

ಫೆಬ್ರವರಿ ಐದರಿಂದ ಮೇ 14ರವರೆಗೂ ಪ್ರತಿ 15 ದಿನಗಳ ಗ್ಯಾಪ್ನಲ್ಲಿ ಕನ್ನಡದ ಹಲವು ಬಹು ನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಪೈಪೋಟಿ ನಡೆಸಿವೆ. ಮೇ 14ರಂದು ಶಿವರಾಜಕುಮಾರ್ ಕುಮಾರ್ ಅಭಿನಯದ ‘ಭಜರಂಗಿ 2’ ಚಿತ್ರವು ಬಿಡುಗಡೆಯಾಗಲಿಕ್ಕಿದೆ. ಆ ನಂತರ ರಾಜ್ ಬಿ ಶೆಟ್ಟಿ ಮತ್ತು ರಿಷಭ್ ಶೆಟ್ಟಿ ಅಭಿನಯದ ‘ಗರುಡ ಗಮನ ರಿಷಭ ವಾಹನ’ ಚಿತ್ರವು ಜೂನ್ 04ರಂದು ಬಿಡುಗಡೆಯಾಗಲಿದೆ. ಈ ಗ್ಯಾಪ್ನಲ್ಲಿ ಯಾವುದೇ ಚಿತ್ರವಿಲ್ಲವಲ್ಲ ಎನ್ನುತ್ತಿದ್ದವರಿಗೆ ಇದೀಗ ಮೇ 28ಕ್ಕೆ ಇನ್ನೊಂದು ನಿರೀಕ್ಷೆಯ ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.
ಶರಣ್ ಅಭಿನಯದ ‘ಅವತಾರ್ ಪುರುಷ - ಅಷ್ಟಮಂಡಲಕ ದಿಗ್ಬಂಧನ’ ಚಿತ್ರವನ್ನು ಮೇ 28ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ‘ಅವತಾರ್ ಪುರುಷ’ ಎರಡು ಭಾಗಗಳಲ್ಲಿ ನಿರ್ಮಾಣವಾಗಿದ್ದು, ಈ ಪೈಕಿ ಮೊದಲನೇ ಭಾಗವನ್ನು ಮೇ 28ಕ್ಕೆ ಬಿಡುಗಡೆ ಮಾಡಲು ತಯಾರಿ ನಡೆದಿದ್ದು, ಅದಾಗಿ ಎರಡ್ಮೂರು ತಿಂಗಳ ನಂತರ ಇನ್ನೊಂದು ಭಾಗದ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಶರಣ್ಗೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದು, ಮಿಕ್ಕಂತೆ ಸಾಯಿಕುಮಾರ್, ಶ್ರೀನಗರ ಕಿಟ್ಟಿ, ಸುಧಾರಾಣಿ, ಭವ್ಯ ಮುಂತಾದವರು ನಟಿಸಿದ್ದಾರೆ.