ದಳಪತಿ ವಿಜಯ್ ಬರ್ತ್‌ಡೇ ಸ್ಪೆಷಲ್; ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದ್ದ ಮೆರ್ಸಲ್ ಚಿತ್ರ ರೀ-ರಿಲೀಸ್! Thalapathy Vijay
Thalapathy Vijay ಚಿತ್ರ Instagram
Published on:
Copied
Follow Us
Thalapathy Vijay: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಅಭಿಮಾನಿಗಳಿಗೆ ಈ ಬಾರಿಯ ಅವರ ಹುಟ್ಟುಹಬ್ಬ (ಜೂನ್ 22) ಅತ್ಯಂತ ವಿಶೇಷ ಮತ್ತು ಸಂಭ್ರಮದಾಯಕವಾಗಿರಲಿದೆ. ಹೌದು, ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಆಚರಿಸಲು ಈಗ ಒಂದಲ್ಲ, ಎರಡು ಬಲವಾದ ಕಾರಣಗಳಿವೆ.
ಒಂದೆಡೆ ವಿಜಯ್ ಅವರ ಸಿನಿಮಾ ರಂಗದ ಕೊನೆಯ ಚಿತ್ರ ಎನ್ನಲಾದ, ಜನ ನಾಯಗನ್ ಚಿತ್ರದ ಅಧಿಕೃತ ಅಪ್ಟೇಡ್ಗಳಿಗಾಗಿ ಇಡೀ ದಕ್ಷಿಣ ಭಾರತದ ಚಿತ್ರರಂಗವೇ ಕಾತುರದಿಂದ ಕಾಯುತ್ತಿದೆ. ಇನ್ನೊಂದೆಡೆ, ಅವರ ವೃತ್ತಿಜೀವನದ ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಒಂದಾದ ‘ಮೆರ್ಸಲ್’ (Mersal) ಚಿತ್ರವು ಜೂನ್ 19 ರಂದು ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಮರು-ಬಿಡುಗಡೆ (Re-release) ಆಗಲು ಸಿದ್ಧವಾಗಿದೆ.
ಆದಾಗ್ಯೂ, ಚೆನ್ನೈ ಮತ್ತು ಚೆಂಗಲ್ಪಟ್ಟುಗಳ ಆಯ್ದ ಚಿತ್ರಮಂದಿರಗಳಲ್ಲಿ ಮಾತ್ರ ಚಿತ್ರ ಬಿಡುಗಡೆಯಾಗಲಿದೆ. ಈ ಸುದ್ದಿಯು ಈಗಾಗಲೇ ತಮ್ಮ ನೆಚ್ಚಿನ ನಟರ ಚಿತ್ರವನ್ನು ನೋಡಲು ಉತ್ಸುಹಕರಾಗಿರುವ ಅಭಿಮಾನಿಗಳಲ್ಲಿ ಉತ್ಸಾಹವನ್ನು ಹುಟ್ಟುಹಾಕಿದೆ.
ಭ್ರಷ್ಟ ವೈದ್ಯಕೀಯ ವ್ಯವಸ್ಥೆಯ ವಿರುದ್ಧ ‘ಮೆರ್ಸಲ್’ ಸಮರ
ಅಟ್ಲೀ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ಅವರು ತಂದೆ (ವೆಟ್ರಿಮಾರನ್) ಹಾಗೂ ಆತನ ಇಬ್ಬರು ಅವಳಿ ಮಕ್ಕಳಾದ ಮಾರನ್ ಮತ್ತು ವೆಟ್ರಿ ಎಂಬ ಮೂರು ಭಿನ್ನ ಶೇಡ್‌ಗಳ ಪಾತ್ರಗಳಲ್ಲಿ ಜೀವ ತುಂಬಿದ್ದಾರೆ. ಕೇವಲ 5 ರೂಪಾಯಿಗೆ ಬಡವರಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಅತ್ಯಂತ ಕರುಣಾಳು ವೈದ್ಯ ‘ಡಾ. ಮಾರನ್’ ಪಾತ್ರ ಪ್ರೇಕ್ಷಕರ ಹೃದಯ ಗೆದ್ದರೆ, ವಿದೇಶದಲ್ಲಿ ಮ್ಯಾಜಿಕ್ ಶೋ ನಡೆಸುತ್ತಾ ವೈದ್ಯಕೀಯ ರಂಗದ ಭ್ರಷ್ಟರನ್ನು ಬೇಟೆಯಾಡುವ ಜಾಗರೂಕ ಜಾದೂಗಾರ ‘ವೆಟ್ರಿ’ ಪಾತ್ರ ಚಿತ್ರಕ್ಕೆ ಭರ್ಜರಿ ಮಾಸ್ ಎಲಿಮೆಂಟ್ ಒದಗಿಸಿತ್ತು.
