

ಬೆಂಗಳೂರು: ಕಿರುತೆರೆಯಲ್ಲಿ ಗುರುತಿಸಿಕೊಂಡು ಅಲ್ಲಿಂದ ‘ಬಿಗ್ಬಾಸ್’ ಮನೆಗೂ ಹೋಗಿ ಬಂದಿದ್ದ ನಟಿ ಭೂಮಿ ಶೆಟ್ಟಿ, ಇದೀಗ ಮೊದಲ ಸಿನಿಮಾದ ಖುಷಿಯಲ್ಲಿದ್ದಾರೆ. ಆ ಚಿತ್ರದ ಹೆಸರು ‘ಇಕ್ಕಟ್’. ಲಾಕ್ಡೌನ್ ಸಡಿಲವಾಗಿ ಶೂಟಿಂಗ್ಗೆ ಅನುಮತಿ ಸಿಕ್ಕಾಗ ಸೆಟ್ಟೇರಿದ್ದ ಚಿತ್ರವಿದು. ಆಗಸ್ಟ್ ನಲ್ಲಿ ಕೇವಲ 18 ದಿನಗಳಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದ ಈ ಚಿತ್ರವೀಗ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದೆ.
ಇಶಮ್ ಖಾನ್ ಮತ್ತು ಹಸೀನ್ ಖಾನ್ ಈ ಸಿನಿಮಾದ ನಿರ್ದೇಶಕರು. ಈ ಹಿಂದೆ ‘ಲೂಸ್ ಕನೆಕ್ಷನ್’ ಮತ್ತು ‘ಹೇಟ್ ಯೂ ರೋಮಿಯೋ’ ವೆಬ್ಸಿರೀಸ್ ನಿರ್ದೇಶನ ಮಾಡಿದ ಅನುಭವ ಇವರಿಗಿದೆ. ಇದೀಗ ಲಾಕ್ಡೌನ್ ವೇಳೆಯಲ್ಲಿ ಹೊಳೆದ ಕಥೆಯನ್ನು ಸಿನಿಮಾ ರೂಪಕ್ಕೆ ತಂದಿದ್ದಾರೆ. ಈ ಚಿತ್ರದ ಬಗ್ಗೆ ಹೇಳಿಕೊಳ್ಳುವ ಭೂಮಿ, ‘ಗಂಡ ಹಂಡತಿ ನಡುವೆ ಜಗಳ ನಡೆದು ಇನ್ನೇನು ಡಿವೋರ್ಸ್ ಕೊಡಬೇಕು ಎನ್ನುವಷ್ಟರಲ್ಲಿ ಲಾಕ್ಡೌನ್ ಘೋಷಣೆ ಆಗುತ್ತದೆ. ಆಗ ನಡೆಯುವ ಹಾಸ್ಯ ಪ್ರಸಂಗಗಳೇ ಸಿನಿಮಾದ ಹೈಲೈಟ್. ಇಲ್ಲಿ ನಾಗಭೂಷಣ್ಗೆ ನಾನು ಜೋಡಿಯಾಗಿದ್ದೇನೆ’ ಎನ್ನುತ್ತಾರವರು. ಆಗಸ್ಟ್ 1ರಿಂದ 18ರ ವರೆಗೆ ಚಿತ್ರದ ಶೂಟಿಂಗ್ ನಡೆದಿದ್ದು, ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಇನ್ನೇನು ಶೀಘ್ರದಲ್ಲಿ ಟ್ರೇಲರ್ ಸಹ ಹೊರಬರಲಿದೆ. ಸುಂದರ್, ಆರ್ಜೆ ವಿಕ್ಕಿ, ಆನಂದ್ ನೀನಾಸಂ ಇನ್ನುಳಿದ ಪಾತ್ರವರ್ಗದಲ್ಲಿದ್ದಾರೆ. ಪವನ್ ಕುಮಾರ್ ಸ್ಟುಡಿಯೋಸ್ ಈ ಚಿತ್ರದ ವಿತರಣೆಯ ಜವಾಬ್ದಾರಿ ಪಡೆದಿದೆ. ಲವಿತ್ ಛಾಯಾಗ್ರಹಣ, ಡೋಸ್ವೊಡ್ ಸಂಗೀತ ನೀಡಿದ್ದಾರೆ.