Kalave Mosagara Review; ನಿಧಾನ ಕಥೆಯಲ್ಲಿ ಭರತ್​ ಮಿಂಚಿನ ಓಟ

asc
Published on

ಚಿತ್ರ: ಕಾಲವೇ ಮೋಸಗಾರ

ನಿರ್ದೇಶನ: ಸಂಜಯ್​ ಕುಲಕರ್ಣಿ

ತಾರಾಗಣ: ಭರತ್​ ಸಾಗರ್​, ಯಶಸ್ವಿನಿ ರವೀಂದ್ರ, ವಿಜಯ್​ ಚೆಂಡೂರ್​, ಶಂಕರಮೂರ್ತಿ, ಕುರಿ ಪ್ರತಾಪ್​, ಬ್ಯಾಂಕ್​ ಜನಾರ್ದನ್​, ದರ್ಶನ್​ ಮತ್ತಿತರರು

| ಹರ್ಷವರ್ಧನ್​ ಬ್ಯಾಡನೂರು

"ಪ್ರತಿ ಲವ್​ಸ್ಟೋರಿಯಲ್ಲೂ ಒಬ್ಬ ಹೀರೋ ಮತ್ತು ಒಬ್ಬ ವಿಲನ್​ ಇರ್ತಾರೆ. ಆದರೆ, ನನ್ನ ಲವ್​ಸ್ಟೋರಿಲಿ ನಾನೇ ಹೀರೋ, ನಾನೇ ವಿಲನ್​' ಅಂತಾನೆ ಕಿಟ್ಟು (ಭರತ್​). ಪ್ರೀತಿಸಿದ ಹುಡುಗಿಯೇ ಕಿಟ್ಟು ಕಿಡ್ನ್ಯಾಪ್​ಗೆ ಬೆಂಗಳೂರಿನ ಟಾಪ್​ ರೌಡಿಗೆ ಸುಪಾರಿ ಕೊಟ್ಟಿರುತ್ತಾಳೆ. ಆಕೆಯ ನಿಶ್ಚಿತಾರ್ಥದ ವಿಷಯ ತಿಳಿದು ನೋವಿನ ನಶೆಯಲ್ಲಿ ಮಿಂದೇಳಲು ಬಾರ್​ಗೆ ಬಂದಿರುತ್ತಾನೆ. ಅದೇ ಬಾರ್​ಗೆ ಅವತ್ತೇ ಎಂಗೇಜ್​ ಆದ ಅವಿನಾಶ್​ (ಶಂಕರ್​) ಕೂಡ ಖುಷಿಯ ದಿನವನ್ನು ಆಚರಿಸಲು ಬಂದಿರುತ್ತಾನೆ. ಅವಿನಾಶ್​ಗೆ ಕಿಟ್ಟು ಮೇಲೆ ಕುತೂಹಲ ಮತ್ತು ಕನಿಕರ ಎರಡೂ ಮೂಡುತ್ತದೆ. ಹೀಗಾಗಿ ನಿಮ್ಮ ಲವ್​ಸ್ಟೋರಿ ಹೇಳಿ ಅಂತ ಕಿಟ್ಟುಗೆ ದುಂಬಾಲು ಬೀಳುತ್ತಾನೆ. ಅಲ್ಲಿಂದ ಕಿಟ್ಟು ಮತ್ತು ಸಂಗೀತ ಶಿಕ್ಷಕಿ ಸಂಧ್ಯಾ (ಯಶಸ್ವಿನಿ) ಪ್ರೇಮಕಥೆ ತೆರೆದುಕೊಳ್ಳುತ್ತದೆ. ಅವರ ಪ್ರೀತಿ ಹೇಗಾಯಿತು? ಬ್ರೇಕಪ್​ಗೆ ಏನು ಕಾರಣ? ಕಿಟ್ಟು&ಸಂಧ್ಯಾ ಮತ್ತೆ ಒಂದಾಗುತ್ತಾರಾ? ತಿಳಿಯಲು "ಕಾಲವೇ ಮೋಸಗಾರ' ನೋಡಿ...

