ಪುಣ್ಯಭೂಮಿಯಲ್ಲಿ ಪ್ರೀತಿಯ ಹುಡುಕಾಟ: ಸಿನಿಮಾ ವಿಮರ್ಶೆ

Banaras
Published on
  • ಚಿತ್ರ: ಬನಾರಸ್
  • ನಿರ್ದೇಶನ: ಜಯತೀರ್ಥ
  • ನಿರ್ಮಾಣ: ತಿಲಕ್​ರಾಜ್ ಭಲ್ಲಾಳ್
  • ತಾರಾಗಣ: ಝೈದ್ ಖಾನ್, ಸೋನಲ್ ಮೊಂತೆರೋ, ಸುಜಯ್ ಶಾಸ್ತ್ರಿ, ದೇವರಾಜ್, ಅಚ್ಯುತ್ ಕುಮಾರ್, ಬರ್ಕತ್ ಅಲಿ, ಸಪ್ನಾ ರಾಜ್ ಮುಂತಾದವರು

| ಹರ್ಷವರ್ಧನ್ ಬ್ಯಾಡನೂರು ಬೆಂಗಳೂರು

ಬನಾರಸ್, ಹಿಂದೂಗಳ ಧರ್ಮಭೂಮಿ, ಪುಣ್ಯಭೂಮಿ. ದೇಶ ವಿದೇಶಗಳಿಂದ ಜನ ಅಲ್ಲಿಗೆ ಬಂದು ದೈವನಗರಿಯ ಮಾಯಾಗಂಗೆಯಲ್ಲಿ ಅಸ್ಥಿ ವಿಸರ್ಜಿಸುತ್ತಾರೆ, ಘಾಟ್​ಗಳ ದಡಗಳಲ್ಲಿ ಮೃತದೇಹಗಳನ್ನು ಸುಡುತ್ತಾರೆ. ಗಂಗೆಯಲ್ಲಿ ಪುಣ್ಯಸ್ನಾನ ಮಾಡುತ್ತಾರೆ.

ಅದೇ ‘ಬನಾರಸ್’ಗೆ ಸಿದ್ಧಾರ್ಥ್ (ಝೈದ್) ತಾನು ಮಾಡಿದ ತಪ್ಪಿನ ಪಾಪ ಪ್ರಾಯಶ್ಚಿತಕ್ಕೆ ಬರುತ್ತಾನೆ. ತನ್ನಿಂದ ಸಮಸ್ಯೆಗೊಳಗಾದ ಧನಿ ಶಾಸ್ತ್ರಿಯ (ಸೋನಲ್) ಹುಡುಕಾಟದಲ್ಲಿ ತೊಡಗುತ್ತಾನೆ. ಅಲ್ಲಿ ಆತನ ಮೇಲೊಂದು ಪ್ರಯೋಗ ನಡೆಯುತ್ತದೆ. ಮಾಯಾಗಂಗೆಯ ತಟದಲ್ಲಿ ಮೊದಲು ಧನಿಯನ್ನು ಹುಡುಕತೊಡಗುವ ಸಿದ್ಧಾರ್ಥ್, ನಂತರ ಆತನನ್ನೇ ಹುಡುಕಿಕೊಳ್ಳಬೇಕಾಗುತ್ತದೆ. ಸಿದ್ದುಗೆ ಧನಿ ಸಿಗುತ್ತಾಳಾ? ಸಿಕ್ಕರೂ ಆತನನ್ನು ಕ್ಷಮಿಸುತ್ತಾಳಾ? ಸಿದ್ದು ಮೇಲೆ ನಡೆಯುವ ಪ್ರಯೋಗವೇನು? ಕುತೂಹಲವಿರುವವರು ಚಿತ್ರ ನೋಡಬಹುದು.

‘ಒಲವೇ ಮಂದಾರ’, ‘ಟೋನಿ’, ‘ಬ್ಯೂಟಿಫುಲ್ ಮನಸುಗಳು’ ಹಾಗೂ ‘ಬೆಲ್ ಬಾಟಂ’ನಂತೆ ಬೇರೆ ಬೇರೆ ಜಾನರ್ ಕಥೆಗಳನ್ನು ಹೇಳಿರುವ ನಿರ್ದೇಶಕ ಜಯತೀರ್ಥ ಅವರ ‘ಬನಾರಸ್’ ಕೂಡ ವಿಭಿನ್ನ ಬಗೆಯ ಚಿತ್ರವಾಗಿದೆ. ನಿಧಾನವಾಗಿ ಆರಂಭವಾಗುವ ಕಥೆ ದ್ವಿತೀಯಾರ್ಧದಲ್ಲಿ ವೇಗ ಪಡೆಯುತ್ತದೆ. ಪ್ರೇಮಕಥೆಯಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನು ಸೇರಿಸಿ ಕುತೂಹಲ ಮೂಡಿಸುತ್ತಾರೆ. ನಿಜ ಯಾವುದು, ಕಲ್ಪನೆ ಯಾವುದು ಎನ್ನುವುದು ಗೊತ್ತಾಗದಂತೆ ಚಾಕಚಕ್ಯತೆ ವಹಿಸಿದ್ದಾರೆ. ಅಲ್ಲಲ್ಲಿ ಕೊಂಚ ಬೋರ್ ಅನ್ನಿಸಿದರೂ, ಸಿನಿಮಾ ನೋಡಿಸಿಕೊಂಡು ಹೋಗುತ್ತದೆ.

ನಾಯಕ ಝೈದ್ ಖಾನ್​ಗಿದು ಮೊದಲ ಚಿತ್ರ ಎಂದು ಹೇಳುವುದು ಕಷ್ಟ. ಅಷ್ಟು ಸರಳವಾಗಿ ಅಭಿನಯಿಸಿದ್ದಾರೆ. ಸೋನಲ್ ಕೂಡ ಗಮನ ಸೆಳೆಯುತ್ತಾರೆ. ಸುಜಯ್ ಶಾಸ್ತ್ರಿ ತೆರೆ ಮೇಲೆ ಬಂದಂತೆಲ್ಲ ನಗಿಸುತ್ತಾರೆ, ಕೊನೆಗೊಮ್ಮೆ ಅತ್ತು, ಅಳಿಸಿಯೂ ಬಿಡುತ್ತಾರೆ. ಅಚ್ಯುತ್ ಕುಮಾರ್, ದೇವರಾಜ್ ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ‘ಟ್ರೋಲ್ ಸಾಂಗ್’ ಹೊರತುಪಡಿಸಿ ಉಳಿದೆಲ್ಲ ಹಾಡುಗಳಲ್ಲಿ ಅಜನೀಶ್ ಲೋಕನಾಥ್ ಅವರ ಸಂಗೀತ ಇಷ್ಟವಾಗುತ್ತದೆ. ಅದೇ ಹಳೆಯ ಮಸಾಲಾ, ಆಕ್ಷನ್, ಮಾಸ್ ಚಿತ್ರಗಳನ್ನು ಬಿಟ್ಟು ವಿಭಿನ್ನ ಎನಿಸುವ ಕಥೆಗಳನ್ನು ನೋಡಬಯಸುವವರಿಗೆ ‘ಬನಾರಸ್’ ಇಷ್ಟವಾಗಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net