ಭಗೀರಥ ಶೂಟಿಂಗ್ ಶುರು; ರಾಮ್ ಜನಾರ್ದನ್ ನಿರ್ದೇಶನದ ಚಿತ್ರ

bhageeratha
Published on

ಬೆಂಗಳೂರು: ‘ಬಾಯ್‌ ಫ್ರೆಂಡ್’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟ, ನಿರ್ದೇಶಕ ರಾಮ್ ಜನಾರ್ದನ್, ಇದೀಗ ಹೊಸ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲು ರೆಡಿಯಾಗಿದ್ದಾರೆ. ಹೆಸರು ‘ಭಗೀರಥ’.

‘ಜಮಾನ’ದಲ್ಲಿ ಅಭಿನಯಿಸಿದ್ದ ಜಯಪ್ರಕಾಶ್ ಈ ಚಿತ್ರಕ್ಕೆ ನಾಯಕ. ಇತ್ತೀಚೆಗಷ್ಟೆ ಸಿನಿಮಾ ಮುಹೂರ್ತ ನೆರವೇರಿದ್ದು, ಮೊದಲ ಸನ್ನಿವೇಶಕ್ಕೆ ನಿರ್ದೇಶಕ ಸಾಯಿಪ್ರಕಾಶ್ ಆರಂಭ ಫಲಕ ತೋರಿದರು. ಚಿತ್ರದ ಬಗ್ಗೆ, ‘ಯಾವುದೇ ಒಂದು ಕೆಲಸವನ್ನು ಸತತವಾಗಿ ಪ್ರಯತ್ನಿಸಿ ಅದನ್ನು ಪೂರ್ಣಗೊಳಿಸುವುದಕ್ಕೆ ‘ಭಗೀರಥ’ ಪ್ರಯತ್ನ ಎಂದು ಹೆಸರು. ಈ ಪದಕ್ಕೂ ನಮ್ಮ ಚಿತ್ರಕ್ಕೂ ಸಂಬಂಧವಿದೆ. ಮೈಸೂರಿನಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ಮಾಡಲಿದ್ದೇವೆ’ ಎಂದು ಮಾಹಿತಿ ನೀಡಿದರು ರಾಮ್ ಜನಾರ್ದನ್. ಈ ಚಿತ್ರದ ನಾಯಕಿ ಚಂದನಾ ರಾಘವೇಂದ್ರ, ‘ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎಂದು ಹೇಳಿಕೊಂಡರು. ಇನ್ನು ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಈ ಚಿತ್ರದಲ್ಲಿ ಮಠಾಧಿಪತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಜಯಪ್ರಕಾಶ್ ಹಾಗೂ ಚಂದನ ರಾಘವೇಂದ್ರ ಜತೆಗೆ ಸುಧಾ ಬೆಳವಾಡಿ, ಶಿವರಾಜ್ ಕೆ.ಆರ್ ಪೇಟೆ, ರವಿ ಕಾಳೆ, ಬಾಲ ರಾಜವಾಡಿ, ಸುರಭಿ ರವಿ, ನಯನ, ಚೇತನ್, ನಿಖಿತ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ. ಉಳಿದಂತೆ ಚಿತ್ರಕ್ಕೆ ಪ್ರದೀಪ್ ವರ್ಮ ಸಂಗೀತ ನಿರ್ದೇಶನ, ಸೂರಿ ಚಿತ್ತೂರು ಛಾಯಾಗ್ರಹಣ, ರವಿಚಂದ್ರನ್ ಸಂಕಲನ ಹಾಗೂ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net