ಎಲ್ಲವೂ ಅಂದುಕೊಂಡಂತಾಗಿದ್ದರೆ ಈ ಚಿತ್ರ ರಿಲೀಸ್​ ಆಗಿಯೇ ನಾಲ್ಕು ವರ್ಷಗಳಾಗಬೇಕಿತ್ತು. ಆದರೆ, ಕರೊನಾ ಕೊಟ್ಟ ಏಟಿಗೆ ತಡವಾಗಿದೆ. ಹಾಗಂತ ಈ ಕಥೆ ಔಟ್​ಡೇಟೆಡ್​ ಕೂಡ ಅಲ್ಲ. ಏಕೆಂದರೆ, ಇತ್ತೀಚೆಗೆ ಮೇಘಾಲಯದಲ್ಲಿ ನಡೆದ ಹನಿಮೂನ್​ ಮರ್ಡರ್​ ಕೇಸ್​ನಲ್ಲಿ ಪತ್ನಿಯೇ ಪತಿಯನ್ನು ಕೊಲ್ಲಿಸಲು ಸುಪಾರಿ ನೀಡಿದ್ದಳು. ಆದರೆ, ಈ ಚಿತ್ರದಲ್ಲಿ ಬಾಯ್​ಫ್ರೆಂಡ್​​ ಹೆಡೆಮುರಿ ಕಟ್ಟಲು ಗರ್ಲ್​ಫ್ರೆಂಡ್​ ಸುಪಾರಿ ಕೊಟ್ಟಿರುತ್ತಾಳೆ. ಇಂತಹ ಕೆಲ ವಿಷಯಗಳು ಚಿತ್ರವನ್ನು ನೋಡಿಸಿಕೊಂಡು ಹೋಗುತ್ತವೆ.

ಹಾಗೇ ನಾಯಕ ನಟ ಭರತ್​ ಸಾಗರ್​ ಕಿಟ್ಟು ಪಾತ್ರವನ್ನು ಜೀವಿಸಿದ್ದಾರೆ. ಡಾನ್ಸ್​, ಫೈಟ್ಸ್​ ಜತೆಗೆ ನಟನೆಯಲ್ಲೂ ಮಿಂಚಿರುವ ಅವರಿಗೆ ಉತ್ತಮ ಅವಕಾಶಗಳು ದೊರೆತರೆ, ಚಿತ್ರರಂಗದಲ್ಲಿ ಭವಿಷ್ಯದ ಭರವಸೆಯ ನಾಯಕನಾಗುವ ಎಲ್ಲ ಲಕ್ಷಣಗಳಿವೆ. ಯಶಸ್ವಿನಿ ಕೂಡ ಕೆಲ ಸನ್ನಿವೇಶಗಳಲ್ಲಿ ಗಮನ ಸೆಳೆಯುತ್ತಾರೆ. ಕುರಿ ಪ್ರತಾಪ್​ ಮತ್ತು ವಿಜಯ್​ ಚೆಂಡೂರ್​ ಅಲ್ಲಲ್ಲಿ ನಗಿಸುತ್ತಾರೆ. ಉಳಿದ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. ಲೋಕೇಶ್​ ಅವರ ಬಿಜಿಎಂ ಮತ್ತು ಸಂಗೀತ ಚಿತ್ರಕ್ಕೆ ಪೂರಕವಾಗಿವೆ. ಚಿತ್ರಕಥೆ ಮತ್ತಷ್ಟು ಗಟ್ಟಿಯಾಗಿದ್ದರೆ, ಸಿನಿಮಾ ಪ್ರೇಕ್ಷಕರಿಗೆ ಇತ್ತಷ್ಟು ಹತ್ತಿರವಾಗುತ್ತಿತ್ತು. ಉಳಿದಂತೆ ಚಿತ್ರವನ್ನು ಒಮ್ಮೆ ನೋಡಲಡ್ಡಿಯಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net