BACK BENCHERS Review ; ಲಾಸ್ಟ್​ ಬೆಂಚ್​ ಹುಡುಗರ ಆಟ, ಓಟ, ಜೀವನಪಾಠ

2
Published on

ಚಿತ್ರ: ಬ್ಯಾಕ್​ ಬೆಂಚರ್ಸ್​
ನಿರ್ದೇಶನ ಮತ್ತು ನಿರ್ಮಾಣ: ಬಿ.ಆರ್​. ರಾಜಶೇಖರ್​
ತಾರಾಗಣ: ರಂಜನ್​, ಜತಿನ್​, ಮಾನ್ಯಾ, ಸುಚೇಂದ್ರ ಪ್ರಸಾದ್​, ಶಶಾಂಕ್​, ಕುಂಕುಮ್​, ಚತುರ್ಥಿ ರಾಜ್​ ಮುಂತಾದವರು.

ಪ್ರತಿ ಶಾಲೆ, ಕಾಲೇಜುಗಳಲ್ಲೂ ಕೊನೆಯ ಬೆಂಚ್​ನಲ್ಲಿ ಕುಳಿತುಕೊಳ್ಳುವ ಒಂದು ಗ್ಯಾಂಗ್​ ಇರುತ್ತದೆ. ಓದಿನಲ್ಲಿ ಹಿಂದಿದ್ದರೂ ಉಳಿದೆಲ್ಲ ವಿಷಯಗಳಲ್ಲೂ ಮುಂದಿರುವ ಗಲಾಟೆ ಗ್ಯಾಂಗ್​. ಅಂತಹ ಒಂದು ಗ್ಯಾಂಗ್​ನ ಹುಡುಗರ ಕಥೆ "ಬ್ಯಾಕ್​ ಬೆಂಚರ್ಸ್​'. ಹಾಗಂತ ಲಾಸ್ಟ್​ ಬೆಂಚ್​ನಲ್ಲಿ ಕೂರುವ ಹುಡುಗರೆಲ್ಲರೂ ಕೆಟ್ಟವರು ಓದಿನಲ್ಲೂ ಲಾಸ್ಟ್​ ಅಂತಲ್ಲ. ಹಾಗೇ ಫಸ್ಟ್​ ಬೆಂಚ್​ನಲ್ಲಿ ಕೂರುವವರೆಲ್ಲರೂ ಒಳ್ಳೆಯವರು, ಓದಿನಲ್ಲೂ ಫಸ್ಟ್​ ಅಂತನೂ ಅಲ್ಲ. ಆದರೆ, ಫಸ್ಟ್​ ಬೆಂಚ್​ನಲ್ಲಿ ಕೂರುವ ಹುಡುಗರು ಲಾಸ್ಟ್​ ಬೆಂಚ್​ಗೆ ಹೋದಾಗ, ಅವರ ತಲೆ ಓದು ಬಿಟ್ಟು ಬೇರೆಲ್ಲ ಕಡೆ ತಿರುಗುತ್ತದೆ. ಹಾಗೇ ಲಾಸ್ಟ್​ ಬೆಂಚ್​ನಲ್ಲಿ ಕೂರುವ ಹುಡುಗರು ಫಸ್ಟ್​ ಬೆಂಚ್​ಗೆ ಬಂದಾಗ, ಅವರ ತಲೆ ಓದಿನತ್ತ ತಿರುಗುತ್ತದೆ. ಇದನ್ನು ಹಾಸ್ಯದ ರೂಪದಲ್ಲಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ ನಿರ್ದೇಶಕ ಬಿ.ಆರ್​. ರಾಜಶೇಖರ್​.

