ಮೀರಾ ಮಾತುಗಳಿಗೆ ಬ್ರೇಕ್ ಹಾಕಿದ ಭಾರತೀರಾಜ

Bharathiraja - Final
Published on

ಕಾಲಿವುಡ್‍ನಲ್ಲಿ ಇತ್ತೀಚೆಗೆ ಕೆಲಸಕ್ಕಿಂತ ಹೆಚ್ಚಾಗಿ ಬರೀ ಮಾತುಗಳಿಂದಲೇ ಜನಪ್ರಿಯರಾದವರೆಂದರೆ ಅದು ನಟಿ ಮೀರಾ ಮಿಥುನ್. `ಬಿಗ್ ಬಾಸ್'ನ ಕಳೆದ ಸೀಸನ್‍ನಲ್ಲಿ ಸ್ಪರ್ಧಿಯಾಗಿದ್ದ ಮೀರಾ, ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಬಯ್ಯುವುದೊಂದೇ ಕಾಯಕ ಮಾಡಿಕೊಂಡಿದ್ದಾರೆ. ಕೆಲಸ ಸಿಗುತ್ತಿಲ್ಲ ಎಂಬ ಹತಾಶೆಯೋ ಅಥವಾ ತಮ್ಮನ್ನು ಯಾರೂ ಗುರುತಿಸುತ್ತಿಲ್ಲ ಎಂಬ ಬೇಸರವೋ ಗೊತ್ತಿಲ್ಲ. ಈ ಸಿಟ್ಟನ್ನು ಮೀರಾ ಎಲ್ಲರಿಗೂ ಬಯ್ಯುವ ಮೂಲಕ ತೀರಿಸಿಕೊಳ್ಳುತ್ತಿದ್ದಾರೆ.

ಅದೆಷ್ಟರ ಮಟ್ಟಿಗೆಂದರೆ, ರಜನಿಕಾಂತ್‍ರಂತಹ ಸೂಪರ್ ಸ್ಟಾರ್‍ಗಳನ್ನೇ ಮೀರಾ ಬಿಟ್ಟಿಲ್ಲ. ರಜನಿಕಾಂತ್, ಕಮಲ್ ಹಾಸನ್, ವಿಜಯ್, ತ್ರಿಷಾ, ಸೂರ್ಯ ಸೇರಿದಂತೆ ಕಾಲಿವುಡ್‍ನ ಹಲವು ಸೆಲೆಬ್ರಿಟಿಗಳ ಮೇಲೆ ಕಾರಣವಿಲ್ಲದೆ ಹರಿಹಾಯುತ್ತಿದ್ದಾರೆ. ಅವರು ನನ್ನ ತುಳಿದರು, ಇವರು ನನ್ನ ಅವಕಾಶ ಕಿತ್ತುಕೊಂಡರು, ಮತ್ತೊಬ್ಬರು ತಮ್ಮನ್ನು ಪಕ್ಕಕ್ಕಿಟ್ಟರು ... ಎಂಬಂತಹ ಆರೋಪಗಳನ್ನು ಮಾಡುತ್ತಲೇ ಇದ್ದಾರೆ.

