

ಅವರು ಬದುಕಿದ್ದಿದ್ದರೆ ಇವತ್ತಿಗೆ 73 ತುಂಬಿ 74ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಅಷ್ಟೇ ಅಲ್ಲ, ಇನ್ನೊಂದಿಷ್ಟು ಚಿತ್ರಗಳಲ್ಲಿ ನಟನೆ, ನಿರ್ದೇಶನ, ನಿರ್ಮಾಣ ಮುಂದುವರೆಸುತ್ತಿದ್ದರು. ಆದರೆ, ಅದಕ್ಕೆ ವಿಧಿಯ ಒಪ್ಪಿಗೆ ಇರಲಿಲ್ಲ. ಅದೇ ಕಾರಣಕ್ಕೆ ಟೈಗರ್ ಪ್ರಭಾಕರ್ ಬಹಳ ಬೇಗ ಹೊರಟುಬಿಟ್ಟರು. ಪ್ರಭಾಕರ್ ಅವರು ಮರೆಯಾಗಿ 19 ವರ್ಷ ಕಳೆದರೂ, ಕನ್ನಡಿಗರ ಮನಸ್ಸಿನಲ್ಲಿ ತಮ್ಮ ಚಿತ್ರ ಮತ್ತು ಪಾತ್ರಗಳ ಮೂಲಕ ಹಸಿರಾಗಿಯೇ ಉಳಿದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಟೈಗರ್ ಪ್ರಭಾಕರ್ ನಡೆದು ಬಂದ ಹಾದಿಯೇ ಅದ್ಭುತ. ಅವರು ಸಾಮಾನ್ಯ ಫೈಟರ್ ಆಗಿ ಬಂದರು. ಪೋಷಕ ಪಾತ್ರಗಳಲ್ಲಿ ಗುರುತಿಸಿಕೊಂಡರು. ಹೀರೋ ಆದರು. ನಿರ್ದೇಶಕ-ನಿರ್ಮಾಪಕರಾದರು. ಕಥೆ-ಚಿತ್ರಕಥೆ ಬರೆದರು. ಛಾಯಾಗ್ರಹಣ ಮಾಡಿದರು. ಸಂಗೀತವನ್ನೂ ಸಂಯೋಜಿಸಿದರು. ಹೀಗೆ ಬಹುಮುಖ ಪ್ರತಿಭೆಯಿಂದ ದೊಡ್ಡ ಹೆಸರು ಮಾಡಿದರು ಟೈಗರ್ ಪ್ರಭಾಕರ್.
ಕನ್ನಡ ಚಿತ್ರರಂಗದಲ್ಲಿ ತಮ್ಮ ಕಟ್ಟುಮಸ್ತಾದ ದೇಹದಿಂದ ಮೊದಲು ಬಾರಿಗೆ ಹೆಸರು ಮಾಡಿದವರೆಂದರೆ ಅದು ಪ್ರಭಾಕರ್. ಬಾಲ್ಯದಲ್ಲಿ ಬಾಕ್ಸರ್ ಆಗಬೇಕೆಂದು ಕನಸು ಕಂಡಿದ್ದ ಪ್ರಭಾಕರ್, ಅದಕ್ಕಾಗಿ ತಮ್ಮ ದೇಹವನ್ನು ಹರಿತಗೊಳಿಸಿದ್ದರು. ಅದಕ್ಕಾಗಿ ಹಗಲು-ರಾತ್ರಿ ಜಿಮ್‌ನಲ್ಲಿ ಬೆವರು ಸುರಿಸಿದ್ದರು. 60ರ ದಶಕದ ಕೊನೆಯಲ್ಲಿ ‘ಕಾಡಿನ ರಹಸ್ಯ’ ಎಂಬ ಚಿತ್ರ ನಿರ್ಮಿಸುತ್ತಿದ್ದ ಎಂ.ಪಿ. ಶಂಕರ್ ಅವರ ಕಣ್ಣಿಗೆ ಒಮ್ಮೆ ಪ್ರಭಾಕರ್ ಬಿದ್ದರಂತೆ. ಚಿತ್ರದ ಒಂದು ಪಾತ್ರಕ್ಕೆ ಪ್ರಭಾಕರ್ ಅವರೇ ಸರಿ ಎಂದು ಶಂಕರ್ ತೀರ್ಮಾನಿಸಿ, ಅವಕಾಶ ನೀಡಿದ್ದಾರೆ. ‘ಕಾಡಿನ ರಹಸ್ಯ’ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾದ ಪ್ರಭಾಕರ್, ಆ ನಂತರ ಹಿಂದಿರುಗಿ ನೋಡಲಿಲ್ಲ.
