‘ಬ್ಯಾಂಗಲ್ ಬಂಗಾರಿ’ ಸಂಜನಾ: ನಟ ಯುವ ರಾಜಕುಮಾರ್‌ಗೆ ಜೋಡಿಯಾಗಿರುವ ‘ಎಕ್ಕ’ ಇದೇ 18ಕ್ಕೆ ರಿಲೀಸ್

sanjana1
Published on

ಬೆಂಗಳೂರು : ‘ಸಲಗ’ ಬಳಿಕ ನಟಿ ಸಂಜನಾ ಆನಂದ್ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ತೆರೆಕಂಡಿದ್ದ ‘ರಾಯಲ್’ ಚಿತ್ರದ ಅವರ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಹಾಗೆಯೇ ‘ಸೂತ್ರಧಾರಿ’ ಚಿತ್ರದ ವಿಶೇಷ ಸಾಂಗ್ ವೈರಲ್ ಕಂಡಿತ್ತು. ಇದರ ಬೆನ್ನಲ್ಲೇ ನಟಿಯ ಮತ್ತೊಂದು ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಅದುವೇ ‘ಎಕ್ಕ’. ‘ರತ್ನನ್ ಪ್ರಪಂಚ’ ಖ್ಯಾತಿಯ ರೋಹಿತ್ ಪದಕಿ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಯುವರಾಜಕುಮಾರ್ ಮುಖ್ಯಭೂಮಿಕೆಯಲ್ಲಿದ್ದಾರೆ. ಇಲ್ಲಿ ಯುವಗೆ ಸಂಜನಾ ಜೋಡಿಯಾಗಿದ್ದಾರೆ. ಇದೇ ತಿಂಗಳ 18ಕ್ಕೆ ಸಿನಿಮಾ ರಿಲೀಸ್ ಆಗುತ್ತಿದ್ದು, ಸದ್ಯ ಖುಷಿಯಲ್ಲಿದ್ದಾರೆ. ಪಾತ್ರದ ಬಗ್ಗೆ ಸಂಜನಾ, ‘ಈ ಹಿಂದೆ ಬಹುತೇಕ ಸಂದರ್ಶನಗಳಲ್ಲಿ ನಿಮಗೆ ಯಾವ ತರಹದ ಪಾತ್ರಗಳು ಅಂದರೆ ಇಷ್ಟ ಅಂತಾ ಕೇಳುತ್ತಿದ್ದರು. ಆ ಪ್ರಶ್ನೆಗೆ ಈಗ ‘ಎಕ್ಕ’ ಪಾತ್ರದ ಮೂಲಕ ನಾನು ಉತ್ತರ ಕೊಡಬಹುದು. ನಾನು ನಟಿಸಬೇಕು ಎಂದು ಅಂದುಕೊಂಡಂತಹ ಪಾತ್ರ ಇದು. ನಿರ್ದೇಶಕರು ಮೊದಲಿಗೆ ಬಂದು ಈ ಪಾತ್ರದ ಬಗ್ಗೆ ಹೇಳಿದಾಗ, ಎಷ್ಟು ಸೊಗಸಾಗಿ ಬರೆದಿದ್ದಾರಲ್ಲ ಅನಿಸಿತು. ಇದೀಗ ಡಬ್ಬಿಂಗ್ ಮಾಡುವಾಗಲೂ ನೋಡಿದಾಗ ಹಾಗೆಯೇ ಅನಿಸಿತು. ಇಲ್ಲಿ ನನ್ನ ಹಾಗೂ ಯುವ ಕಾಂಬಿನೇಷನ್ ಚೆನ್ನಾಗಿ ಮೂಡಿಬಂದಿದೆ. ಪ್ರತಿಭೆ ಪ್ರದರ್ಶಿಸುವಂತಹ ಸವಾಲಿನ ನಂದಿನಿ ಎಂಬ ಪಾತ್ರದಲ್ಲಿದ್ದೇನೆ. ತುಂಬಾ ರಿಯಾಲಿಸ್ಟಿಕ್ ಆಗಿ ಮೂಡಿಬಂದಿದೆ. ಇನ್ನು ಈ ಸಿನಿಮಾ ಆರು ತಿಂಗಳಲ್ಲಿ ಶೂಟಿಂಗ್ ಪೂರ್ಣಗೊಳಿಸಿ, ಈಗ ರಿಲೀಸ್‌ಗೆ ರೆಡಿಯಿದೆ. ನಾವು ಪಾತ್ರದ ಮೂಡ್‌ನಲ್ಲಿರುವಾಗಲೇ ರಿಲೀಸ್ ಆದರೆ, ಅದು ನಮಗೂ ಒಳ್ಳೆಯದು. ಈಗಾಗಲೇ ‘ಬ್ಯಾಂಗಲ್ ಬಂಗಾರಿ’ ಹಾಡಿಗೆ ಸಿಕ್ಕಿರುವ ಅಭೂತಪೂರ್ವ ಪ್ರತಿಕ್ರಿಯೆ ನಮ್ಮ ಖುಷಿ ಇನ್ನಷ್ಟು ಹೆಚ್ಚಿಸಿದೆ’ ಎಂದು ಖುಷಿ ಹಂಚಿಕೊಂಡರು.

‘ಎಕ್ಕ’ನ ರೌಡಿ ರೈಮ್ಸ್: ‘ಎಕ್ಕ’ ಚಿತ್ರದ ‘ಬ್ಯಾಂಗಲ್ ಬಂಗಾರಿ’ ಹಾಡು ಈಗಾಗಲೇ ಸಾಕಷ್ಟು ವೈರಲ್ ಕಂಡು ಹೆಚ್ಚು ರೀಲ್ಸ್ ಕಾಣುತ್ತಿದೆ. ಇದರ ಮಧ್ಯೆಯೇ, ಚಿತ್ರತಂಡವು ‘ರೌಡಿ ರೈಮ್ಸ್’ ಎಂಬ ಎರಡಣೇ ಹಾಡು ಬಿಡುಗಡೆಗೊಳಿಸಿದೆ. ಹಾಡಿನಲ್ಲಿ ಎಬಿಸಿಡಿ ಗೆ ಹೊಸ ಅರ್ಥ ಕಲ್ಪಿಸಿದೆ. ನಾಗಾರ್ಜುನ್ ಶರ್ಮಾ ಜತೆಗೆ ಸೇರಿ ‘ರೌಡಿ ರೈಮ್ಸ್’ ರಚಿಸುವ ಜತೆಗೆ ಚರಣ್ ರಾಜ್ ಜತೆ ರೋಹಿತ್ ಪದಕಿ ಧ್ವನಿಯಾಗಿದ್ದಾರೆ. ಈ ಹಾಡಿನಲ್ಲಿ ನಟ ಯುವರಾಜಕುಮಾರ್ ಗತ್ತಿನಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net