

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಕೆಲ ದಿನಗಳ ಹಿಂದೆ ಸುಶಾಂತ್ ಶವಪರೀಕ್ಷೆ ನಡೆಸಲು ಏಮ್ಸ್ ವೈದ್ಯರ ತಂಡವನ್ನು ರಚನೆ ಮಾಡಿತ್ತು. ಪರೀಕ್ಷೆ ನಡೆಸಿದ ತಂಡ ಸುಶಾಂತ್ರದ್ದು ಕೊಲೆಯಲ್ಲ, ಅದೊಂದು ಆತ್ಮಹತ್ಯೆ ಎಂದು ಬಹಿರಂಗಪಡಿಸಿದ್ದರು. ಈ ಬಗ್ಗೆ ಸಿಬಿಐ ಮಾತ್ರ ಈವರೆಗೂ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಿರುವಾಗ ಸುಶಾಂತ್ ಪ್ರಕರಣ ಮತ್ತೊಂದು ಸ್ಫೋಟಕ ತಿರುವು ಪಡೆದುಕೊಂಡಿದೆ.
ಸಿಬಿಐ ಮನವಿ ಮೇರೆಗೆ ಡಾ. ಸುಧೀರ್ ಗುಪ್ತಾ ನೇತೃತ್ವದಲ್ಲಿ ಏಮ್ಸ್ ವಿಧಿವಿಜ್ಞಾನ ತಂಡ ರಚೆನೆಯಾಗಿತ್ತು. ಸುಶಾಂತ್ರದ್ದು ಆತ್ಮಹತ್ಯೆಯೆಂದು ವರದಿ ನೀಡಿದ ಬೆನ್ನಲ್ಲೇ ಅದನ್ನು ಸುಶಾಂತ್ ಫ್ಯಾಮಿಲಿ ಲಾಯರ್ ವಿಕಾಸ್ ಸಿಂಗ್ ಸಹ ಪ್ರಶ್ನಿಸಿದ್ದು, ವರದಿಯಿಂದ ಹೆಚ್ಚು ಗೊಂದಲಕ್ಕೀಡಾಗಿದ್ದೇನೆ. ಪ್ರಕರಣದ ಕಡತಗಳನ್ನು ಪರಿಶೀಲಿಸಲು ಸಿಬಿಐ ಹೊಸ ವೈದ್ಯರ ತಂಡವನ್ನು ರಚಿಸಬೇಕೆಂದು ಆಗ್ರಹಿಸಿದ್ದಾರೆ.
ಇದರ ನಡುವೆ ಆಡಿಯೋ ತುಣುಕೊಂದು ಸೋರಿಕೆಯಾಗಿದ್ದು, ಮಾಧ್ಯಮವೊಂದಕ್ಕೆ ಲಭ್ಯವಾಗಿರುವ ಆಡಿಯೋ ಪ್ರಕಾರ ಸುಶಾಂತ್ರದ್ದು ಕೊಲೆ ಎನ್ನಲಾಗಿದೆ. ಡಾ. ಸುಧೀರ್ ಗುಪ್ತಾ ಅವರದ್ದು ಎನ್ನಲಾದ ಆಡಿಯೋದಲ್ಲಿ ಸುಶಾಂತ್ರದ್ದು ಕೊಲೆ, ಆತ್ಮಹತ್ಯೆಯಿಂದ ಸತ್ತಿಲ್ಲ ಎಂದು ಹೇಳಿದ್ದಾರೆ. ಶವಪರೀಕ್ಷೆಯ ವೇಳೆ ಸುಶಾಂತ್ ಅವರ ಫೋಟೋಗಳನ್ನು ನೀಡಿ ಈ ಹೇಳಿಕೆಯನ್ನು ನೀಡಿದ್ದಾರೆನ್ನಲಾಗಿದೆ.
ಆಡಿಯೋ ಲೀಕ್ ಆಗುತ್ತಿದ್ದಂತೆ ಸುಶಾಂತ್ ಕುಟುಂಬ ಮತ್ತೊಮ್ಮೆ ಶವಪರೀಕ್ಷೆ ತನಿಖೆ ನಡೆಸುವಂತೆ ಒತ್ತಾಯಿಸಿದೆ. (ಏಜೆನ್ಸೀಸ್)