ಬಿಚ್ಚುಗತ್ತಿಗೆ ಚಂದನವನದ ಮೆಚ್ಚುಗೆ

bichuugati feb 20 2020
Published on

ಟರು, ನಟಿಯರು, ನಿರ್ದೇಶಕರು, ನಿರ್ವಪಕರು.. ಹೀಗೆ ಚಂದನವನದ ಹಲವರಿಂದ ಮೆಚ್ಚುಗೆಗೆ ಪಾತ್ರವಾಗಿದ್ದು ‘ಬಿಚ್ಚುಗತ್ತಿ’. ಫೆ. 28ಕ್ಕೆ ಸಿನಿಮಾ ಬಿಡುಗಡೆ ಆಗಲಿರುವ ಹಿನ್ನೆಲೆಯಲ್ಲಿ ‘ಬಿಚ್ಚುಗತ್ತಿ’ ಚಿತ್ರತಂಡ ಇತ್ತೀಚೆಗೆ ಸಿನಿಮಾರಂಗದ ಗಣ್ಯರನೇಕರನ್ನು ಕರೆಸಿ ಟ್ರೇಲರ್-ಟೀಸರ್​ಗಳ ಪ್ರದರ್ಶನ ಮಾಡಿತು. ಅದನ್ನು ಕಣ್ತುಂಬಿಕೊಂಡ ಚಿತ್ರರಂಗದ ಗಣ್ಯರು ಮೆಚ್ಚುಗೆ ಮಾತುಗಳನ್ನಾಡಿ ಶುಭ ಹಾರೈಸಿದರು.

ಈ ಸಿನಿಮಾದ ನಿರ್ದೇಶನ ಮಾಡಬೇಕಿದ್ದು ನಾದಬ್ರಹ್ಮ ಹಂಸಲೇಖ, ‘ಬಿಚ್ಚುಗತ್ತಿ ಮೆಚ್ಚುಗತ್ತಿ ಆಗಲಿ. ನಾನೇ ಈ ಟೈಟಲ್ ಇಟ್ಟಿದ್ದು. ನಾನೇ ನಿರ್ದೇಶನ ಮಾಡಬೇಕಿತ್ತು. ಆದರೆ ರಾಕೆಟ್ ದೊಡ್ಡದಿತ್ತು, ನಿಮಾಪಕರ ಪಾಕೆಟ್ ಚಿಕ್ಕದಿತ್ತು. ಹಾಗಾಗಿ ಹರಿ ಸಂತೋಷ್​ಗೆ ಒಪ್ಪಿಸಿದೆ’ ಎಂದರು. ‘ಡಿಂಗ್ರಿ ನಾಗರಾಜ್ ಅವರಿಗೆ ಮಗ ಎತ್ತರಕ್ಕೆ ಬೆಳೆಯಲಿ ಎಂಬ ಆಸೆ ಇದೆ. ಮಕ್ಕಳು ನಮ್ಮ ಕಣ್ಮುಂದೆಯೇ ಎತ್ತರಕ್ಕೆ ಬೆಳೆಯುವುದು ದೊಡ್ಡ ಸಂತಸ’ ಎನ್ನುತ್ತ ನಾಯಕ ರಾಜವರ್ಧನ್​ಗೆ ಶುಭ ಹಾರೈಸಿದರು.

‘ಇತಿಹಾಸ ಪುಸ್ತಕದಲ್ಲೇ ಇರಬಾರದು. ಅವು ನಾಟಕ-ಸಿನಿಮಾ ಆಗಬೇಕು. ಕನ್ನಡದಲ್ಲಿ ಸಾಕಷ್ಟು ಐತಿಹಾಸಿಕ ಕಥೆಗಳಿವೆ, ಅವು ಸಿನಿಮಾಗಳಾಗಲಿ, ಅಂಥ ಸಿನಿಮಾಗಳು ಪ್ಯಾನ್ ಇಂಡಿಯಾ ಆಗುತ್ತವೆ. ಅದಕ್ಕೆ ಕೆಜಿಎಫ್ ಉದಾಹರಣೆ’ ಎಂದ ಅವರು, ‘ಯುವಪೀಳಿಗೆ ತಂತ್ರಜ್ಞಾನದಲ್ಲಿ ಮುಂದಿದ್ದಾರೆ. ಅವರಿಗೆ ಟಾರ್ಚರ್ ಕೊಡುವಂಥ ಸಿನಿಮಾ ಮಾಡಬಾರದಷ್ಟೇ’ ಎಂಬ ಕಿವಿಮಾತನ್ನೂ ಹೇಳಿದರು.

