ಪೃಥ್ವಿಗೆ ಅಯಾನಾ ನಾಯಕಿ; ದೂರದರ್ಶನ ಚಿತ್ರೀಕರಣ ಮುಕ್ತಾಯ

Ayana
Published on

ಬೆಂಗಳೂರು: ಪೃಥ್ವಿ ಅಂಬಾರ್ ನಾಯಕನಾಗಿರುವ ‘ದೂರದರ್ಶನ’ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾರೆ. ಈ ಹಿಂದೆ ‘ಇಲ್ಲಿ ಇರಲಾರೆ ಅಲ್ಲಿಗೆ ಹೋಗಲಾರೆ’ ಚಿತ್ರದಲ್ಲಿ ನಟಿಸಿದ್ದ ಅಯಾನಾ, ‘ದೂರದರ್ಶನ’ಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸುಮಾರು 40 ಹುಡುಗಿಯರನ್ನ ಆಡಿಷನ್ ಮಾಡಿ, ಅವರಲ್ಲಿ ಅಯಾನಾ ಅವರನ್ನು ಆಯ್ಕೆ ಮಾಡಲಾಗಿದೆ.

ಚಿತ್ರದಲ್ಲಿ ಅಯಾನಾ, ಮೈತ್ರಿ ಎಂಬ ಅಪ್ಪನ ಆಸರೆಯಲ್ಲೇ ಬೆಳೆಯುವ ರಿಕ್ಷಾ ಡ್ರೖೆವರ್ ಮಗಳ ಪಾತ್ರದಲ್ಲಿ ನಟಿಸಿದ್ದಾರೆ. ಸಂಭಾಷಣೆಕಾರ ಹಾಗೂ ಸಹಾಯಕ ನಿರ್ದೇಶಕನಾಗಿ ಹಲವು ಚಿತ್ರಗಳಲ್ಲಿ ಕೆಲಸ ಮಾಡಿರುವ, ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಸುಕೇಶ್ ಶೆಟ್ಟಿಗೆ ‘ದೂರದರ್ಶನ’ ನಿರ್ದೇಶಕನಾಗಿ ಚೊಚ್ಚಲ ಪ್ರಯತ್ನ. ನೈಜ ಘಟನೆ ಜತೆ ಕೆಲವು ಕಾಲ್ಪನಿಕ ಸ್ಪರ್ಶವನ್ನೂ ಚಿತ್ರಕ್ಕೆ ನೀಡಲಾಗಿದೆ. ಮಂಗಳೂರು ಹಾಗೂ ಪುತ್ತೂರು ಮಧ್ಯದ ಆರ್ಲಪದವಿನಲ್ಲಿ 38 ದಿನಗಳ ಕಾಲ ಚಿತ್ರೀಕರಣ ನಡೆದಿದೆ.

‘ಉಗ್ರಂ’ ಮಂಜು, ಸುಂದರ್ ವೀಣಾ, ಹರಿಣಿ, ದೀಪಕ್ ರೈ, ರಘು ರಾಮನಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜೇಶ್ ಭಟ್ ನಿರ್ವಿುಸುತ್ತಿರುವ ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ, ಅರುಣ್ ಸುರೇಶ್ ಛಾಯಾಗ್ರಹಣ, ನಂದೀಶ್ ಸಂಭಾಷಣೆ ಹಾಗೂ ಪ್ರದೀಪ್ ರಾವ್ ಸಂಕಲನವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net