ದೇವಕನ್ಯೆಯಾದ ಆಶಿಕಾ: ಗತವೈಭವಕ್ಕೆ ನಾಯಕಿಯಾಗಿ ಆಯ್ಕೆ

Ashika
Published on

ಬೆಂಗಳೂರು: ಈ ವರ್ಷದ ಆರಂಭದಲ್ಲಿ ದುಶ್ಯಂತ್ ಅಭಿನಯದಲ್ಲಿ ‘ಗತವೈಭವ’ ಎಂಬ ಹೊಸ ಚಿತ್ರವನ್ನು ಘೋಷಿಸಿದ್ದರು ಸಿಂಪಲ್ ಸುನಿ. ದುಶ್ಯಂತ್ ಎಂಬ ಹೊಸ ಹುಡುಗನನ್ನು ಈ ಚಿತ್ರದ ಮೂಲಕ ಪರಿಚಯಿಸುತ್ತಿರುವ ಸುನಿ, ನಾಯಕನ ಪರಿಚಯದ ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ಆ ನಂತರ ಚಿತ್ರದ ಬಗ್ಗೆ ಸುದ್ದಿಯೇ ಇರಲಿಲ್ಲ. ಚಿತ್ರ ಯಾವ ಹಂತದಲ್ಲಿದೆ, ಏನಾಗುತ್ತಿದೆ ಎಂಬ ಮಾಹಿತಿಯೇ ಇರಲಿಲ್ಲ. ಈಗ ಚಿತ್ರಕ್ಕೆ ನಾಯಕಿಯಾಗಿ ಆಶಿಕಾ ರಂಗನಾಥ್ ಆಯ್ಕೆಯಾಗಿರುವ ಸುದ್ದಿ ಬಂದಿದ್ದು, ಇಂದು ನಾಯಕಿಯನ್ನು ಪರಿಚಯಿಸುವ ವಿಡಿಯೋ, ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ.

‘ಗತವೈಭವ’ ಒಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು, ಫ್ಯಾಂಟಸಿ ಅಂಶಗಳೂ ಇವೆಯಂತೆ. ಆಶಿಕಾ ಈ ಚಿತ್ರದಲ್ಲಿ ದೇವಕನ್ಯೆ ಮತ್ತು ಪೋರ್ಚುಗೀಸ್ ಯುವತಿಯ ಪಾತ್ರ ಮಾಡುತ್ತಿದ್ದಾರಂತೆ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ನಿರ್ದೇಶಕ ಸಿಂಪಲ್ ಸುನಿ, ‘ಇದೊಂದು ಫ್ಯಾಂಟಸಿ ರಾಮ್ಾಮ್ ಚಿತ್ರ. ಇಲ್ಲಿ ಆಶಿಕಾಗೆ ಎರಡು ಶೈಲಿಯ ಪಾತ್ರವಿದೆ. ಇಂದು ಬೆಳಿಗ್ಗೆ 11:11ಕ್ಕೆ ಸುನಿ ಸಿನಿಮಾಸ್ ಯೂಟ್ಯೂಬ್ ಚಾನಲ್​ನಲ್ಲಿ ನಾಯಕಿಯ ಅನಾವರಣದ ವೀಡಿಯೋ ಬಿಡುಗಡೆಯಾಗಲಿದೆ’ ಎನ್ನುತ್ತಾರೆ.

‘ಗತವೈಭವ’ ಚಿತ್ರದ ಶೇ. 30ರಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದೆ. ಸುನಿ ನಿರ್ದೇಶನದ ಜತೆಗೆ ಕಥೆ-ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಬರೆದಿದ್ದಾರೆ. ಅಷ್ಟೇ ಅಲ್ಲ, ದೀಪಕ್ ಜತೆಗೆ ಸೇರಿ ಸುನಿ ಸಿನಿಮಾಸ್ ಸಂಸ್ಥೆಯಡಿ ಚಿತ್ರವನ್ನೂ ನಿರ್ವಿುಸುತ್ತಿದ್ದಾರೆ. ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ವಿಲಿಯಂ ಡೇವಿಡ್ ಛಾಯಾಗ್ರಹಣ ಮತ್ತು ಜೂಡಾ ಸ್ಯಾಂಡಿ ಸಂಗೀತ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net