

ಬೆಂಗಳೂರು: ‘ರೋಮಿಯೋ’, ‘ಸ್ಟೈಲ್‌ಕಿಂಗ್’, ‘ಲವ್ ಬರ್ಡ್ಸ್’ ಬಳಿಕ ನಿರ್ದೇಶಕ ಪಿ.ಸಿ.ಶೇಖರ್ ಆ್ಯಕ್ಷನ್-ಕಟ್ ಹೇಳುತ್ತಿರುವ ಸಿನಿಮಾ ‘ಬ್ಯಾಡ್’. ಈ ಚಿತ್ರದಲ್ಲಿ ‘ರಾಯಭಾರಿ’ ಖ್ಯಾತಿಯ ನಕುಲ್ ಗೌಡ ಮುಖ್ಯಭೂಮಿಕೆಯಲ್ಲಿದ್ದು, ಅವರಿಗೆ ಮಾನ್ವಿತಾ ಹರೀಶ್ ಜೋಡಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳನ್ನು ಶುರು ಮಾಡಿಕೊಂಡಿದೆ. ಕೆಲ ತಿಂಗಳ ಹಿಂದೆ ‘ಬ್ಯಾಡ್’ ಚಿತ್ರದ ‘ಮಾತಿಗೂ ಮಾತಿಗೂ’ ಸಾಂಗ್ ಬಿಡುಗಡೆ ಮಾಡಲಾಗಿತ್ತು. ಈ ಪ್ರೇಮಗೀತೆಗೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾದ ಬೆನ್ನಲ್ಲೇ ಚಿತ್ರತಂಡ ಮತ್ತೊಂದು ಸಾಂಗ್ ರಿಲೀಸ್ ಮಾಡಿದೆ. ‘ನೀ ಬರುವೆ ಅಂತಾ ನಾ ಕಾದು ಕುಂತ ಕ್ಷಣಗಳಿಗೆಲ್ಲ ಕವಿತೆಯಾಯಿತು ಒಲವೇ’ ಎಂದು ಸಾಗುವ ಈ ಗೀತೆಯನ್ನು ಕವಿರಾಜ್ ರಚಿಸಿದ್ದು, ಅರ್ಜುನ್ ಜನ್ಯ ಸಂಗೀತದಲ್ಲಿ ಪೃಥ್ವಿ ಭಟ್ ಧ್ವನಿಯಾಗಿದ್ದಾರೆ. ನಾಯಕ ನಕುಲ್ ಮತ್ತು ನಾಯಕಿ ಮಾನ್ವಿತಾ ನಡುವಿನ ರೊಮ್ಯಾಂಟಿಕ್ ಸನ್ನಿವೇಶಗಳನ್ನು ಈ ಹಾಡಿನಲ್ಲಿ ಚಿತ್ರೀಕರಿಸಲಾಗಿದೆ. ಶೇಖರ್, ‘ನಾಯಕನ ಬರುವಿಕೆಗಾಗಿ ಕಾದು ಕುಳಿತಿರುವ ನಾಯಕಿ. ಕಾಯುವಿಕೆಯಲ್ಲಿ ಏನೆಲ್ಲಾ ಕಲ್ಪಿಸಿಕೊಳ್ಳುತ್ತಾಳೆ ಎಂಬುದನ್ನು ಈ ಹಾಡಿನ ಮೂಲಕ ತೋರಿಸಲಾಗಿದೆ. ಕಾಮ, ಕ್ರೋಧ ಮೊದಲಾದ ಅಡಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳಲ್ಲಿ ಆರು ಜನ ಕಲಾವಿದರು ಅಭಿನಯಿಸಿರುವುದು ವಿಶೇಷ’ ಎನ್ನುತ್ತಾರೆ. ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್, ಅಶ್ವಿನಿ ಕಲಾ ಬಳಗದಲ್ಲಿದ್ದಾರೆ. ಪಿ.ಸಿ.ಶೇಖರ್ ನಿರ್ದೇಶನದ ಜತೆಗೆ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.