ಮೊದಲ ಒಂದು ದಶಕದಲ್ಲಿ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ ಪ್ರಭಾಕರ್, 80ರ ದಶಕದ ಆರಂಭದಲ್ಲಿ ಖಳನಟನಾಗಿ ಭಡ್ತಿ ಪಡೆದರು. ಹಾಗಂತ ಅದೇ ಪಾತ್ರ ಬೇಕೆಂದು ಕೂರಲಿಲ್ಲ. ಪೋಷಕ ಪಾತ್ರಗಳನ್ನು ಮಾಡುವುದರ ಜತೆಗೆ, ದ್ವಿತೀಯ ನಾಯಕನ ಪಾತ್ರಗಳನ್ನೂ ಮಾಡಿದರು. ಅವರ ಚಿತ್ರಬದುಕಿಗೆ ಟ್ವಿಸ್ಟ್ ನೀಡಿದ ಚಿತ್ರ ‘ಪ್ರೇಮ ಮತ್ಸರ’. ಈ ಸಿನಿಮಾದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಪಾತ್ರದಲ್ಲಿ ಮಿಂಚಿದ ಪ್ರಭಾಕರ್, ‘ಮುತ್ತೈದೆ ಭಾಗ್ಯ’ದಲ್ಲಿ ಪೂರ್ಣಪ್ರಮಾಣದ ನಾಯಕರಾದರು.
ಅಷ್ಟರಲ್ಲಾಗಲೇ ಹಲವು ಆ್ಯಕ್ಷನ್ ಚಿತ್ರಗಳಲ್ಲಿ ನಟಿಸಿದ್ದ ಅವರು, ಆ್ಯಕ್ಷನ್ ಹೀರೋ ಆಗಿ ಮಿಂಚಿದರು. ‘ಕರುಣೆ ಇಲ್ಲದ ಕಾನೂನು’, ‘ಕೇಡಿ ನಂಬರ್ ಒನ್’, ‘ಟೈಗರ್’, ‘ಹುಲಿ ಹೆಬ್ಬುಲಿ’, ‘ಕಿರಾತಕ’, ‘ಪದ್ಮವ್ಯೆಹ’, ‘ಟೈಗರ್ ಗಂಗು’, ‘ಕಲಿಯುಗ ಭೀಮ’, ‘ಕಿಲಾಡಿ ತಾತ’, ‘ಅಶೋಕ ಚಕ್ರ’, ‘ಸಿಬಿಐ ವಿಜಯ್’, ‘ಮಿಸ್ಟರ್ ಮಹೇಶ್ ಕುಮಾರ್’, ‘ಮಹೇಂದ್ರವರ್ಮ’ ಮುಂತಾದ ಚಿತ್ರಗಳಲ್ಲಿ ನಟಿಸಿದರು. ಅದರಲ್ಲೂ ‘ಟೈಗರ್’ ಚಿತ್ರ ಅವರಿಗೆ ಯಾವ ಪರಿ ಜನಪ್ರಿಯತೆ ತಂದುಕೊಟ್ಟಿತು ಎಂದರೆ, ಇವತ್ತಿಗೂ ಕನ್ನಡಿಗರನ್ನು ನೆನಪಿಸಿಕೊಳ್ಳುವುದು ಟೈಗರ್ ಪ್ರಭಾಕರ್ ಎಂದೇ.
