

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಜ್ಯೋತಿಷ್ಯದ ಬಗ್ಗೆ ಜ್ಯೋತಿಷ್ಯದ ಬಗ್ಗೆ ಹೆಚ್ಚು ನಂಬಿಕೆ ಇರುವ ನಟರಲ್ಲಿ ಜಗ್ಗೇಶ್ ಸಹ ಒಬ್ಬರು ಎಂದು ಹೇಳಲಾಗುತ್ತದೆ. ಜ್ಯೋತಿಷ್ಯದ ಬಗ್ಗೆ ಜಗ್ಗೇಶ್ ಅವರಿಗೆ ವಿಪರೀತ ನಂಬಿಕೆ ಎಂಬ ಮಾತುಗಳು ಆಗಾಗ ಕೇಳಿ ಬರುತ್ತಿರುತ್ತವೆ.
ಆದರೆ, ಇದೀಗ ಜಗ್ಗೇಶ್ ಅವರು, ಜ್ಯೋತಿಷ್ಯಕ್ಕಿಂತ ನಿಮ್ಮ ಮೇಲೆ ನೀವು ನಂಬಿಕೆ ಇಡಿ ಎಂದಿದ್ದಾರೆ. ನೀವು ಸರಿ ಇದ್ದರೆ ಎಲ್ಲವೂ ಸರಿಯಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಅದಕ್ಕೆ ಕಾರಣ, ಕರೊನಾ. ಕೋವಿಡ್ನಿಂದಾಗಿ ಈ ವರ್ಷ ಸಾವು-ನೋವು ಸಂಭವಿಸಿದೆ. ಈ ವರ್ಷ ಆದ ಅನಾಹುತಗಳಿಂದ ಹೊರಬರುವುದಕ್ಕೆ ಇಡೀ ವಿಶ್ವಕ್ಕೆ ಇನ್ನೂ ಸಾಕಷ್ಟು ಸಮಯ ಬೇಕಾಗುತ್ತದೆ.
ಈಗ ಜಗ್ಗೇಶ್ ಸಹ ಈ ಕುರಿತು ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಅವರು, ಜ್ಯೋತಿಷ್ಯದ ಬಗ್ಗೆ ಬರೆದುಕೊಂಡಿದ್ದಾರೆ. ಜ್ಯೋತಿಷ್ಯಕ್ಕಿಂತ ನಿಮ್ಮನ್ನು ನೀವು ನಂಬಿ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, '2020ರ ಮುಂಚೆ ಬಹುತೇಕ ಜ್ಯೋತಿಷಿಗಳು ವಾಡಿಕೆಯಂತೆ ಈ ವರ್ಷ ಅದ್ಭುತ ಮಳೆಬೆಳೆ! ಕೆಲ ರಾಶಿಗಳಿಗೆ ಶನಿಗುರು ಉತ್ತಮಫಲ ಎಂದು ಆನೆ ಕುದುರೆ ಮೇಲೆ ಸವಾರಿ ಮಾಡಿ ಹೇಳಿಬಿಟ್ಟರು. ಆದರೆ, ಕರೊಣಾ ವಿಶ್ವ ಮನುಕುಲಕ್ಕೆ ಹೀಗೆ ಗುಮ್ಮಿ, ಅಮಾಯಕ ಸಾವು-ನೋವು-ನಷ್ಟ ಆಗುತ್ತದೆ ಎಂದು ಹೇಳಲಿಲ್ಲ. ಜ್ಯೋತಿಷ್ಯಕ್ಕಿಂತ ನಿಮ್ಮ ನೀವು ನಂಬಿ. ನೀವು ಸರಿ ಇದ್ದರೆ ಜೀವಜಗ ಸರಿ ಇರುತ್ತದೆ' ಎಂದು ಹೇಳಿದ್ದಾರೆ.
ಜಗ್ಗೇಶ್ ಅವರ ಈ ಮಾತುಗಳಿಗೆ, ಹಲವರು ಮೆಚ್ಚುಗೆ ಸೂಚಿಸಿದ್ದು, ಅವರು ಹೇಳಿರುವುದು ಅಕ್ಷರಶಃ ನಿಜ ಎಂದು ಹೇಳಿದ್ದಾರೆ.