

ಮುಂಬೈ: ಬಾಲನಟಿಯಾಗಿ ಬಂದ ಆಕೆ, ಒಂದಿಷ್ಟು ಚಿತ್ರಗಳಲ್ಲಿ ನಾಯಕಿಯಾಗಿಯೂ ನಟಿಸಿದರು. ಆದರೆ, ಏನೇ ಬಣ್ಣ, ಅಂದ ಇದ್ದರೂ, ಆಕೆಯ ತೂಕವೇ ಆಕೆಗೆ ದೊಡ್ಡ ಶಾಪವಾಯಿತು. ಕಳೆದ ವರ್ಷ, ತನ್ನ ತೂಕದ ಬಗ್ಗೆ ಬೇಸರಗೊಂಡ ಆಕೆ, ತೂಕ ಇಳಿಸಿಕೊಳ್ಳುವುದಕ್ಕೆ ಮುಂದಾದರು. ಅದರ ಪರಿಣಾಮವಾಗಿ ಇಂದು 13 ಕೆಜಿ ತೂಕ ಕಳೆದುಕೊಂಡಿದ್ದಾರೆ. ಆಕೆ ಯಾರಿರಬಹುದು ಎಂದು ಹೆಚ್ಚು ತಲೆ ಕೆರೆದುಕೊಳ್ಳಬೇಡಿ. ಆಕೆ ಬೇರ್ಯಾರೂ ಅಲ್ಲ, ಅವಿಕಾ ಗೋರ್.
ಇದನ್ನೂ ಓದಿ: ‘ಅಂತಿಮ’ವಾಯ್ತು ಸಲ್ಮಾನ್ ಖಾನ್ ಅಭಿನಯದ ಹೊಸ ಚಿತ್ರ …
ಈ ಹಿಂದೆ, ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ 'ಬಾಲಿಕಾ ವಧು' ಧಾರಾವಾಹಿ ನೆನಪಿರಬಹುದು. ಆ ಧಾರಾವಾಹಿಯಲ್ಲಿ 'ಬಾಲಿಕಾ ವಧು' ಆಗಿ ಕಾಣಿಸಿಕೊಂಡ ನಟಿಯೇ ಈ ಅವಿಕಾ ಗೋರ್. ಬರೀ ಧಾರಾವಾಹಿಗಳಷ್ಟೇ ಅಲ್ಲ, ಕೆಲವು ಚಿತ್ರಗಳಲ್ಲಿ ನಾಯಕಿಯಾಗಿಯೂ ಅವಿಕಾ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ಮಾಸ್ಟರ್ ಕಿಶನ್ ನಿರ್ದೇಶಿಸಿದ್ದ 'ಕೇರ್ ಆಫ್ ಫುಟ್ಪಾತ್ 2' ಚಿತ್ರದಲ್ಲಿ ಅವಿಕಾ ನಾಯಕಿಯಾಗಿ ನಟಿಸಿದ್ದರು.
ಆದರೆ, ನಾಯಕಿಯಾಗಿ ಮಿಂಚಬೇಕೆಂಬ ಆಸೆ ಅವಿಕಾಗೆ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ಕಾರಣ, ಆಕೆಯ ತೂಕ. ಮೊದಲೇ ದಪ್ಪಕ್ಕಿದ್ದ ಈ ಹುಡುಗಿ, ಇನ್ನಷ್ಟು ದಪ್ಪವಾದ ಹಿನ್ನೆಲೆಯಲ್ಲಿ ಅವಕಾಶಗಳು ಕ್ರಮೇಣ ಕಡಿಮೆಯಾದವು. ಅವಕಾಶಗಳು ಒಂದೊಂದೇ ಕೈತಪ್ಪಿ ಹೋಗುತ್ತಿದ್ದುದನ್ನು ನೋಡಿದ ಅವಿಕಾ, ಇನ್ನಾದರೂ ತಾನು ಬದಲಾಗಬೇಕು ಎಂದು ತೀರ್ಮಾನಿಸಿದರು. ಅದರಂತೆ, ಕೆಲವೇ ತಿಂಗಳುಗಳ ಅಂತರದಲ್ಲಿ 13 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, 'ಕಳೆದ ವರ್ಷದ ಒಂದು ರಾತ್ರಿ ನನಗಿನ್ನೂ ಚೆನ್ನಾಗಿ ನೆನಪಿದೆ. ಕನ್ನಡಿ ನೋಡುತ್ತಿದ್ದಂತೆ, ನನಗೆ ಅಳು ಬಂದುಬಿಟ್ಟಿತ್ತು. ದೊಡ್ಡದೊಡ್ಡ ಕೈಗಳು, ಕಾಲುಗಳು, ದಪ್ಪ ಹೊಟ್ಟೆ ... ಇವೆಲ್ಲಾ ಯಾವುದೋ ಖಾಯಿಲೆಯಿಂದ ಆಗಿದ್ದರೆ, ನಾನು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ಇದೆಲ್ಲಾ ಆಗಿದ್ದು ಅತಿಯಾಗಿ ತಿಂದಿದ್ದರಿಂದ ಮತ್ತು ವ್ಯಾಯಾಮದಿಂದ ದೂರ ಇದ್ದುದರಿಂದ. ನಮ್ಮ ದೇಹಕ್ಕೆ ನಾವು ಗೌರವ ಕೊಡಬೇಕು, ಚೆನ್ನಾಗಿ ನೋಡಿಕೊಳ್ಳಬೇಕು. ಆದರೆ, ನಾನು ಅದ್ಯಾವುದನ್ನೂ ಮಾಡಲಿಲ್ಲ. ಅದರಿಂದ ನಾನು ಅಷ್ಟೊಂದು ಊದಿಕೊಂಡಿದ್ದೆ' ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಡಬ್ಬಿಂಗ್ ಮುಗಿಸಿದ ‘ಅರ್ಜುನ್ ಗೌಡ’ … ಬಿಡುಗಡೆ ಯಾವಾಗ?
ಈ ಕುರಿತು ಮತ್ತಷ್ಟು ಮಾತನಾಡಿರುವ ಅವರು, 'ನಾನು ಬದಲಾಗಬೇಕು ಎಂದು ತೀರ್ಮಾನಿಸಿದ್ದೇ ಆಗ. ರಾತ್ರೋರಾತ್ರಿ ಯಾವುದೂ ಆಗಲಿಲ್ಲ. ಸಾಕಷ್ಟು ಕಷ್ಟಪಟ್ಟೆ, ಬೆವರು ಹರಿಸಿದೆ. ಸರಿಯಾದ ವಿಷಯಗಳ ಬಗ್ಗೆ ಫೋಕಸ್ ಮಾಡುವುದಕ್ಕೆ ಪ್ರಾರಂಭಿಸಿದೆ. ಎಷ್ಟು ಬೇಕೋ ಅಷ್ಟು ತಿಂದು, ಚೆನ್ನಾಗಿ ವರ್ಕೌಟ್ ಮಾಡಿದೆ. ಆರಂಭದಲ್ಲಿ ಬಹಳ ಕಷ್ಟವಾಯಿತು. ಆದರೆ, ಇವತ್ತು ಕನ್ನಡಿ ನೋಡಿಕೊಂಡಾಗ, ನನ್ನ ಬಗ್ಗೆ ನನಗೆ ಬೇಸರ ಮೂಡಲಿಲ್ಲ. ನನ್ನ ದೇಹ ನೋಡಿ ನನಗೆ ಅಳು ಬರಲಿಲ್ಲ. ಖುಷಿಯಾಯಿತು' ಎಂದು ಹೇಳಿಕೊಂಡಿದ್ದಾರೆ.