ಕೈಗೆ ಸಿಗೋ ಹೀರೋ ಆಗಿ ಗ್ಯಾಪ್ ತುಂಬಿದ್ರೆ ಕ್ಯಾಪ್

BICCHU
Published on

‘ಚಿತ್ರರಂಗದಲ್ಲಿ ಬೆರಳೆಣಿಕೆಯ ಸ್ಟಾರ್​ಗಳಿದ್ದರೂ ಅವರು ನಿರ್ಮಾಪಕರ ಕೈಗೆ ಸಿಗುತ್ತಿಲ್ಲ. ಹೀರೋ ಯಾವತ್ತೂ ನಿರ್ವಪಕರು ಹಾಗೂ ಕನಸಿರುವ ನಿರ್ದೇಶಕರ ಕೈಗೆ ಸಿಗುವಂತಿರಬೇಕು..’ - ಹೀಗೆನ್ನುತ್ತ ‘ಬಿಚ್ಚುಗತ್ತಿ’ ಚಿತ್ರದ ಜೋಡಿಗೆ ಕಿವಿಮಾತು ಹೇಳಿದವರು ನಾದಬ್ರಹ್ಮ ಹಂಸಲೇಖ.

ಹರಿ ಸಂತೋಷ್ ನಿರ್ದೇಶನದ ‘ಬಿಚ್ಚುಗತ್ತಿ’ ಸಿನಿಮಾದ ಟೀಸರ್ ಹಾಗೂ ಸಾಂಗ್ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು, ನಾಯಕ ರಾಜವರ್ಧನ್ ಹಾಗೂ ನಾಯಕಿ ಹರಿಪ್ರಿಯಾ ಅವರಿಗೆ ಕಿವಿಮಾತನ್ನು ಹೇಳಿದರು.

‘ರಾಜವರ್ಧನ್ ಹೆಸರಲ್ಲಿ ರಾಜ್​ಕುಮಾರ್ ಹಾಗೂ ವಿಷ್ಣುವರ್ಧನ್ ಇದ್ದಾರೆ. ಒಳ್ಳೆಯ ಸಿನಿಮಾಗಳನ್ನು ರೀಸನೇಬಲ್ ಸಂಭಾವನೆಗೆ ಒಪ್ಪಿಕೊಳ್ಳಬೇಕು. ನಿರ್ವಪಕರು ಹಾಗೂ ಕನಸಿರುವ ನಿರ್ದೇಶಕರಿಗೆ ಕಾಲ್​ಶೀಟ್ ಕೊಡಬೇಕು. ಕೋಟಿ ಕೋಟಿ ರೂ. ಎಂದರೆ ಅವಕಾಶ ಆಕಾಶ ಆಗಿಬಿಡುತ್ತದೆ’ ಎಂದು ರಾಜವರ್ಧನ್​ಗೆ ಹಿತನುಡಿ ಹೇಳಿದರು ಹಂಸಲೇಖ.

‘ಕನ್ನಡ ಚಿತ್ರರಂಗದಲ್ಲಿ ಮಂಜುಳಾ ಆದಮೇಲೆ ಅವರ ಸ್ಥಾನವನ್ನು ತುಂಬಿದ್ದು ಮಾಲಾಶ್ರೀ. ಅದಾದ ಮೇಲೆ ಒಂದು ಗ್ಯಾಪ್ ಇದೆ. ಮನಸು ಮಾಡಿ ಆ ಗ್ಯಾಪ್ ತುಂಬಿದರೆ ನಿನಗೊಂದು ಕ್ಯಾಪ್ ಸಿಗುತ್ತದೆ’ ಎಂದು ಹರಿಪ್ರಿಯಾಗೂ ಚಿತ್ರರಂಗದ ಸೂಕ್ಷ್ಮವನ್ನು ಸೂಚ್ಯವಾಗಿಯೇ ತಿಳಿಸಿದರು ಹಂಸಲೇಖ. ‘ನಿರ್ವಪಕ ಜ್ಞಾನೇಶ್​ಬಾಬು ಈ ಸಿನಿಮಾ ಮಾಡಲು ಒಂದು ದೊಡ್ಡ ಮೊತ್ತ ಕೊಟ್ಟಿದ್ದರು.

ಕಳರಿಪಯಟ್ಟು ಶಾಲೆಗೆ ರಾಜವರ್ಧನ್​ನ ಕಳಿಸಿದೆ. ಈ ಮಧ್ಯೆ ಪ್ಯಾನ್ ಇಂಡಿಯಾ ಸಿನಿಮಾ ಐಡಿಯಾ ಕೊಟ್ಟೆ. ನನ್ನದೇ ರೀತಿಯಲ್ಲಿ ಮಾಡುವುದಿದ್ದರೆ ಬಜೆಟ್ ಜಾಸ್ತಿ ಆಗುತ್ತೆ ಅಂತ ನಿರ್ದೇಶನದ ಜವಾಬ್ದಾರಿ ಹರಿ ಸಂತೋಷ್​ಗೆ ಒಪ್ಪಿಸಿದೆ’ ಎಂದರು ಹಂಸಲೇಖ. ‘ನಾನು ಏಳನೇ ತರಗತಿಯಲ್ಲಿದ್ದಾಗ ನನ್ನ ತಂದೆ ಹಂಸಲೇಖ ಜತೆ ಕೆಲಸ ಮಾಡುತ್ತಿದ್ದರು. ಅಂದು ಅವರಲ್ಲಿ ಕೆಲಸ ಕೇಳಿದ್ದೆ. ಮೊದಲು ಎಸ್​ಎಸ್​ಎಲ್​ಸಿ ಆದರೂ ಮುಗಿಸು ಎಂದು ಕಳಿಸಿಕೊಟ್ಟಿದ್ದರು.