ಅದು ಎನ್​ಎಸ್​ಬಿ ಅಕಾಡೆಮಿ. ಖುಷ್​, ಅನುಷ್ಕಾ, ಮಾಯಾ, ವಿಕ್ಕಿ, ನವೀನ್​, ನಿಶಾ, ಆರ್ಯ, ದೀಪಿಕಾ ಒಂದು ಗ್ಯಾಂಗ್​. ಇನ್ನೊಂದು ದುಶ್ಯಂತ್​ ಮತ್ತು ಚೈತ್ರಾ ಸೇರಿ ನಾಲ್ವರದು ಗಲಾಟೆ ಗ್ಯಾಂಗ್​. "ಫಸ್ಟ್​ ಬೆಂಚ್​ನಲ್ಲಿ ಪಾಠ ಕೇಳಿಸುತ್ತೆ. ಆದರೆ, ಲಾಸ್ಟ್​ ಬೆಂಚ್​ ಪಾಠ ಕಲಿಸುತ್ತೆ' ಎಂಬ ಡೈಲಾಗ್​ ಚಿತ್ರದಲ್ಲಿದೆ. ಸ್ಟ್​ ಬೆಂಚ್​ನಲ್ಲಿ ಕೂರುತ್ತಿದ್ದ ಖುಷ್​, ವಿಕ್ಕಿ, ನವೀನ್​, ಆರ್ಯರನ್ನು ಪ್ರಿನ್ಸಿಪಲ್​ ಲಾಸ್ಟ್​ ಬೆಂಚ್​ಗೆ ಕಳುಹಿಸುತ್ತಾರೆ. ಹಾಗೇ ಲಾಸ್ಟ್​ ಬೆಂಚ್​ನಲ್ಲಿದ್ದ ಗಲಾಟೆ ಗ್ಯಾಂಗ್​ಅನ್ನು ಮೊದಲ ಬೆಂಚ್​ನಲ್ಲಿ ಕೂರಿಸುತ್ತಾರೆ. ಅದಕ್ಕೆ ಕಾರಣ ಸ್ಟ್​ ಬೆಂಚ್​ನ ಬುದ್ಧಿವಂತ ಹುಡುಗರು ಎಲ್ಲಿ ಕುಳಿತರೂ ಓದುತ್ತಾರೆ ಎಂಬ ನಂಬಿಕೆ. ಆದರೆ, ಕೊನೆಯ ಬೆಂಚ್​ಗೆ ಹೋಗುತ್ತಲೇ ಆರ್ಯ ಮತ್ತು ತಂಡದ ತಲೆ ತಿರುಗಿಬಿಡುತ್ತದೆ. ಸಿಗರೇಟ್​, ಮದ್ಯಪಾನ, ಪಾರ್ಟಿ, ಡ್ರಗ್ಸ್​ ಅಂತ ಅಡ್ಡದಾರಿ ಹಿಡಿದುಬಿಡುತ್ತಾರೆ. ಕೊನೆಗೆ ಆರ್ಯ ಮತ್ತು ಗೆಳೆಯರು ಕಲಾಸಿಪಾಳ್ಯ ಪೊಲೀಸ್​ ಠಾಣೆಯಲ್ಲಿ ಚಡ್ಡಿಯಲ್ಲಿ ಕೂರುವ ದುಸ್ಥಿತಿ. ಹೀಗೆ ದಾರಿತಪ್ಪಿದ ಮಕ್ಕಳು ಸರಿದಾರಿಗೆ ಬರುತ್ತಾರಾ? ಲಾಸ್ಟ್​ ಬೆಂಚ್​ನಲ್ಲಿದ್ದುಕೊಂಡೇ ಓದಿನಲ್ಲಿ ಸ್ಟ್​ ಆಗುತ್ತಾರಾ? ಮುಂದೇನಾಗುತ್ತೆ ಎಂಬುದೇ "ಬ್ಯಾಕ್​ ಬೆಂಚರ್ಸ್​'.


ಆರ್ಯ (ರಂಜನ್​) ತಂದೆ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್​ ಗಮನ ಸೆಳೆಯುತ್ತಾರೆ. ಹಿಂದೆಂದೂ ನಟಿಸದ ಪಾತ್ರದಲ್ಲಿ ಅವರು ಮಿಂಚಿದ್ದಾರೆ. ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಾರೆ. ಅವರೇ ಚಿತ್ರದ ಹೈಲೈಟ್​ ಎಂದರೂ ತಪ್ಪಲ್ಲ. ರಂಜನ್​, ಜತಿನ್​, ಮಾನ್ಯಾ, ಶಶಾಂಕ್​, ಕುಂಕುಮ್​, ಚತುರ್ಥಿ ರಾಜ್​ ಅವರಂತಹ ಹೊಸ ಪ್ರತಿಭೆಗಳು ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಕುಲ್​ ಅಭ್ಯಂಕರ್​ ಸಂಗೀತದ ಹಾಡುಗಳು ಚಿತ್ರಕ್ಕೆ ಪ್ಲಸ್​ ಪಾಯಿಂಟ್​. ಮನೋಹರ್​ ಜೋಶಿ ಛಾಯಾಗ್ರಹಣ, ಅಮರ್​ ಗೌಡ ಸಂಕಲನ ಚಿತ್ರವನ್ನು ಪ್ರೇಕ್ಷಕರಿಗೆ ಹತ್ತಿರವಾಗಿಸುತ್ತದೆ. 125 ನಿಮಿಷಗಳ ಚಿತ್ರವಾದ ಕಾರಣ ಎಲ್ಲೂ ಹೆಚ್ಚು ಬೋರ್​ ಅನ್ನಿಸುವುದಿಲ್ಲ. ಪೋಲಿ ಹುಡುಗರ ಜಾಲಿ ಜರ್ನಿಯಲ್ಲಿ ಒಂದೊಳ್ಳೆ ಸಂದೇಶವನ್ನೂ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net