

ಕನ್ನಡ ಕಿರುತೆರೆಯ ವೀಕ್ಷಕರನ್ನು ‘ಮುದ್ದುಲಕ್ಷ್ಮೀ’, ‘ವರಲಕ್ಷ್ಮೀ ಸ್ಟೋರ್ಸ್’, ‘ಇಂತಿ ನಿಮ್ಮ ಆಶಾ’ ಮುಂತಾದ ಧಾರಾವಾಹಿಗಳ ಮೂಲಕ ರಂಜಿಸುತ್ತಿರುವ ಸ್ಟಾರ್ ಸುವರ್ಣ, ಇದೀಗ ದೇಸಿ ಮಣ್ಣಿನ ತಾಜಾ ಘಮಲಿರುವ ಹೊಸ ಧಾರಾವಾಹಿಯನ್ನು ತಂದಿದೆ. ಅದೇ ‘ಬೆಟ್ಟದ ಹೂ’.
‘ಬೆಟ್ಟದ ಹೂ’, ಹೂವಿ ಎಂಬ ಹಳ್ಳಿಹುಡುಗಿಯ ಕಥೆ. ಪಿ.ಯು.ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದು ಸರ್ಕಾರದ ವಿದ್ಯಾರ್ಥಿವೇತನ ಪಡೆದಿರುವ ಈ ಬುದ್ಧಿವಂತೆಯ ಜೀವನದಲ್ಲಿ ರಾಹುಲ್ ಎಂಬ ಪತ್ರಕರ್ತನ ಆಗಮನದಿಂದ ಏನೆಲ್ಲ ಆಗುತ್ತದೆ ಎಂಬುದು ಈ ಧಾರಾವಾಹಿಯ ಕಥೆ. ‘ಬಾಹುಬಲಿ’ ಚಿತ್ರವನ್ನು ನಿರ್ವಿುಸಿದ್ದ ಶೋಭು ಯಾರ್ಲಗುಡ್ಡ ಮತ್ತು ಪ್ರಸಾದ್ ದೇವಿನೇನಿ, ಅರ್ಕ ಮೀಡಿಯಾ ಸಂಸ್ಥೆಯಡಿ ಈ ಧಾರಾವಾಹಿಯನ್ನು ನಿರ್ವಿುಸುತ್ತಿದ್ದಾರೆ.
‘ನೀಲಿ’ಯಂಥ ಜನಪ್ರಿಯ ಧಾರಾವಾಹಿ ನಿರ್ದೇಶಿಸಿದ್ದ ಸತೀಶ್ ಕೃಷ್ಣ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ಪ್ರವೀಣ್ ಡಿ. ರಾವ್ ಸಂಗೀತ ಸಂಯೋಜಿಸಿದ್ದು, ವಿ. ನಾಗೇಂದ್ರ ಪ್ರಸಾದ್ ಶೀರ್ಷಿಕೆ ಸಾಹಿತ್ಯ ರಚಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಚಿತ್ರೀಕರಣಗೊಂಡಿರುವ ಈ ಧಾರಾವಾಹಿಯಲ್ಲಿ ಶ್ರೀವಿದ್ಯಾ ಹೂವಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ರಾಹುಲ್ ಪಾತ್ರದಲ್ಲಿ ದರ್ಶಕ್ ಮತ್ತು ಮಾಲಿನಿ ಪಾತ್ರದಲ್ಲಿ ಪ್ರಕೃತಿ ಪ್ರಸಾದ್ ಇದ್ದಾರೆ. ಮಿಕ್ಕಂತೆ ಶ್ರೀನಿವಾಸ ಪ್ರಭು, ಪದ್ಮಜಾ ರಾವ್, ಸುನೇತ್ರ ಪಂಡಿತ್ ಮುಂತಾದವರು ನಟಿಸಿದ್ದಾರೆ. ‘ಬೆಟ್ಟದ ಹೂ’ ನಾಳೆಯಿಂದ (ಜ.31) ರಾತ್ರಿ 8ಕ್ಕೆ ಪ್ರಸಾರವಾಗಲಿದೆ.