ಅಂಬಿ ಎರಡನೇ ವರ್ಷದ ಪುಣ್ಯ ತಿಥಿ; ಬೈಯ್ಯುವವರು ಯಾರೂ ಇಲ್ಲದಂತಾಗಿದೆ ಎಂದ ದರ್ಶನ್​

darshan
Published on

ಬೆಂಗಳೂರು: ಅಂಬರೀಷ್ ನಿಧನರಾಗಿ ಇಂದಿಗೆ ಎರಡು ವರ್ಷ. ಸರಿಯಾಗಿ ಎರಡು ವರ್ಷಗಳ ಹಿಂದೆ, ಇದೇ ದಿನ ಅವರು ಅನಾರೋಗ್ಯದಿಂದ ಇನ್ನಿಲ್ಲವಾದರು. ಅವರ ಈ ಪುಣ್ಯ ತಿಥಿಯಂದು ಅಭಿಮಾನಿಗಳು ವಿಶೇಷ ಅಭಿಮಾನ ಮೆರೆಯುತ್ತಿದ್ದಾರೆ. ಮಂಡ್ಯದಲ್ಲಿ ದೇವಸ್ಥಾನ ಕಟ್ಟಿ ಪೂಜೆ ಮಾಡಿದರೆ, ಇತ್ತ ಕಂಠೀರವ ಸ್ಟುಡಿಯೋದಲ್ಲಿ ಸಾಕಷ್ಟು ಮಂದಿ ನೆಚ್ಚಿನ ನಟನ ಸಮಾಧಿಗೆ ನಮಸ್ಕರಿಸುತ್ತಿದ್ದಾರೆ. ಅದೇ ರೀತಿ ನಟ ದರ್ಶನ್​ ಸಹ ಸಮಾಧಿಗೆ ನಮಸ್ಕರಿಸಿ ಬಂದಿದ್ದಾರೆ.

ನಟಿ, ಸಂಸದೆ ಸುಮಲತಾ ಅಂಬರೀಷ್​, ಅಭಿಷೇಕ್ ಅಂಬರೀಷ್​ ಜತೆಗೆ ಆಗಮಿಸಿದ ದರ್ಶನ್​, ಬಳಿಕ ಅಂಬರೀಷ್​ ಅವರ ಅನುಪಸ್ಥಿತಿಯನ್ನು ನೆನಪು ಮಾಡಿಕೊಂಡಿದ್ದಾರೆ. ‘24 ಗಂಟೆ ನನ್ನ ಜತೆಗೆ ಇರುತ್ತಾರೆ. ಪ್ರತಿ ಸಲ ಸ್ಟುಡಿಯೋಕ್ಕೆ ಬಂದರೆ, ಇಲ್ಲಿ ಬಂದೇ ನನ್ನ ಮುಂದಿನ ಕೆಲಸ. ಇದು ಅವರ ದೇವಸ್ಥಾನ. ನಾನು ದೇವರ ರೀತಿಯಲ್ಲಿಯೇ ಅವರನ್ನು ಪೂಜಿಸುತ್ತೇನೆ. ಅವರಿಲ್ಲ ಎನ್ನುವುದಕ್ಕಿಂತ ಬೈಯುವವರೂ ಇಲ್ಲದಂತಾಗಿದೆ. ಏ ಬರ್ರೋ ಎನ್ನುವ ಆ ಧ್ವನಿಯನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ ಎಂದು ದರ್ಶನ್​ ಹೇಳಿಕೊಂಡಿದ್ದಾರೆ.

ಅಷ್ಟೇ ಅಲ್ಲ ಅವರ ಬಗ್ಗೆ ಟ್ವೀಟ್​ ಸಹ ಮಾಡಿದ್ದಾರೆ. ‘ನನ್ನ ಪ್ರೀತಿಯ ಸೀನಿಯರ್ ಅಂಬಿ ಅಪ್ಪಾಜಿ ಇಂದಿಗೆ ದೈಹಿಕವಾಗಿ ಅಗಲಿ 2 ಸಂವತ್ಸರಗಳು ಕಳೆದಿವೆ. ಆದರೆ ನಮ್ಮೆಲರ ಮನಗಳಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅವರ ನೇರನುಡಿಯ ವ್ಯಕ್ತಿತ್ವ, ಮಾಡಿರುವ ಸಹೃದಯಿ ಕಾರ್ಯಗಳು ಸದಾ ಕನ್ನಡಿಗರ ಮನಸ್ಸಲ್ಲಿ ಜೀವಂತವಾಗಿರುತ್ತವೆ‘ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net