ನಂತರ ‘ಕಾಲೇಜುಕುಮಾರ್’ ಸಿನಿಮಾ ಮಾಡುವಾಗ ಅವರ ಬಳಿ ಒಂದು ಪಾತ್ರ ಮಾಡುವಂತೆ ಕೋರಿದ್ದೆ. ಅವತ್ತು ನಿಂಗೆ ಮುಂದೆ ದೊಡ್ಡ ಕೆಲಸ ಕೊಡ್ತೇನೆ ಎಂದಿದ್ದರು. ಇಷ್ಟು ದೊಡ್ಡ ಕೆಲಸ ಕೊಡುತ್ತಾರೆ ಅಂದುಕೊಂಡಿರಲಿಲ್ಲ. ಈ ಸಿನಿಮಾ ಮಾಡಲು ದೊಡ್ಡ ನಿಮಾಪಕರನ್ನು ಪರಿಚಯಿಸಿದ್ದೇ ರಾಜವರ್ಧನ್’ ಎಂದರು ನಿರ್ದೇಶಕ ಹರಿ ಸಂತೋಷ್.

‘ಇದು 16ನೇ ಶತಮಾನದ ಕಥೆ. ಇಲ್ಲಿ ನನ್ನ ಪಾತ್ರ 2 ಶೇಡ್​ಗಳಲ್ಲಿ ಬರುತ್ತದೆ. ನಾನು ಇತಿಹಾಸದಲ್ಲಿ ವೀಕ್ ಇದ್ದೆ, ಈ ಚಿತ್ರದ ಮೂಲಕ ಇತಿಹಾಸ ತಿಳಿದುಕೊಂಡೆ. ಈ ಚಿತ್ರಕ್ಕೆ ನನ್ನನ್ನು ತರುಣ್ ಶಿವಪ್ಪ ರೆಫರ್ ಮಾಡಿದರು’ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿದರು ನಾಯಕಿ ಹರಿಪ್ರಿಯಾ.

‘2 ವರ್ಷಗಳ ಹಿಂದೆ ಜ್ಞಾನೇಶ್​ಬಾಬು ಅವರು ಕರೆ ಮಾಡಿ ಹೇಳಿದಾಗ ತಮಾಷೆ ಅಂದುಕೊಂಡಿದ್ದೆ. ನಂತರ ಇನ್ನೊಮ್ಮೆ ಹಂಸಲೇಖ ಅವರು ಕರೆ ಮಾಡಿದಾಗ ಖಚಿತವಾಯ್ತು. ಇದೇ ನನ್ನ ಮೊದಲ ಸಿನಿಮಾ ಹಾಗೂ ಕೊನೇ ಸಿನಿಮಾ ಎನ್ನುವ ರೀತಿಯಲ್ಲಿ ಶ್ರಮಪಟ್ಟು ಈ ಪಾತ್ರಕ್ಕೆ ತಯಾರಾಗಿದ್ದೇನೆ’ ಎಂದರು ನಾಯಕ ರಾಜವರ್ಧನ್.

‘ನಾನು ಚಿತ್ರದುರ್ಗದವಳು, ಹುಟ್ಟಿದ್ದೇ ಅಲ್ಲಿ. ಯಾವ ಪಾತ್ರ ಕೂಡ ಮಾಡ್ತೇನೆ ಎಂದೆ. ಈ ಚಿತ್ರಕ್ಕಾಗಿ ಅದ್ಭುತ ಸೆಟ್ ಹಾಕಿದ್ದಾರೆ’ ಎನ್ನುತ್ತ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು ಸ್ಪರ್ಶ ರೇಖಾ. ಸಾಹಿತಿ ಬಿ.ಎಲ್.ವೇಣು ಅವರ ಕಾದಂಬರಿ ಆಧಾರಿತ ಈ ಚಿತ್ರವನ್ನು ‘ಓಂ ಸಾಯಿಕೃಷ್ಣ ಪ್ರೊಡಕ್ಷನ್ಸ್’ ಬ್ಯಾನರ್​ನಲ್ಲಿ ಜ್ಞಾನೇಶ್ ಬಾಬು ನಿರ್ವಿುಸಿದ್ದಾರೆ. ‘ಬಾಹುಬಲಿ’ ಖ್ಯಾತಿಯ ಪ್ರಭಾಕರ್ ದಳವಾಯಿ ಮುದ್ದಣ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಚಿತ್ರ ಬಿಡುಗಡೆ ದಿನಾಂಕ ಘೋಷಣೆ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net