ಮೀರಾ ಇಷ್ಟೆಲ್ಲಾ ಮಾತನಾಡುತ್ತಿದ್ದರೂ, ದೊಡ್ಡದೊಡ್ಡ ಸ್ಟಾರ್‍ಗಳ ಮೇಲೆ ಆರೋಪಗಳನ್ನು ಹೊರಿಸುತ್ತಿದ್ದರೂ, ಯಾರೊಬ್ಬರೂ ಸಹ ಈ ಬಗ್ಗೆ ಮಾತಾಡಿಲ್ಲ ಅಥವಾ ಮೀರಾ ಅವರನ್ನು ಖಂಡಿಸಿಲ್ಲ. ಈಗ ಮೊದಲ ಬಾರಿಗೆ ಕಾಲಿವುಡ್‍ನ ಹಿರಿಯ ನಿರ್ದೇಶಕರಾದ ಭಾರತೀರಾಜ ಅವರು ಮಾತನಾಡಿದ್ದಾರೆ. ಮೀರಾ ಅವರ ಮಾತುಗಳನ್ನು ಖಂಡಿಸಿದ್ದಾರೆ. ಅಷ್ಟೇ ಅಲ್ಲ, ಅನಾವಶ್ಯಕ ಈ ರೀತಿ ಮಾತನಾಡಬಾರದು ಎಂದು ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, `ಈ ಹುಡುಗಿ ಕೆಲವು ದಿನಗಳಿಂದ ಎಲ್ಲರನ್ನೂ ಧೂಷಿಸುತ್ತಿದ್ದಾಳೆ. ಈ ತಕ್ಷಣ ಆಕೆ ಇದನ್ನು ನಿಲ್ಲಿಸಿ, ಈ ಮೂಲಕ ಜನಪ್ರಿಯವಾಗುವುದನ್ನು ನಿಲ್ಲಿಸಬೇಕು. ಮೀರಾ ಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾಳೆ. ಹಲವು ಜನಪ್ರಿಯ ನಟರ ವೈಯಕ್ತಿಕ ವಿಚಾರಗಳಿಗೆ ತಲೆ ಹಾಕುತ್ತಿದ್ದಾಳೆ. ಜನಪ್ರಿಯತೆಗಾಗಿ ಈ ರೀತಿ ಮಾಡಬಾರದು. ಒಳ್ಳೆಯ ಹೆಸರು ಮಾಡಬೇಕೆಂದರೆ, ಅದಕ್ಕೆ ಸಾಕಷ್ಟು ಕಷ್ಟಪಡಬೇಕು. ಮೀರಾಗಿನ್ನೂ ಚಿಕ್ಕ ವಯಸ್ಸು. ಆರೋಪ ಮಾಡುವ ಬದಲು, ಕಷ್ಟಪಟ್ಟು ಮೇಲೆ ಬರಬೇಕು' ಎಂದು ಹೇಳಿದ್ದಾರೆ.

ಈ ವಿಚಾರವಾಗಿ ಕಲಾವಿದರ ಸಂಘ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದಿರುವ ಅವರು, `ಕಲಾವಿದರ ಸಂಘಕ್ಕೆ ಇನ್ನೂ ಚುನಾವಣೆಗಳಾಗಿಲ್ಲ ಎಂಬ ಮಾತ್ರಕ್ಕೆ ಎಲ್ಲರೂ ಸುಮ್ಮನೆ ನೋಡಿಕೊಂಡು ಕೂರಬಾರದು. ಇದು ಯಾರಿಗೋ ಸಂಬಂಧಿಸಿದ್ದು ಎಂದು ಕೂರುವುದು ತಪ್ಪು, ನಾಳೆ ನಿಮ್ಮ ಮೇಲೆ ಸಹ ಕೆಸರು ಬೀಳಬಹುದು. ಹಾಗಾಗಿ ಇಂತಹ ವಿಷಯಗಳನ್ನು ಖಂಡಿಸುವುದರ ಜತೆಗೆ, ಸೂಕ್ತ ಪರಿಹಾರ ಕಂಡುಕೊಳ್ಳಬೇಕು' ಎಂದು ಅವರು ಹೇಳಿದ್ದಾರೆ.

ಇನ್ನು ಮಾಧ್ಯಮದವರಿಗೂ ಸಲಹೆ ನೀಡಿರುವ ಅವರು, ಈ ತರಹದ ವ್ಯಕ್ತಿಗಳನ್ನು ದಯವಿಟ್ಟು ಪೋಷಿಸಬೇಡಿ, ಆಕೆಯನ್ನು ಎಂಕರೇಜ್ ಮಾಡುವುದರಿಂದ ಕೆಟ್ಟ ಸಂಸ್ಕøತಿಯನ್ನು ಬೆಳೆಸಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net