‘ನಮಗೆ ಆಸಕ್ತಿ ಹುಟ್ಟಿಸಿದ್ದೇ ಐತಿಹಾಸಿಕ ಕಥೆಗಳು. ಐತಿಹಾಸಿಕ ಸಿನಿಮಾಗಳು ತುಂಬ ಖುಷಿ ಕೊಡುತ್ತವೆ. ನನಗೂ ಐತಿಹಾಸಿಕ ಸಿನಿಮಾದಲ್ಲಿ ಅಭಿನಯಿಸುವ ಆಸೆ ಇದೆ. ಇಂಥ ಸಿನಿಮಾ ಗೆದ್ದಾಗ ಐತಿಹಾಸಿಕ ಸಿನಿಮಾಗಳು ಹೆಚ್ಚು ಬರುತ್ತವೆ’ ಎಂದು ಯಶಸ್ಸು ಆಶಿಸಿದರು ನಟ ಡಾಲಿ ಧನಂಜಯ.

‘ರಾಜವರ್ಧನ್ ನನಗೆ 5 ವರ್ಷಗಳ ಪರಿಚಯ. ಈ ಸಿನಿಮಾಗಾಗಿ ಅವರು ಪಟ್ಟ ಪರಿಶ್ರಮ ನಾನು ಕಣ್ಣಾರೆ ಕಂಡಿದ್ದೇನೆ. ಅವರಿಗೆ ಯಶಸ್ಸು ಸಿಗಲಿ’ ಎಂದು ‘ಕೆಂಡಸಂಪಿಗೆ’ ಖ್ಯಾತಿಯ ನಟ ವಿಕ್ಕಿ ವರುಣ್ ಶುಭ ಹಾರೈಸಿದರು.

‘ಹರಿ ಸಂತೋಷ್ ಕಥೆ ಎತ್ತಿಕೊಳ್ಳುವುದರಲ್ಲೇ ಗೆದ್ದಿದ್ದಾರೆ. ಇದು ಕನ್ನಡ ಮಣ್ಣಿನ ಪಾಳೇಗಾರನ ಕಥೆ’ ಎಂದು ಶ್ಲಾಘಿಸಿದರು ನಿರ್ದೇಶಕ ಸಿಂಪಲ್ ಸುನಿ.

ನಿರ್ದೇಶಕರಾದ ಮಹೇಶ್, ಸಹನಾಮೂರ್ತಿ, ಎ.ಪಿ. ಅರ್ಜುನ್, ನಟಿಯರಾದ ಶ್ರೀಲೀಲಾ, ಅಪೂರ್ವ ಮುಂತಾದವರು ಚಿತ್ರ ಹಾಗೂ ಚಿತ್ರತಂಡದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ‘ಓಂ ಸಾಯಿಕೃಷ್ಣ ಪ್ರೊಡಕ್ಷನ್ಸ್’ ಬ್ಯಾನರ್​ನಲ್ಲಿ ನಿರ್ವಣವಾಗಿರುವ ಈ ಚಿತ್ರಕ್ಕೆ ನಿರ್ದೇಶಕ ಹರಿ ಸಂತೋಷ್ ಆಕ್ಷನ್-ಕಟ್ ಹೇಳಿದ್ದಾರೆ. ಬಿ.ಎಲ್. ವೇಣು ಅವರ ಕಾದಂಬರಿ ಆಧಾರಿತ ಈ ಸಿನಿಮಾದಲ್ಲಿ ರಾಜವರ್ಧನ್, ಹರಿಪ್ರಿಯಾ, ‘ಬಾಹುಬಲಿ’ ಖ್ಯಾತಿಯ ಪ್ರಭಾಕರ್ ಮುಂತಾದವರು ಅಭಿನಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net