ವಲಸೆ ಕಾರ್ಮಿಕರ ಬದುಕಿನ ಸುತ್ತ ‘ಪಪ್ಪಿ’: ಆಯುಷ್ ಮಲ್ಲಿ ನಿರ್ದೇಶನದ ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ

puppy
Published on

ಬೆಂಗಳೂರು: ಕನ್ನಡದ ಕಿರುತೆರೆಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದ ಸಿಂಧನೂರು ತಾಲೂಕು ದಡೇಸೂಗೂರಿನ ಆಯುಷ್ ಮಲ್ಲಿ ‘ಫಸ್ಟ್ ಲವ್’ ಮೂಲಕ ಡೈರೆಕ್ಟರ್ ಕ್ಯಾಪ್ ಧರಿಸಿದವರು. ಇದೀಗ ಅವರ ನಿರ್ದೇಶನದ ಎರಡನೇ ಸಿನಿಮಾ ‘ಪಪ್ಪಿ’ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಲಾಗಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ದುಡಿಯಲು ಬರುವ ವಲಸೆ ಕಾರ್ಮಿಕರ ಬದುಕು ಹಾಗೂ ಇಬ್ಬರ ಬಾಲಕರ ಮುಗ್ಧತೆಯ ಕುರಿತ ‘ಪಪ್ಪಿ’ ಚಿತ್ರವನ್ನು ಜವಾರಿ ಸೊಗಡಿನ ಸಂಭಾಷಣೆಯಲ್ಲೇ ಚಿತ್ರಿಸಲಾಗಿದೆ. ಸಿನಿಮಾ ಕುರಿತು ಆಯುಷ್, ‘ಉತ್ತರ ಕರ್ನಾಟಕ ಭಾಗದ ಜನರು ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬರುವ ದೃಶ್ಯಗಳನ್ನು ಹಲವಾರು ಬಾರಿ ನೋಡಿದ್ದೆ. ಇದನ್ನೇ ದೃಶ್ಯದ ಮೂಲಕ ತೋರಿಸಬೇಕು ಎಂದು ನಿರ್ಧರಿಸಿದೆ. ವಲಸೆ ಕಾರ್ಮಿಕರ ಭಾವನೆ ಹಾಗೂ ಮುಗ್ಧತೆ ತೋರಿಸುವುದರ ಜತೆಗೆ ಬೆಂಗಳೂರು-ಉತ್ತರ ಕರ್ನಾಟಕದ ಸಂಬಂಧದ ಬಗ್ಗೆ ‘ಪಪ್ಪಿ’ಯಲ್ಲಿ ಬೆಳಕು ಚೆಲ್ಲಲಾಗಿದೆ. ಹಾಸ್ಯ, ಎಮೋಷನ್ಸ್ ಜತೆಗೆ ಗಂಭೀರ ವಿಚಾರಗಳನ್ನೂ ಹೇಳಲು ಪ್ರಯತ್ನಿಸಿದ್ದೇವೆ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿ, ಕೊಪ್ಪಳದ ಗುನ್ನಾಳದಲ್ಲಿ 15 ದಿನಗಳ ಕಾಲ ಶೂಟಿಂಗ್ ನಡೆಸಿದ್ದೇವೆ. ಬಾಲ ನಟರಾದ ಪರಶುರಾಮ (ಜಗದೀಶ್), ಆದಿ ಮುಖ್ಯಭೂಮಿಕೆಯಲ್ಲಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ.

ಫಿಲಂ ಫೆಸ್ಟಿವಲ್‌ನಲ್ಲಿ ತಿರಸ್ಕಾರ: ಬೆಂಗಳೂರಿನಲ್ಲಿ ಇದೇ ಮಾರ್ಚ್ 1ರಿಂದ ನಡೆಯುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ‘ಪಪ್ಪಿ’ಯನ್ನು ಕಳುಹಿಸಿಕೊಡಲಾಗಿತ್ತು. ಆದರೆ, ಅಲ್ಲಿ ಅದನ್ನು ತಿರಸ್ಕಾರ ಮಾಡಲಾಗಿದೆಯಂತೆ. ಈ ಬಗ್ಗೆ ಮಲ್ಲಿ, ‘ವಿಮಿಯೋ ಆ್ಯಪ್‌ನಲ್ಲಿ ನಮ್ಮ ಸಿನಿಮಾ ಅಪ್‌ಲೋಡ್ ಮಾಡಿದ್ದೆ. ಆದರೆ, 2 ತಾಸಿನ ಚಿತ್ರವನ್ನು ಕೇವಲ 10.57 ನಿಮಿಷ ಮಾತ್ರ ನೋಡಿರುವ ಜ್ಯೂರಿಗಳು ನಮ್ಮ ಸಿನಿಮಾ ತಿರಸ್ಕರಿಸಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಸಿನಿಮಾ ನೋಡಿದ್ದೇವೆ ಎಂದು ಪ್ರಮಾಣ ಪತ್ರ ನೀಡಿದರು. ಅದರಲ್ಲಿ ನಮ್ಮ ಚಿತ್ರಕ್ಕೆ ‘ಸಿ’ ಗ್ರೇಡ್ ನೀಡಿದ್ದು, ಮಕ್ಕಳ ಅಭಿನಯ ಮನಮುಟ್ಟುವಂತಿಲ್ಲ ಎಂದು ಷರಾ ಬರೆದಿದ್ದಾರೆ. ಇದು ಸಹಜವಾಗಿ ನಮಗೆ ಕೋಪ ತರಿಸಿತು. ಈಗ ಟ್ರೇಲರ್ ಬಿಡುಗಡೆ ಮಾಡಿದೆ, ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ’ ಎಂದು ಹೇಳಿಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net