ಆಗಸ್ಟ್​ನಿಂದ ಬಿಗ್​ಬಾಸ್​: ಓಟಿಟಿ-ಟಿವಿ ಎರಡರಲ್ಲೂ ಸುದೀಪ್ ನಿರೂಪಣೆಯಲ್ಲಿ..

Big Boss
Published on

ಬೆಂಗಳೂರು: ‘ಬಿಗ್ ಬಾಸ್’ನ ಒಂಬತ್ತನೇ ಸೀಸನ್ ಯಾವಾಗ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಇದ್ದೇ ಇತ್ತು. ಆ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಈ ಜನಪ್ರಿಯ ಕಾರ್ಯಕ್ರಮ ಪ್ರಾರಂಭವಾಗಲಿದೆ.

2021ರ ಆಗಸ್ಟ್​ನಲ್ಲಿ ‘ಬಿಗ್ ಬಾಸ್’ನ ಎಂಟನೇ ಸೀಸನ್ ಮುಗಿದಿತ್ತು. ಮಂಜು ಪಾವಗಡ ವಿಜೇತರಾಗಿದ್ದರು. ಇನ್ನು, ವರ್ಷದ ಕೊನೆಯಲ್ಲಿ ಇನ್ನೊಂದು ಸೀಸನ್ ಶುರುವಾಗುತ್ತದೆ ಎಂಬ ಗುಸುಗುಸು ಇತ್ತು. ಆದರೆ, ಅದು ಈ ವರ್ಷಕ್ಕೆ ಮುಂದೂಡಲ್ಪಟ್ಟಿತು. ‘ಬಿಗ್ ಬಾಸ್ 8’ ಮುಗಿದು ಒಂದು ವರ್ಷದ ನಂತರ, ಈಗ ಕೊನೆಗೂ ಆಗಸ್ಟ್​ನಲ್ಲಿ ಒಂಬತ್ತನೇ ಸೀಸನ್ ಶುರುವಾಗಲಿದೆ.

ವಿಶೇಷವೆಂದರೆ, ಈ ಬಾರಿ ‘ಬಿಗ್ ಬಾಸ್’ ಎರಡು ಸೀಸನ್​ಗಳಲ್ಲಿ ನಡೆಯಲಿದೆ. ಒಂದು ಮಿನಿ, ಇನ್ನೊಂದು ದೊಡ್ಡ ಸೀಸನ್. ಈ ಪೈಕಿ ಮಿನಿ, ವೂಟ್​ನಲ್ಲಿ ಆಗಸ್ಟ್ ನಿಂದ ಪ್ರಸಾರವಾಗಲಿದೆ. ಅದು ಅಕ್ಟೋಬರ್​ನಲ್ಲಿ ಮುಗಿಯಲಿದ್ದು, ಅಲ್ಲಿಂದ ದೊಡ್ಡ ಸೀಸನ್ ಕಲರ್ಸ್ ಕನ್ನಡದಲ್ಲಿ ಎಂದಿನಂತೆ ಪ್ರಸಾರವಾಗಲಿದೆ. ಮೊದಲ ಸೀಸನ್ 42 ದಿನಗಳದ್ದಾಗಿರುತ್ತದೆ ಮತ್ತು ಎರಡನೆಯದು ಎಂದಿನಂತೆ 100ನೇ ದಿನಕ್ಕೆ ಮುಗಿಯಲಿದೆ. ಎರಡೂ ಕಾರ್ಯಕ್ರಮಗಳನ್ನು ಸುದೀಪ್ ಅವರೇ ನಡೆಸಿಕೊಡುತ್ತಿದ್ದಾರೆ. ಓಟಿಟಿಯಲ್ಲಿ ಪ್ರಸಾರವಾಗುವ ಮಿನಿ ಸೀಸನ್​ನಲ್ಲಿ, ಸಾಮಾಜಿಕ ಜಾಲತಾಣಗಳ ಸೆಲೆಬ್ರಿಟಿಗಳು ಪಾಲ್ಗೊಳ್ಳಲಿದ್ದಾರಂತೆ. ಅಲ್ಲಿನ ನಾಲ್ಕೈದು ಜನ ಟಿವಿ ಕಾರ್ಯಕ್ರಮಕ್ಕೂ ಹಾರಲಿದ್ದಾರೆ. ಅವರ ಜತೆಗೆ ಎಂದಿನಂತೆ ಕರ್ನಾಟಕದ ಹಲವು ಜನಪ್ರಿಯ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಈ ಬಾರಿಯ ಸೀಸನ್​ಗಳನ್ನು ಬಹಳ ಚೆನ್ನಾಗಿ ಪ್ಲಾನ್ ಮಾಡಿದ್ದಾರೆ ಎನ್ನುವ ಸುದೀಪ್, ಕಾರ್ಯಕ್ರಮ ವಿಶೇಷವಾಗಿರಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ‘ಒಂದರಹಿಂದೊಂದು ಎರಡು ಸೀಸನ್​ಗಳಾಗಿರುವುದರಿಂದ ದೊಡ್ಡ ಸವಾಲು. ನಾನು ಎರಡೂ ಕಾರ್ಯಕ್ರಮಗಳ ವಾರಾಂತ್ಯದ ಎಪಿಸೋಡ್​ಗಳನ್ನು ನಿರೂಪಣೆ ಮಾಡಲಿದ್ದೇನೆ. ಸಾಮಾನ್ಯವಾಗಿ ಶನಿವಾರ ಬೆಳಿಗ್ಗೆಯ ಹೊತ್ತಿಗೆ ವಾರದ ಎಲ್ಲಾ ಎಪಿಸೋಡ್​ಗಳನ್ನು ನೋಡಿಕೊಂಡಿರುತ್ತೇನೆ. ಶನಿವಾರ ಬೆಳಿಗ್ಗೆ ಎಲಿಮಿನೇಶನ್ ಸುತ್ತಿನ ಚಿತ್ರೀಕರಣ ನಡೆಯುತ್ತದೆ. ಅದು ಸಂಜೆಯೇ ಪ್ರಸಾರವಾಗುತ್ತದೆ. ಇನ್ನು, ಸ್ಟೇಜ್ ಕಾರ್ಯಕ್ರಮದ ಚಿತ್ರೀಕರಣ ಶನಿವಾರ ರಾತ್ರಿ ಮುಗಿದು, ಭಾನುವಾರ ಪ್ರಸಾರವಾಗುತ್ತದೆ. ಅಷ್ಟೂ ಕಂತುಗಳನ್ನು ಪೂರ್ತಿ ನೋಡಿರುತ್ತೇನೆ. ಯಾವುದನ್ನೂ ಫಾರ್ವರ್ಡ್ ಮಾಡುವುದಿಲ್ಲ’ ಎನ್ನುತ್ತಾರೆ ಸುದೀಪ್.

ಜುಲೈ 28ಕ್ಕೆ ಬಿಡುಗಡೆಯಾಗಲಿರುವ ‘ವಿಕ್ರಾಂತ್ ರೋಣ’ ಚಿತ್ರದ ಪ್ರಚಾರದಲ್ಲಿ ಸದ್ಯ ತೊಡಗಿಸಿಕೊಂಡಿರುವ ಸುದೀಪ್, ಆ ಚಿತ್ರ ಬಿಡುಗಡೆಯಾದ ನಂತರ ‘ಬಿಲ್ಲ ರಂಗ ಬಾಷಾ’ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net