ಆ.6ರಿಂದ ಬಿಗ್ ಬಾಸ್.. ಸೀಸನ್ 9 ಅಲ್ಲ, ಓಟಿಟಿ 1: BIGG ಬಾಸ್​ಗೆ ದಿನಗಣನೆ ಶುರು

Big Boss
Published on

ಬೆಂಗಳೂರು: ‘ಒಂಬತ್ತಲ್ಲ. ಒನ್​ನ್​​ನ್​ ....’

ಸದ್ಯದಲ್ಲೇ ಶುರುವಾಗಲಿರುವ ‘ಬಿಗ್ ಬಾಸ್’ನದ್ದು ಒಂಬತ್ತನೇ ಸೀಸನ್ ಅಲ್ವಾ? ಎಂದು ಅಭಿಮಾನಿಯೊಬ್ಬರು ಕೇಳಿದಾಗ, ‘ಒಂದನೆಯ ಸೀಸನ್’ ಎಂದು ತಿದ್ದುತ್ತಾರೆ ಸುದೀಪ್. ಕಳೆದ ಬಾರಿ ಮಂಜು ಪಾವಗಡ ಗೆದ್ದಿದ್ದು ‘ಬಿಗ್ ಬಾಸ್’ನ ಎಂಟನೇ ಸೀಸನ್ ಎಂಬುದು ಹಲವರಿಗೆ ನೆನಪಿರಬಹುದು. ಅದು ಎಂಟಾದರೆ, ಇದು ಒಂಬತ್ತನೆಯದಲ್ವಾ? ಎಂಬ ಪ್ರಶ್ನೆ ಸಹಜ. ಆದರೆ, ಈ ಹಿಂದೆ ‘ಬಿಗ್ ಬಾಸ್’ 24 ಗಂಟೆ ಲೈವ್ ಬರುತ್ತಿರಲಿಲ್ಲ. ಹಾಗೆಯೇ, ವೂಟ್​ನಲ್ಲಿ ಪ್ರಸಾರವಾಗುತ್ತಿರಲಿಲ್ಲ. ಈ ಬಾರಿ, ಅವೆರಡೂ ಆಗುತ್ತಿರುವುದರಿಂದ ಇದು ‘ಬಿಗ್ ಬಾಸ್ ಓಟಿಟಿ’ ಸೀಸನ್ ಒನ್ ಎನ್ನಬಹುದು.

ಅಂದಹಾಗೆ, ‘ಬಿಗ್ ಬಾಸ್ ಓಟಿಟಿ 1’ ಆಗಸ್ಟ್ 6ರಿಂದ ಸಂಜೆ 7ಕ್ಕೆ ಪ್ರಸಾರವಾಗಲಿದೆ. ಈ ಸಂಬಂಧ ಪ್ರೋಮೋ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾಗಲಿದೆ. ಇದೊಂದು ಮಿನಿ ಸೀಸನ್ ಆಗಿದ್ದು, 42 ದಿನಗಳ ಕಾಲ ವೂಟ್​ನಲ್ಲಿ ಪ್ರಸಾರವಾಗಲಿದೆ. ಇದು ಮುಗಿಯುತ್ತಿದ್ದಂತೆಯೇ, ಕಲರ್ಸ್ ಕನ್ನಡದಲ್ಲಿ ‘ಬಿಗ್ ಬಾಸ್ - ಸೀಸನ್ 9’ ಪ್ರಸಾರವಾಗಲಿದೆ. ಆ ಕಾರ್ಯಕ್ರಮವು ಎಂದಿನಂತೆ 100 ದಿನ ಪ್ರಸಾರವಾಗಲಿದೆ. ಈ ಎರಡೂ ಕಾರ್ಯಕ್ರಮಗಳನ್ನು ಸುದೀಪ್ ಅವರೇ ನಡೆಸಿಕೊಡುತ್ತಿದ್ದಾರೆ.

‘ಬಿಗ್ ಬಾಸ್ ಓಟಿಟಿ 1’ ಕಾರ್ಯಕ್ರಮದಲ್ಲಿ ಯಾರೆಲ್ಲ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ ಎಂಬ ವಿಷಯ ಬಹಿರಂಗವಾಗಿಲ್ಲ. ಸದ್ಯಕ್ಕೆ ಈ ವಿಷಯವನ್ನು ಗೌಪ್ಯವಾಗಿಡಲಾಗಿದೆ. ಆದರೆ, ಓಟಿಟಿ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ನವೀನ್ ಕೃಷ್ಣ, ಟೆನ್ನಿಸ್ ಕೃಷ್ಣ, ಆಶಾ ಭಟ್, ರವಿ ಶ್ರೀವತ್ಸ, ತರುಣ್ ಚಂದ್ರ, ರೇಖಾ ವೇದವ್ಯಾಸ್, ಮಿಮಿಕ್ರಿ ಗೋಪಿ, ಪ್ರೇಮಾ ಮುಂತಾದವರು ಕಾಣಿಸಿಕೊಳ್ಳಬಹುದು ಎಂಬ ಗುಸುಗುಸು ಕೇಳಿಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net