

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ರಾಘವ್ ನಾಯಕ್ ಮತ್ತು ಪ್ರಶಾಂತ್ ರಾಜ್ ಜಂಟಿಯಾಗಿ ಆ್ಯಕ್ಷನ್&ಕಟ್ ಹೇಳಿರುವ ಮೆಡಿಕಲ್ ಥ್ರಿಲ್ಲರ್ ಸಿನಿಮಾ "O2'. ಅಶ್ವಿನಿ ಪುನೀತ್ ನಿರ್ಮಿಸಿರುವ ಈ ಚಿತ್ರಕ್ಕೆ ಆಶಿಕಾ ರಂಗನಾಥ್ ನಾಯಕಿಯಾಗಿದ್ದು, ಇತ್ತೀಚೆಗಷ್ಟೆ ಟ್ರೇಲರ್ ರಿಲಿಸ್ ಮಾಡಲಾಗಿದೆ.
ನಿರ್ದೇಶಕ ರಾಘವ್, "ಇದೊಂದು ಕುತೂಹಲಕಾರಿ ಮೆಡಿಕಲ್ ಥ್ರಿಲ್ಲರ್. ಹಾಗಂತ ಕಥೆಯಲ್ಲಿ ಕೇವಲ ಥ್ರಿಲ್ಲರ್ ಅಂಶಗಳಷ್ಟೇ ಅಲ್ಲ, ಪ್ರೀತಿ-ಪ್ರೇಮವೂ ಇರಲಿದೆ. ಹೀಗಾಗಿ ಇದನ್ನು ಒಂದು ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ಎನ್ನಬಹುದು' ಎಂದು ಹೇಳಿಕೊಳ್ಳುತ್ತಾರೆ. ಸಾಯುತ್ತಿರುವವರನ್ನು ಬದುಕಿಸುವುದೇ ವೈದ್ಯರ ಕರ್ತವ್ಯ ಎಂದು ನಂಬುವ ಶ್ರದ್ಧಾ ಎಂಬ ವೈದ್ಯೆಯ ಪಾತ್ರದಲ್ಲಿ ಆಶಿಕಾ ಕಾಣಿಸಿಕೊಳ್ಳಲಿದ್ದಾರೆ. ತನ್ನ ಸಂಶೋಧನೆಯ ಫಲವಾದ "O2' ಎಂಬ ಔಷಧದ ಮೂಲಕ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವವರನ್ನು ಬದುಕಿಸಲು ಶ್ರದ್ಧಾ ಮುಂದಾಗುತ್ತಾಳೆ. ಈ ಹಾದಿಯಲ್ಲಿ ಆಕೆ ಎದುರಿಸುವ ಸಮಸ್ಯೆಗಳೇನು? ಶ್ರದ್ಧಾ ಗುರಿ ತಲುಪುತ್ತಾಳಾ? ಎಂಬುದೇ ಚಿತ್ರದ ಒನ್ಲೈನ್.
ಆಶಿಕಾ ರಂಗನಾಥ್ ಜತೆ ಪ್ರವಿಣ್ ತೇಜ್, ರಾವ್ ನಾಯಕ್, ಸಿರಿ ರವಿಕುಮಾರ್, ಪ್ರಕಾಶ್ ಬೆಳವಾಡಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇದೇ ಏ. 19ರಂದು ಸಿನಿಮಾ ತೆರೆಗೆ ಬರಲಿದೆ.