ್ ಗೌಡ’ ಚಿತ್ರದ ನಿರ್ವಪಕ ರಾಮು ಅವರೂ ಇಲ್ಲವಾಗಿದ್ದರು. ಒಂದು ಕ್ಷಣ ನಾವು ಯಾವ ಪರಿಸ್ಥಿತಿಯಲ್ಲಿದ್ದೇವೆ ಎಂದೆನಿಸಿತ್ತು’- ಬಿಗ್ ಮನೆಯಿಂದ ಹೊರಬಂದ ಬಳಿಕ ನಟಿ ಪ್ರಿಯಾಂಕಾ ತಿಮ್ಮೇಶ್ಗೆ ಎದುರಾದ ಸಂದಿಗ್ಧ ಪರಿಸ್ಥಿತಿ ಇದು. ‘ಬಿಗ್ ಬಾಸ್’ ಸೀಸನ್ 8ರ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದ ಪ್ರಿಯಾಂಕಾ, 30 ದಿನಗಳನ್ನು ಆ ಮನೆಯಲ್ಲಿ ಕಳೆದಿದ್ದಾರೆ.
ಆ ಕಿರುಪಯಣವನ್ನು ಮೆಲುಕು ಹಾಕಿರುವ ಅವರು, ‘‘ಬಿಗ್ ಬಾಸ್’ ಅವಕಾಶ ಸಿಗುವುದೇ ವಿರಳ. ಆ ಚಾನ್ಸ್ ನೀಡಿದ್ದಕ್ಕೆ ಕಲರ್ಸ್ ವಾಹಿನಿಗೆ ಧನ್ಯವಾದ ಹೇಳುತ್ತೇನೆ. ವೈಲ್ಡ್ ಕಾರ್ಡ್ ಎಂಟ್ರಿ ಎಂದರೆ ಮನೆಯಲ್ಲಿನ ಮಂದಿ ನೋಡುವ ರೀತಿಯೇ ಬೇರೆಯಾಗುತ್ತದೆ. ಆರಂಭದಲ್ಲಿ ನನಗೂ ಹಾಗೇ ಅನಿಸಿತು. ನನ್ನ ನೇರ ಮಾತುಗಳು ಒಂದಷ್ಟು ಜನರಿಗೆ ಹಿಡಿಸಲಿಲ್ಲ. ಓವರ್ ಆಕ್ಟಿಂಗ್, ಆಟಿಟ್ಯೂಡ್ ಜಾಸ್ತಿನೇ ಇದೆ ಎಂದಿದ್ದರು. ಆದರೆ, ಹೊರಬಂದ ಮೇಲೆ ನನಗೆ ಸ್ಟ್ರೇಟ್ ಫಾರ್ವರ್ಡ್ ಪ್ರಿಯಾಂಕಾ ಎಂದೇ ಎಲ್ಲರೂ ಕರೆಯುತ್ತಿದ್ದಾರೆ. ಆ ಗಳಿಗೆಯಲ್ಲಿ ನನ್ನ ಪ್ರತಿಕ್ರಿಯೆ ಸರಿಯಾಗಿಯೇ ಇತ್ತು ಎನ್ನುತ್ತಿದ್ದಾರೆ. ಇದಕ್ಕಿಂತ ಖುಷಿ ಇನ್ನೇನು ಬೇಕು’ ಎಂಬುದು ಪ್ರಿಯಾಂಕಾ ಮಾತು. ‘ಶೋ ಸ್ಥಗಿತಗೊಳ್ಳಲಿದೆ ಎಂದಾಗ, ಹೊರಗಡೆಯ ಪರಿಸ್ಥಿತಿ ಹೇಗಿರಬಹುದು ಎಂದು ಊಹಿಸಿದ್ದೆ. ಹೊರಗೆ ಬಂದ ಮೇಲೆ ಇಲ್ಲಿನ ಸ್ಥಿತಿ ನೋಡಿ, ‘ಬಿಗ್ ಬಾಸ್’ ಮನೆಯಲ್ಲಿಯೇ ಇರಬೇಕಿತ್ತು ಅನಿಸಿತ್ತು. ಈ ನಡುವೆ ಸಾಕಷ್ಟು ಆಪ್ತರನ್ನು ಕಳೆದುಕೊಂಡಿದ್ದೇನೆ. ಅಜ್ಜಿಯ ನಿಧನ, ನಿರ್ವಪಕ ರಾಮು ಅವರ ಸಾವು ಸಾಕಷ್ಟು ನೋವು ತರಿಸಿದೆ’ ಎನ್ನುತ್ತಾರೆ.