

ಬೆಂಗಳೂರು: ‘ಕಡಲ ತೀರದ ಭಾರ್ಗವ’ ಎಂದ ತಕ್ಷಣ ಮೊದಲಿಗೆ ನೆನಪಾಗುವುದು ಡಾ. ಕೆ. ಶಿವರಾಮ ಕಾರಂತರು. ಹೀಗಿರುವಾಗಲೇ ಅದೇ ಹೆಸರಿನ ಸಿನಿಮಾ ಇದೀಗ ಬಿಡುಗಡೆಗೆ ಸನಿಹದಲ್ಲಿದೆ.
ಹಾಗಂತ ಈ ಚಿತ್ರಕ್ಕೂ ಕಾರಂತರಿಗೂ ಯಾವುದೇ ಸಂಬಂಧವಿಲ್ಲ. ಭಾರ್ಗವ ಎಂಬುದಿಲ್ಲಿ ಕಥಾನಾಯಕನ ಹೆಸರು. ಈ ಚಿತ್ರದ ಟೀಸರ್ ಇಂದು (ಅ.18) ಬಿಡುಗಡೆ ಆಗಲಿದೆ. ನಟಿ ಶ್ರುತಿ ಪ್ರಕಾಶ್, ಭರತ್ ಗೌಡ, ವರುಣ್ ರಾಜು ಪಟೇಲ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ಎಳೆ ಕರಾವಳಿ ಹಿನ್ನೆಲೆಯಲ್ಲಿ ತೆರೆದುಕೊಳ್ಳಲಿದ್ದು, ಬಹುತೇಕ ಚಿತ್ರೀಕರಣ ಉಡುಪಿ, ಮುರುಡೇಶ್ವರ ಸುತ್ತಮುತ್ತಲೇ ನಡೆದಿದೆ. ಪನ್ನಗ ಸೋಮಶೇಖರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಅನಿಲ್ ಸಿ.ಜೆ. ಸಂಗೀತ, ಕೀರ್ತನ್ ಪೂಜಾರ್ ಛಾಯಾಗ್ರಹಣ ಹಾಗೂ ಆಶಿಕ್ ಕುಸುಗೊಳ್ಳಿ , ಉಮೇಶ್ ಭೋಸಗಿ ಅವರ ಸಂಕಲನವಿದೆ.