ಕನ್ನಡದಲ್ಲಿ ದೊಡ್ಡ ಹೀರೋ ಆಗಿರುವಾಗಲೇ ಬೇರೆ ಭಾಷೆಗಳಲ್ಲಿ ನೆಗೆಟಿವ್ ಪಾತ್ರಗಳನ್ನು ಮಾಡುತ್ತಿದ್ದ ಪ್ರಭಾಕರ್, ಅಮಿತಾಭ್ ಬಚ್ಚನ್ ಅಭಿನಯದ ‘ಇಂಕ್ವಿಲಾಬ್’, ರಜನಿಕಾಂತ್ ಅಭಿನಯದ ‘ಅಣ್ಣಾಮಲೈ’, ಚಿರಂಜೀವಿ ಅಭಿನಯದ ‘ಜಗದೇಕ ವೀರುಡು ಅತಿಲೋಕ ಸುಂದರಿ’ ಮುಂತಾದ ಚಿತ್ರಗಳಲ್ಲೂ ನಟಿಸಿದರು.
ನಟರಾಗಿ ಉತ್ತುಂಗದಲ್ಲಿರುವಾಗಲೇ ನಿರ್ದೇಶನಕ್ಕಿಳಿದ ಅವರು, ನಿರ್ದೇಶಕರಾಗಿದ್ದು ‘ಶಕ್ತಿ’ ಚಿತ್ರದ ಮೂಲಕ. ಅಲ್ಲಿಂದ ‘ಬಾಂಬೆ ದಾದಾ’, ‘ಕಲಿಯುಗ ಭೀಮ’, ‘ಯಮ ಕಿಂಕರ’, ‘ಮಿಸ್ಟರ್ ಮಹೇಶ್‌ಕುಮಾರ್’, ‘ಗುಡ್ ಬ್ಯಾಡ್ ಅಗ್ಲಿ’ ಮುಂತಾದ ಚಿತ್ರಗಳನ್ನು ನಿರ್ದೇಶಿಸುವುದರ ಜೊತೆಗೆ ಅದರಲ್ಲಿ ಹೀರೋ ಆಗಿಯೂ ಕಾಣಿಸಿಕೊಂಡರು. ಕೊನೆಯ ಚಿತ್ರಗಳಲ್ಲಿ ನಟನೆ, ನಿರ್ದೇಶನದ ಜತೆಗೆ ಛಾಯಾಗ್ರಹಣ, ಸಂಗೀತ ನಿರ್ದೇಶನದತ್ತಲೂ ಗಮನಹರಿಸಿದ್ದರು.
ಹೀಗೆ ಹಲವು ವಿಭಾಗಗಳಲ್ಲಿ ತೊಡಗಿಸಿಕೊಂಡಿದ್ದ ಪ್ರಭಾಕರ್, ಎರಡು ದಶಗಳ ಹಿಂದೆ ನಡೆದ ಕಾರ್ಗಿಲ್ ಯುದ್ಧದ ಹಿನ್ನೆಲೆಯಲ್ಲಿ ಒಂದು ಸಿನಿಮಾ ಮಾಡಬೇಕು ಎಂದು ಆಸೆ ಇಟ್ಟುಕೊಂಡಿದ್ದರು. ‘ಮೇಜರ್’ ಎಂಬ ಚಿತ್ರ ಸಹ ಶುರು ಮಾಡಿದ್ದರು. ಕಾರಣಾಂತರಗಳಿಂದ, ಆ ಚಿತ್ರ ಮುಂದುವರೆಯಲಿಲ್ಲ. ಹಾಗೆಯೇ, ಮಗ ವಿನೋದ್ ಪ್ರಭಾಕರ್ ಅವರನ್ನು ಹೀರೋ ಮಾಡಬೇಕೆಂಬ ಕನಸು ಸಹ ನನಸಾಗಲಿಲ್ಲ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಭಾಕರ್, ಅಷ್ಟರಲ್ಲಿ ಕೊನೆಯುಸಿರೆಳೆದರು.
ಇಂದು ಪ್ರಭಾಕರ್ ಇಲ್ಲದಿರಬಹುದು. ಪಾತ್ರಗಳು ಮತ್ತು ಚಿತ್ರಗಳ ಮೂಲಕ ಇನ್ನೂ ಜನರ ನೆನಪಲ್ಲಿ ಸದಾ ಹಸಿರಾಗಿದ್ದಾರೆ.