ಪೊಲೀಸ್ ಗತ್ತಿನಲ್ಲಿ ಅಭಿಷೇಕ್ ಮಿಂಚು; ಬ್ಯಾಡ್ ಮ್ಯಾನರ್ಸ್ ಟೀಸರ್ ಬಿಡುಗಡೆ

Abhishekh
Published on

ಬೆಂಗಳೂರು: ಅಭಿಷೇಕ್ ಅಂಬರೀಷ್ ಅಭಿನಯದ ‘ಬ್ಯಾಡ್ ಮ್ಯಾನರ್ಸ್’ ಚಿತ್ರ ಹೇಗಿರಲಿದೆ ಎಂಬುದಕ್ಕೆ ಇದುವರೆಗೂ ಒಂದೇ ಒಂದು ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ. ಅಭಿಷೇಕ್ ಪಾತ್ರವೇನು, ಚಿತ್ರ ಹೇಗಿರಲಿದೆ? ಎಂಬ ವಿಚಾರವೂ ಗುಟ್ಟಾಗಿಯೇ ಇತ್ತು. ಇದೀಗ ಅಭಿಷೇಕ್ ಬರ್ತ್​ಡೇ ಪ್ರಯುಕ್ತ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಖಡಕ್ ಪೊಲೀಸ್ ಅಧಿಕಾರಿಯಾಗಿ ಅಭಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ‘ದುನಿಯಾ’ ಸೂರಿ ಸಿನಿಮಾ ಅಂದಮೇಲೆ ಅದೊಂದು ಕೌತುಕದ ಕೋಟೆ ಇದ್ದಂತೆ. ಚಿತ್ರವಿಚಿತ್ರ ಪಾತ್ರಗಳು ಮತ್ತು ಚಿತ್ರಕತೆಯ ಮೂಲಕವೇ ಒಂದಷ್ಟು ಪ್ರಯೋಗಗಳಾಗಿರುತ್ತವೆ. ಈ ಹಿಂದಿನ ಸಿನಿಮಾಗಳಲ್ಲಿ ಅವೆಲ್ಲವೂ ಸಾಬೀತಾಗಿವೆ. ಇದೀಗ ‘ಬ್ಯಾಡ್ ಮ್ಯಾನರ್ಸ್’ನಲ್ಲಿ ಅಭಿಷೇಕ್ ಅಂಬರೀಷ್​ಗೆ ಪೊಲೀಸ್ ಕ್ಯಾಪ್ ತೊಡಿಸಿ, ಕುತೂಹಲಕ್ಕೆ ಒಗ್ಗರಣೆ ಹಾಕಿದ್ದಾರೆ. ಟೀಸರ್​ನಲ್ಲಿ ರಗಡ್ ಆಗಿಯೇ ಮಿಂಚು ಹರಿಸಿದ್ದಾರೆ.

ಈಗಾಗಲೇ ಒಂದಷ್ಟು ಭಾಗದ ಶೂಟಿಂಗ್ ಮುಗಿಸಿರುವ ಸೂರಿ, ನಾಳೆಯಿಂದ (ಅ.5) ಮತ್ತೆ ಶೂಟಿಂಗ್ ಆರಂಭಿಸಲಿದ್ದಾರೆ. ರಚಿತಾ ರಾಮ್ ಮತ್ತು ಪ್ರಿಯಾಂಕಾ ಕುಮಾರ್ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಮಾಸ್ತಿ ಸಂಭಾಷಣೆ ಬರೆದರೆ, ಚರಣ್​ರಾಜ್ ಸಂಗೀತ, ಶೇಖರ್ ಸಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಕೆ.ಎಂ. ಸುಧೀರ್ ಈ ಚಿತ್ರದ ನಿರ್ವಪಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net