

ಪ್ರತಿ ವರ್ಷ ಇದು ಮಾಮೂಲಿ. ಸಂಕ್ರಾಂತಿ ಹಬ್ಬ ಬಂತೆಂದರೆ ದಕ್ಷಿಣದ ದೊಡ್ಡದೊಡ್ಡ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಪೈಪೋಟಿ ನಡೆಸುತ್ತವೆ ಮತ್ತು ಬಾಕ್ಸ್-ಆಫೀಸ್ನಲ್ಲಿ ಆ ಚಿತ್ರಗಳ ಜಿದ್ದಾಜಿದ್ದಿ ನಡೆಯುತ್ತದೆ. ಕೋವಿಡ್ ಕಾರಣದಿಂದ ಕಳೆದೆರಡು ವರ್ಷಗಳಲ್ಲಿ ಈ ಪೈಪೋಟಿ ಇರಲಿಲ್ಲ. 2023ರ ಸಂಕ್ರಾಂತಿಗೆ ಪುನಃ ಅಂಥದ್ದೊಂದು ದೊಡ್ಡ ಕ್ಲಾಶ್ ಆಗುವ ಸಂಭವಿಸಿದೆ.
ಸದ್ಯದ ಪರಿಸ್ಥಿತಿಯ ಪ್ರಕಾರ, ಮುಂದಿನ ವರ್ಷದ ಸಂಕ್ರಾಂತಿಗೆ ಮೂರು ದೊಡ್ಡ ತೆಲುಗು ಸ್ಟಾರ್ಗಳು ಬಾಕ್ಸ್-ಆಫೀಸ್ನಲ್ಲಿ ಪರಸ್ಪರ ಪೈಪೋಟಿ ನಡೆಸಲಿದ್ದಾರೆ. ಮೊದಲಿಗೆ, ಪ್ರಭಾಸ್ ಅಭಿನಯದ ‘ಆದಿಪುರುಷ್’ ಚಿತ್ರವನ್ನು ಮುಂದಿನ ಸಂಕ್ರಾಂತಿಗೆ ಬಿಡುಗಡೆ ಮಾಡುವುದಾಗಿ ಚಿತ್ರತಂಡದವರು ಘೋಷಿಸಿದ್ದರು. ಆ ನಂತರ ಚಿರಂಜೀವಿ ಮತ್ತು ರವಿತೇಜ ಅಭಿನಯದ ‘ಮೆಗಾ 154’ ಚಿತ್ರವೂ ಅದೇ ದಿನದಂದು ಬಿಡುಗಡೆಯಾಗುವುದಾಗಿ ಸುದ್ದಿಯಾಯಿತು. ಈಗ ನಂದಮೂರಿ ಬಾಲಕೃಷ್ಣ ಅಭಿನಯದ ‘ವೀರಸಿಂಹ ರೆಡ್ಡಿ’ ಚಿತ್ರವನ್ನು ಅದೇ ದಿನ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಇತ್ತೀಚೆಗೆ ಘೋಷಿಸಿದೆ. ಅಲ್ಲಿಗೆ ತೆಲುಗಿನ ಮೂವರು ಜನಪ್ರಿಯ ಸ್ಟಾರ್ಗಳ ಚಿತ್ರಗಳು ಒಂದೆರೆಡು ದಿನಗಳ ಅಂತರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಮೂರೂ ಚಿತ್ರಗಳ ಮೇಲೆ ನೂರಾರು ಕೋಟಿ ರೂ.ಗಳನ್ನು ಹೂಡಲಾಗಿದೆ.
ಇದು ತೆಲುಗಿನ ವಿಷಯವಾದರೆ, ತಮಿಳಿನಿಂದ ಸದ್ಯ ವಿಜಯ್ ಅಭಿನಯದ ‘ವಾರಿಸು’ ಎಂಬ ಚಿತ್ರವನ್ನು ಮುಂದಿನ ಸಂಕ್ರಾಂತಿಗೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಇದೊಂದು ದ್ವಿಭಾಷಾ ಚಿತ್ರವಾಗಿದ್ದು, ತಮಿಳಲ್ಲದೆ ತೆಲುಗಿನಲ್ಲೂ ಬಿಡುಗಡೆಯಾಗುತ್ತಿದೆ. ತಮಿಳಿನಲ್ಲಿ ಈ ಚಿತ್ರಕ್ಕೆ ‘ವಾರಿಸು’ ಎಂಬ ಹೆಸರಿದ್ದರೆ, ತೆಲುಗಿನಲ್ಲಿ ‘ವಾರಿಸುಡು’ ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರವನ್ನು ತೆಲುಗಿನ ಜನಪ್ರಿಯ ನಿರ್ವಪಕ ದಿಲ್ ರಾಜು ನಿರ್ವಿುಸುತ್ತಿದ್ದು, ವಿಜಯ್ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಇದನ್ನು ವಿಜಯ್ ಅಭಿನಯದ ಮೊದಲ ತೆಲುಗು ಚಿತ್ರ ಎಂದು ಬಿಂಬಿಸಲಾಗುತ್ತಿದೆ. ಅಲ್ಲಿಗೆ 2023ರ ಸಂಕ್ರಾಂತಿಗೆ ನಾಲ್ಕು ದೊಡ್ಡ ಚಿತ್ರಗಳು ಬಿಡುಗಡೆಗೆ ಸಾಲುಗಟ್ಟಿ ನಿಂತಿವೆ. ಆದರೆ, ಅಂತಿಮವಾಗಿ ಎಷ್ಟು ಚಿತ್ರಗಳು ಬಿಡುಗಡೆಯಾಗುತ್ತವೋ ಮತ್ತು ಕೊನೆಯ ಹಂತದಲ್ಲಿ ಸ್ಪರ್ಧೆಯಲ್ಲಿ ಎಷ್ಟು ಚಿತ್ರಗಳು ಉಳಿದುಕೊಳ್ಳುತ್ತವೋ ಎಂಬುದನ್ನು ಇನ್ನಷ್ಟೇ ನೋಡಬೇಕು. -ಏಜೆನ್ಸೀಸ್