'ಡಾರ್ಕ್​ ಫ್ಯಾಂಟಸಿ' ಮೂಲಕ ವಾಪಸ್ಸಾದ ಬಾಲರಾಜ್​!

Dark Fantasy - Final
Published on

ಬೆಂಗಳೂರು: 80ರ ದಶಕದಲ್ಲಿ ಚಿತ್ರರಂಗಕ್ಕೆ ಬಂದು ಶಿವರಾಜಕುಮಾರ್​ ಅಭಿನಯದ ಹಲವು ಚಿತ್ರಗಳಲ್ಲಿ ನಟಿಸುವುದರ ಜತೆಗೆ, 'ರುದ್ರತಾಂಡವ' ಸೇರಿದಂತೆ ಇನ್ನೂ ಕೆಲವು ಚಿತ್ರಗಳಲ್ಲಿ ಹೀರೋ ಆಗಿ ಅಭಿನಯಿಸಿದರು. ಬಹಳ ದಿನಗಳ ನಂತರ 'ಡಾರ್ಕ್ ಫ್ಯಾಂಟಸಿ' ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುವುದರ ಮೂಲಕ ಅವರು ನಟನಾಗಿ ರೀಎಂಟ್ರಿ ಕೊಟ್ಟಿದ್ದಾರೆ.

ರಾಘವೇಂದ್ರ ರಾಜಕುಮಾರ್ ನಟನೆಯ 'ಆಡಿಸಿದಾತ' ಚಿತ್ರವನ್ನು ನಿರ್ದೇಶಿಸಿದ್ದ ಫಣೀಶ್ ಭಾರಧ್ವಾಜ್ ಈಗ 'ಡಾರ್ಕ್​ ಫ್ಯಾಂಟಸಿ' ಚಿತ್ರವನ್ನು ನಿರ್ದೇಶಿಸಿದ್ದಾರೆ. ಶ್ರೀ ಲಕ್ಷ್ಮೀ ವೆಂಕಟೇಶ್ವರ ನಿಡುಮಾಮಿಡೇಶ್ವರಿ ವೈಶ್ಣೋದೇವಿ ಸಿನಿ ಕ್ರಿಯೇಶನ್ಸ್ ಸಂಸ್ಥೆಯ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ.

ಇದೊಂದು ಸಸ್ಪೆನ್ಸ್​ ಥ್ರಿಲ್ಲರ್​ ಚಿತ್ರವಾಗಿದ್ದು, ಇದರ ಫಸ್ಟ್​ಲುಕ್​ ಮತ್ತು ಟೀಸರ್​ ಬಿಡುಗಡೆಯಾಗಿದೆ. ಹಣದ ಸುತ್ತ ನಡೆಯುವ ಕಥೆ ಇದಾಗಿದ್ದು, ನಾಯಕಿಯು ಕಾರಣಾಂತರಗಳಿಂದ ಒಂದು ಕತ್ತಲ ಬಂಗಲೆಯಲ್ಲಿ ಸಿಲುಕಿರುತ್ತಾಳೆ. ಹೊರಗೆ ಆಕೆಯ ಪ್ರಿಯಕರ ಪರಿತಪಿಸುತ್ತಿರುತ್ತಾನೆ. ಬದುಕಲ್ಲಿ ಸೆಟ್ಲ್​​ ಆಗಬೇಕು ಎಂದು ಬಯಸುವ ನಾಯಕ, ಬೆಟ್ಟಿಂಗ್​ನಿಂದ ಹಣ ಮಾಡಲು ನಿಂತ ಮತ್ತೊಬ್ಬ ... ಹೀಗೆ ಹಲವು ವಿಭಿನ್ನ ಪಾತ್ರಗಳು ಒಂದು ಕಡೆ ಸೇರುತ್ತವೆ. ಆ ನಂತರ ಮುಂದೇನಾಗುತ್ತದೆ ಎಂಬುದೇ ಚಿತ್ರದ ಕಥೆ.

ನಟನೆಗೆ ವಾಪಸ್ಸಾಗಿರುವ ಕುರಿತು ಮಾತನಾಡುವ ಬಾಲರಾಜ್​, 'ನಾನು ಚಿತ್ರರಂಗಕ್ಕೆ ಬರಲು ಇಬ್ಬರು ಕಾರಣಕರ್ತರು. ಹೊನ್ನವಳ್ಳಿ ಕೃಷ್ಣ ಮತ್ತು ಎಸ್.ಎ. ಗೋವಿಂದರಾಜ್. ಮದರಾಸಲ್ಲಿದ್ದ ನನ್ನನ್ನು ಬೆಂಗಳೂರಿಗೆ ಕರೆತಂದು, ಧ್ವನಿಮುದ್ರಣ ತಂತ್ರಜ್ಞನ ಕೆಲಸ ನೀಡಿದ್ದರು. ಆ ನಂತರ ನಾನು ಕಲಾವಿದನಾಗಿಯೂ ಗುರುತಿಸಿಕೊಂಡೆ. ಹಾಗೆ ಶುರುವಾದ ಪಯಣ ಇಲ್ಲಿಯವರೆಗೆ ಬಂದು ನಿಂತಿದೆ. ಈ ಚಿತ್ರದ ನಿರ್ಮಾಪಕ ನಾಗರಾಜ್ ನನ್ನ ಹಳೆಯ ಸ್ನೇಹಿತ. 'ಆನಂದ್' ಸಿನಿಮಾ ತೆರೆಗೆ ಬಂದ ಕಾಲದಿಂದಲೂ ಜೊತೆಗೇ ಇದ್ದೇವೆ. ಫಣೀಶ್ ಬಂದು ಈ ಪಾತ್ರವನ್ನು ನೀವೇ ಮಾಡಬೇಕು ಅಂದರು. ಅವರು ಅಂದುಕೊಂಡಂತೆ ಪಾತ್ರ ನಿರ್ವಹಿಸಿದ್ದೀನಿ ಎನ್ನುವ ಭರವಸೆ ನನಗಿದೆ. ಹಗಲೂ ರಾತ್ರಿ ಚಿತ್ರೀಕರಣ ನಡೆಸಿದ್ದೇವೆ. ಎಲ್ಲರೂ ಶ್ರಮಿಸಿದ್ದೇವೆ. ಈ ಚಿತ್ರ ಇಡೀ ತಂಡಕ್ಕೆ ಉತ್ತಮ ಹೆಸರು ತಂದುಕೊಡಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಬಾಲರಾಜ್​.

'ಡಾರ್ಕ್ ಫ್ಯಾಂಟಸಿ' ಚಿತ್ರದಲ್ಲಿ ಸುನೀತಾ ಮತ್ತು ಸುಶ್ಮಿತಾ ಎಂಬ ಇಬ್ಬರು ನಾಯಕಿಯರಿದ್ದಾರೆ. ಶೋಭರಾಜ್, ಮನ್​ದೀಪ್ ರಾಯ್, ಮೋಹನ್ ಜುನೇಜ ಮುಂತಾದವರ ತಾರಾಗಣವಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಬಹುತೇಕ ಮುಗಿದಿವೆ. ಒಂದು ಇಂಗ್ಲಿಷ್ ಹಾಡು ಸೇರಿದಂತೆ ಒಟ್ಟು ಐದು ಹಾಡುಗಳು ಈ ಸಿನಿಮಾದಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net