ಚಿತ್ರದಲ್ಲಿ ಜಾದೂಗಾರ ವೆಟ್ರಿ ಮಾಡುವ ಕೊಲೆಗಳ ಹಿನ್ನೆಲೆಯಲ್ಲಿ ವೈದ್ಯ ಮಾರನ್‌ನನ್ನು ಪೊಲೀಸರು ಬಂಧಿಸಿದಾಗ, ಕಥೆ ಅತ್ಯಂತ ರೋಚಕ ತಿರುವು ಪಡೆದುಕೊಳ್ಳುತ್ತದೆ. ಅಲ್ಲಿಂದ ತೆರೆದುಕೊಳ್ಳುವ ಇವರಿಬ್ಬರ ತಂದೆ ‘ವೆಟ್ರಿಮಾರನ್’ (ಮಧುರೈ ಗ್ರಾಮದ ನಾಯಕ) ಕಥೆ ಮತ್ತು ಆತ ಬಡವರಿಗಾಗಿ ಆಸ್ಪತ್ರೆ ಕಟ್ಟಲು ಹೋಗಿ ದ್ರೋಹಕ್ಕೆ ಒಳಗಾಗುವ ಫ್ಲ್ಯಾಶ್‌ಬ್ಯಾಕ್ ದೃಶ್ಯಗಳು ಥಿಯೇಟರ್‌ನಲ್ಲಿ ಪ್ರೇಕ್ಷಕರ ಕಣ್ಣಾಲಿಗಳನ್ನು ಒದ್ದೆಯಾಗಿಸಿದ್ದವು.
ಸಮಂತಾ ರುತ್ ಪ್ರಭು, ಎಸ್‌ಜೆ ಸೂರ್ಯ, ಕಾಜಲ್ ಅಗರ್ವಾಲ್, ನಿತ್ಯಾ ಮೆನೆನ್, ವಡಿವೇಲು, ಹರೀಶ್ ಪೆರಾಡಿ, ಕೋವೈ ಸರಳಾ, ಸತ್ಯನ್ ಮತ್ತು ಸತ್ಯರಾಜ್ ಸೇರಿದಂತೆ ಇನ್ನಿತರರನ್ನು ಈ ಚಿತ್ರ ಹೊಂದಿದೆ.
'ಥೇರಿ' ಚಿತ್ರದ ಯಶಸ್ಸಿನ ನಂತರ ವಿಜಯ್ ಅವರ ಅಟ್ಲೀ ಎರಡನೇ ಸಹಯೋಗ ' ಮೆರ್ಸಲ್' ಆಗಿತ್ತು. ಆದಾಗ್ಯೂ, ಈ ನಟ- ನಿರ್ದೆಶಕ ಜೋಡಿ ಬಿಗಿಲ್ ಚಿತ್ರಕ್ಕಾಗಿ ಮತ್ತೆ ಒಂದಾಯಿತು , ಇದು ಅವರ ಯಶಸ್ವಿ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿತು. ತೆನಾಂಡಲ್ ಸ್ಟುಡಿಯೋ ಲಿಮಿಟೆಡ್ ಬ್ಯಾನರ್‌ನ 100 ನೇ ನಿರ್ಮಾಣವಾಗಿ ನಿರ್ಮಿಸಲಾದ ಈ ಚಿತ್ರದಲ್ಲಿ ಎಆರ್ ರೆಹಮಾನ್ ಸಂಗೀತ, ಜಿಕೆ ವಿಷ್ಣು ಛಾಯಾಗ್ರಹಣ ಮತ್ತು ರೂಬೆನ್ ಸಂಕಲನವನ್ನು ಒಳಗೊಂಡಿತ್ತು.
ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಯಶಸ್ವಿಯಾಗಿದ್ದರೂ, ಮೆರ್ಸಲ್ ವಿವಾದಗಳಿಂದ ಮುಕ್ತವಾಗಲಿಲ್ಲ. ಜಾದೂಗಾರ ರಮಣ್ ಶರ್ಮಾ ಅವರು ನಿರ್ಮಾಪಕರನ್ನು ಟೀಕಿಸಿದ್ದರು, ನೈತಿಕತೆಯ ಮೇಲೆ ಕೇಂದ್ರಿತವಾದ ಚಿತ್ರವನ್ನು ಪ್ರಚಾರ ಮಾಡುವಾಗ ಅವರು ಅನೈತಿಕ ಅಭ್ಯಾಸಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
2017ರ ದೀಪಾವಳಿ ಹಬ್ಬದ ಉಡುಗೊರೆಯಾಗಿ ತೆರೆಕಂಡಿದ್ದ ‘ಮೆರ್ಸಲ್’, ಆರಂಭದಲ್ಲಿ ಮಿಶ್ರ ವಿಮರ್ಶೆಗಳನ್ನು ಎದುರಿಸಿತ್ತು. ಸುಮಾರು ಮೂರು ಗಂಟೆಗಳ ಸುದೀರ್ಘ ರನ್‌ಟೈಮ್ (Duration) ಮತ್ತು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಈಗಾಗಲೇ ಪರಿಚಿತವಿರುವ ಸೇಡಿನ ಕಥಾಹಂದರವನ್ನು ಹೊಂದಿದೆ ಎಂದು ಕೆಲವು ವಿಮರ್ಶಕರು ಅಭಿಪ್ರಾಯಪಟ್ಟಿದ್ದರು. ಆದರೆ, ಕಮರ್ಷಿಯಲ್ ಸಿನಿಮಾಗಳ ಮಾಸ್ ಮಾಂತ್ರಿಕ ಅಟ್ಲೀ ಅವರ ಮೇಕಿಂಗ್ ಶೈಲಿ ಮತ್ತು ವಿಜಯ್ ಅವರ ಒನ್-ಮ್ಯಾನ್ ಶೋ ಪ್ರೇಕ್ಷಕರಿಗೆ ಪೂರ್ಣ ಪ್ರಮಾಣದ ಹಬ್ಬದೂಟ ಉಣಬಡಿಸಿತ್ತು. ವಿಮರ್ಶೆಗಳನ್ನು ಬದಿಗೊತ್ತಿ ಮುನ್ನುಗ್ಗಿದ ಚಿತ್ರವು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತು.
ಜನ ನಾಯಗನ್ ಬಿಡುಗಡೆ ದಿನಾಂಕ ಇನ್ನೂ ದೃಢೀಕರಿಸದ ಕಾರಣ , ಮೆರ್ಸಲ್ ಮರು ಬಿಡುಗಡೆಯು ಅಭಿಮಾನಿಗಳಿಗೆ ವಿಜಯ್ ಅವರ ಹುಟ್ಟುಹಬ್ಬದ ಸಂಭ್ರಮವನ್ನು ಚಿತ್ರಮಂದಿರಗಳಲ್ಲಿ ಆಚರಿಸಲು ಅವಕಾಶ ಮಾಡಿಕೊಡುತ್ತದೆ. ಬಹು ನಿರೀಕ್ಷಿತ ಎಚ್ ವಿನೋತ್ ನಿರ್ದೇಶನದ ಈ ಚಿತ್ರವು ವಿಜಯ್ ಅವರ ಕೊನೆಯ ಚಿತ್ರವಾಗಲಿದ್ದು, ಈಗಾಗಲೇ ಅವರು ರಾಜಕೀಯದಲ್ಲಿ ತಮ್ಮ ಸಂಪೂರ್ಣ ಗುರಿಯನ್ನು ಹೊಂದಿದ್ದಾರೆ (ಏಜೆನ್ಸೀಸ್).