ನಾನು ಬಜಾರಿ ಅಲ್ಲ...; ‘ಬಿಗ್​ಬಾಸ್’ನಿಂದ ಹೊರಬಿದ್ದ ಚಂದ್ರಕಲಾ ಪ್ರತಿಕ್ರಿಯೆ

Bajari
Published on

ಬೆಂಗಳೂರು: ‘ಬಿಗ್​ಬಾಸ್’ ಸೀಸನ್ 8ರ ನಾಲ್ಕನೇ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಹಿರಿಯ ನಟಿ ಚಂದ್ರಕಲಾ ಮೋಹನ್ ಮನೆಯಿಂದ ಹೊರಬಂದಿದ್ದಾರೆ. 30 ದಿನಗಳ ಕಾಲ ಬಿಗ್​ವುನೆಯ ಭಾಗವಾಗಿದ್ದ ಅವರು, ಇದೀಗ ಆ ಪಯಣವನ್ನು ಮುಗಿಸಿದ್ದಾರೆ. 30 ದಿನಗಳ ಅವಧಿಯಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿರುವ ಅವರು, ಮತ್ತೊಂದಿಷ್ಟನ್ನು ಕಲಿತುಕೊಂಡು ಮರಳಿದ್ದಾರೆ. ಅದನ್ನು ಅವರ ಮಾತಲ್ಲೇ ಕೇಳಿ. ‘ಬಹಳ ಬೇಗನೇ ಮನೆಯಿಂದ ಹೊರಬಂದೆ ಅನಿಸುತ್ತಿದೆ. ಇನ್ನೂ ಒಂದು ತಿಂಗಳು ನಾನು ಮನೆಯಲ್ಲಿ ಮುಂದುವರಿಯುವ ನಂಬಿಕೆ ಇತ್ತು. ಏನೂ ಮಾಡಲು ಆಗಲ್ಲ. ಅದು ನನ್ನ ಬ್ಯಾಡ್​ಲಕ್! ಒಂದಂತೂ ಹೇಳಬೇಕೆಂದರೆ ಮನೆಯಲ್ಲಿ 16 ಮನಸ್ಥಿತಿಗಳ ಜತೆಗೆ ಕಾಲಕಳೆದರೂ ನಾನು ಹೇಗೆ ಮನೆ ಪ್ರವೇಶ ಪಡೆದಿದ್ದೆನೋ ಅದೇ ರೀತಿ ಮರಳಿದ್ದೇನೆ. ನನ್ನತನವನ್ನು ನಾನು ಕಳೆದುಕೊಳ್ಳಲಿಲ್ಲ. ನಾನು ನಾನಾಗಿದ್ದೆ. ಬೇರೆಯವರ ರೀತಿ ಫೇಕ್ ಗೇಮ್ ಮೈಂಡ್ ಗೇಮ್ ಆಟದಲ್ಲಿ ತೊಡಗಿಸಿಕೊಳ್ಳಲಿಲ್ಲ’ ಎನ್ನುತ್ತಾರವರು.

ಮನೆಯಲ್ಲಿ ಇದ್ದಷ್ಟು ದಿನ ಖುಷಿ ಖುಷಿಯಾಗಿಯೇ ಇದ್ದೇನೆ ಎನ್ನುವ ಅವರು, ‘‘ಬಿಗ್​ಬಾಸ್’ ಮನೆಯಲ್ಲಿ ನನಗೆ ಯಾವುದೂ ನೆಗೆಟಿವ್ ಅಂತ ಅನಿಸಲಿಲ್ಲ. ತೋರ್ಪಡಿಕೆಯ ಆಟ, ಬೇರೆಯವರಿಂದ ಹೊಗಳಿಸಿಕೊಳ್ಳುವ ಆಟ ಆಡಿಲ್ಲ. ಒಂದು ವೇಳೆ ಅಂಥದ್ದೇ ಆಟ ಆಡಿದ್ದರೆ ನಾನು ಇನ್ನೂ ಮನೆಯಲ್ಲಿಯೇ ಇರುತ್ತಿದ್ದೆ. ಇನ್ನು ಮನೆಯಲ್ಲಿರುವವರ ಪೈಕಿ ಅರವಿಂದ್ ಮತ್ತು ದಿವ್ಯಾ ಹೊರತುಪಡಿಸಿ ಇನ್ನುಳಿದವರ್ಯಾರು ಬೋಲ್ಡ್ ಮತ್ತು ಸತ್ಯವಾದ ಆಟವನ್ನು ಆಡುತ್ತಿಲ್ಲ’ ಎಂದು ಹೇಳುತ್ತಾರೆ ಚಂದ್ರಕಲಾ. ‘ಕಳೆದ 21 ವರ್ಷದಿಂದ ಈ ಕ್ಷೇತ್ರದಲ್ಲಿದ್ದೇನೆ. ನಟನೆ ವಿಚಾರದಲ್ಲಿ ನಾನೇನು ಎಂಬುದನ್ನು ತೊರ್ಪಡಿಸುವ ಅವಶ್ಯಕತೆ ಇಲ್ಲ. ಅದರ ಬದಲಿಗೆ ‘ಬಿಗ್​ಬಾಸ್’ ಮನೆಯಲ್ಲಿ ಇನ್ನೊಂದಿಷ್ಟು ದಿನಗಳ ಕಾಲ ಇರಲು ಅವಕಾಶ ಇದ್ದಿದ್ದರೆ, ನಟನೆ, ಸ್ಕಿಟ್ ಮೂಲಕ ರಂಜಿಸಲು ಪ್ರಯತ್ನಿಸುತ್ತಿದ್ದೆ. ಧಾರಾವಾಹಿಗಳಲ್ಲಿ ನನ್ನನ್ನು ನೋಡಿದವರು ಚಂದ್ರಕಲಾ ತುಂಬ ಘಾಟಿ ಹೆಣ್ಣುಮಗಳು, ಬಜಾರಿ ಅಂತ ಅಂದುಕೊಂಡಿರಬಹುದು. ಆದರೆ, ನಾನು ಆ ರೀತಿ ಅಲ್ಲ’ ಎಂಬ ಮಾತನ್ನೂ ಹೇಳುತ್ತಾರೆ ಚಂದ್ರಕಲಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net