austin na mahanmouna movie review: ಆಸ್ಟಿನ್ ಮೌನದ ಪಯಣ

austin
Published on

ಚಿತ್ರ: ಆಸ್ಟಿನ್‌ನ ಮಹನ್ಮೌನ

ನಿರ್ದೇಶನ: ವಿನಯ್ ಕುಮಾರ್ ವೈದ್ಯನಾಥನ್

ತಾರಾಗಣ: ವಿನಯ್ ಕುಮಾರ್ ವೈದ್ಯನಾಥನ್, ರಿಶಾ ಗೌಡ, ಪ್ರಕೃತಿ ಪ್ರಸಾದ್, ಜಗ್ಗಪ್ಪ, ಬಲ ರಾಜವಾಡಿ ಮತ್ತಿತರರು.

ಶಿವ ಸ್ಥಾವರಮಠ

ಕನ್ನಡದಲ್ಲಿ ಕ್ರಿಶ್ಚಿಯನ್ ಹಿನ್ನೆಲೆಯ ಸಿನಿಮಾಗಳು ಬಂದಿರುವುದು ತೀರಾ ವಿರಳ. ಈ ಕೊರತೆ ನೀಗಿಸುವ ನಿಟ್ಟಿನಲ್ಲಿ ‘ಆಸ್ಟಿನ್‌ನ ಮಹನ್ಮೌನ’ ಒಂದು ಪ್ರಯತ್ನ ಮಾಡಿದೆ. ಎರಡು ಕ್ರೈಸ್ತ ಕುಟುಂಬ ಹಾಗೂ ಮನಸ್ಸುಗಳ ನಡುವೆ ನಡೆಯುವ ಕಥೆ ಇದಾಗಿದ್ದು, ಇಲ್ಲಿ ಹದವಾದ ಪ್ರೇಮಕಥೆಯೊಂದಿಗೆ ದ್ವೇಷ, ಅಂತಸ್ತಿಕೆ ವಿಚಾರಗಳನ್ನು ನಿರ್ದೇಶಕ ವಿನಯ್ ಹೇಳಿದ್ದಾರೆ.

ಆಸ್ಟಿನ್ (ವಿನಯ್) ಮತ್ತು ಜಾಸ್ಮಿನ್ (ರಿಷಿ ಗೌಡ) ಪ್ರೀತಿಸುತ್ತಿರುವ ವಿಚಾರ ಜಾಸ್ಮಿನ್ ತಂದೆ ಡಿಸೋಜಾಗೆ (ಬಲ ರಾಜವಾಡಿ) ಗೊತ್ತಾಗುತ್ತದೆ. ಬಳಿಕ ಆಸ್ಟಿನ್ ಕುಟುಂಬದವರು ಎಷ್ಟೇ ಪ್ರಯತ್ನಿಸಿದರೂ ಡಿಸೋಜಾ ಮಗಳಿಗೆ ಬೇರೆ ಸಂಬಂಧ ನೋಡಿ ಮದುವೆ ಮಾಡುತ್ತಾನೆ. ಆದರೆ, ಮದುವೆಯಾದರೂ ಜಾಸ್ಮಿನ್‌ಗೆ ನೆಮ್ಮದಿಯಿಲ್ಲ. ಗಂಡನಿಂದ ದೂರವಾಗಿ ತವರು ಮನೆ ಸೇರುತ್ತಾಳೆ. ಮತ್ತೆ ಅಸ್ಟಿನ್ ಬಳಿ ಬಂದರೆ, ಆತ ಮತ್ತೊಂದು ಹುಡುಗಿಯ ಪ್ರೀತಿಯಲ್ಲಿದ್ದಾನೆ. ಇವೆಲ್ಲ ನಡೆಯುತ್ತಿರುವಾಗಲೇ ನಡು ನಡುವೆ ಹೊಡೆದಾಟ, ರಕ್ತಪಾತ ಕಾಣಿಸಿಕೊಳ್ಳುತ್ತದೆ. ಆಸ್ಟಿನ್ ಪ್ರೀತಿಯ ಹಿಂದೆ ಏನೋ ನಿಗೂಢ ಘಟನೆಗಳು ನಡೆಯುತ್ತಿವೆ. ಆ ಘಟನೆಗಳೇನು ಎಂದು ತಿಳಿಯಲು ‘ಆಸ್ಟಿನ್‌ನ ಮಹನ್ಮೌನ’ ನೋಡಬೇಕಷ್ಟೇ.

ಈ ಚಿತ್ರದಲ್ಲಿ ವಿನಯ್ ಒನ್ ಮ್ಯಾನ್ ಆರ್ಮಿ. ನಿರ್ದೇಶನ, ನಟನೆ ಹಾಗೂ ನಿರ್ಮಾಣ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಇನ್ನು ಅವರು ಆಯ್ಕೆ ಮಾಡಿಕೊಂಡಿರುವ ಕಥೆ ವಿಭಿನ್ನ ಅನಿಸುತ್ತದೆ. ಇಡೀ ಕಥೆ ಮೌನದಲ್ಲಿಯೇ ಸಾಗುತ್ತದೆ. ಪ್ರೀತಿ-ದ್ವೇಷದ ಅಂಶಗಳು ಇರುವ ಕಾರಣ ಇನ್ನೊಂದಿಷ್ಟು ರೋಚಕತೆ ಸೃಷ್ಟಿಸುವ ಅವಕಾಶ ಇತ್ತು. ಸುಂದರ ಕಡಲು, ಕಣ್ಮನ ಸೆಳೆಯುವ ದೃಶ್ಯಗಳು, ಪಾತ್ರಗಳ ಭಾವುಕತೆಯೇ ಕಥೆಯ ಜೀವಾಳ. ಇಡೀ ಚಿತ್ರವನ್ನು ವಿನಯ್ ಹೊತ್ತು ಸಾಗಿದ್ದಾರೆ. ಕೆಲ ಭಾವುಕ ದೃಶ್ಯಗಳಲ್ಲಿ ಗಮನಸೆಳೆಯುತ್ತಾರೆ. ಬಲ ರಾಜವಾಡಿ ಗತ್ತು, ಜಗ್ಗಪ್ಪ, ವಿನಯ್ ಗೊಬ್ಬರಗಾಲ ಕಾಮಿಡಿ ಇಷ್ಟವಾಗುತ್ತದೆ. ನಟಿಯರಾದ ರಿಷಿ ಗೌಡ, ಪ್ರಕೃತಿ ಪ್ರಸಾದ್ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ‘ಆಸ್ಟಿನ್’ ಮೌನದ ಪಯಣವನ್ನು ಛಾಯಾಗ್ರಾಹಕರಾದ ರಾಜ್‌ಕಾಂತ್, ಶ್ರೀನಿವಾಸ್ ಸುಂದರವಾಗಿ ಸೆರೆ ಹಿಡಿದಿದ್ದಾರೆ. ವಿಶ್ವಂಭರ ಸಂಗೀತ ಇಡೀ ಕಥೆಯನ್ನು ಆವರಿಸಿಕೊಳ್ಳುತ್ತದೆ. ಇಡೀ ಚಿತ್ರವು ಪಾತ್ರಗಳು ಪರಿಚಯವಾಗಿದ್ದು, ನೈಜ ಕಥೆ ಮುಂದಿನ ಭಾಗದಲ್ಲಿ ತೆರೆದುಕೊಳ್ಳಲಿದೆ.

ರೇಟಿಂಗ್: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net