

| ಸಿ.ಜಿ.ಪುನೀತ್ ಚಪ್ಪರದಹಳ್ಳಿ (ಮೈಸೂರು)
ಕನ್ನಡದ ಖ್ಯಾತ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್ ಅವರ ಜನ್ಮದಿನವಿಂದು (ಡಿ.1). ಕನ್ನಡ ಚಿತ್ರರಂಗದ ದಿಗ್ಗಜ ನಿರ್ದೇಶಕರೆನಿಸಿಕೊಂಡ ಪುಟ್ಟಣ್ಣ ನಿಧನರಾಗಿ ಇಷ್ಟು ವರ್ಷಗಳಾದರೂ, ಅವರ ನೆನಪಿನಲ್ಲಿ ಸೂಕ್ತ ಸ್ಮಾರಕವಿಲ್ಲ ಎಂಬುದು ವಿಪರ್ಯಾಸದ ಸಂಗತಿ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದಲ್ಲಿ ಪುಟ್ಟಣ್ಣ ಕಣಗಾಲ್ ಹುಟ್ಟಿ-ಬೆಳೆದ ಮನೆಯಿದ್ದು, ಈ ಮನೆ ಸಹ ಕುಸಿಯುವ ಹಂತ ತಲುಪಿದೆ. ಆದರೆ, ಈ ಸಂಬಂಧ ಯಾರೂ ಗಮನಹರಿಸಿಲ್ಲ. ಪುಟ್ಟಣ್ಣ ಅವರ ಹೆಸರು ಹಾಗೂ ಮನೆಯ ಸಂರಕ್ಷಣೆಗಾಗಿ ಗ್ರಾಮದಲ್ಲಿ ‘ಪುಟ್ಟಣ್ಣ ಕಣಗಾಲ್ ಪ್ರತಿಷ್ಠಾನ’ ಸ್ಥಾಪಿಸಲಾಗಿದೆ. ಈ ಹಿಂದಿನ ವರ್ಷಗಳಲ್ಲಿ ಅವರ ಹುಟ್ಟಿದ ದಿನದಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಕೆಲಸ ಆಗುತ್ತಿತ್ತು. ಕರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿ ಪ್ರತಿಷ್ಠಾನದ ಅಧ್ಯಕ್ಷ ಜಯಣ್ಣ ಕಣಗಾಲ್ ಮತ್ತು ಪುಟ್ಟಣ್ಣ ಅವರ ಪುತ್ರ ರಾಮು ಕಣಗಾಲು ಮೃತಪಟ್ಟರು. ಪರಿಣಾಮ, ಮನೆ ಇದೀಗ ಅನಾಥವಾಗಿದೆ. ಈ ಮನೆ ಹೊರತುಪಡಿಸಿ, ಪುಟ್ಟಣ್ಣ ಅವರ ನೆನಪಿನಾರ್ಥ ಗ್ರಾಮದಲ್ಲಿ ಬೇರೇನೂ ಉಳಿದಿಲ್ಲ. ಹಾಗಾಗಿ, ರಾಜ್ಯ ಸರ್ಕಾರವು ಕಣಗಾಲುವಿನಲ್ಲಿ ಸ್ಮಾರಕ ನಿರ್ವಿುಸುವ ಮೂಲಕ ಪುಟ್ಟಣ್ಣ ಅವರು ನಡೆದು ಬಂದ ಹಾದಿಯ ಮೇಲೆ ಬೆಳಕು ಚೆಲ್ಲುವಂತಹ ಕೆಲಸ ಮಾಡಬೇಕಿದೆ ಎಂಬುದು ಅವರ ಅಭಿಮಾನಿಗಳ ಒತ್ತಾಸೆ.
ಹಲವು ಹೆಗ್ಗಳಿಕೆಗಳ ದೊಡ್ಡಣ್ಣ: ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಪುಟ್ಟಣ್ಣನವರು, ನಟ-ನಿರ್ದೇಶಕ ಬಿ.ಆರ್.ಪಂತುಲು ಅವರ ಗರಡಿಯಲ್ಲಿ ಪಳಗಿ, ಅವರ ‘ಸ್ಕೂಲ್ ಮಾಸ್ಟರ್’ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದರು. ಬಳಿಕ ಅದೇ ಚಿತ್ರವನ್ನು ಮಲಯಾಳಂನಲ್ಲಿ ನಿರ್ದೇಶಿಸುವ ಮೂಲಕ ಸ್ವತಂತ್ರ ನಿರ್ದೇಶಕರಾದರು. 1967ರಲ್ಲಿ ತೆರೆಗೆ ಬಂದ ‘ಬೆಳ್ಳಿ ಮೋಡ’ ಎಂಬ ಕಾದಂಬರಿ ಆಧರಿತ ಚಿತ್ರದ ಮೂಲಕ ಕನ್ನಡದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡರು. ಇದರ ಯಶಸ್ಸಿನ ಬೆನ್ನಲ್ಲೇ ‘ಗೆಜ್ಜೆಪೂಜೆ’, ‘ಸಾಕ್ಷಾತ್ಕಾರ’, ‘ಶರಪಂಜರ’, ‘ಧರ್ಮಸೆರೆ’, ‘ಪಡುವಾರಹಳ್ಳಿ ಪಾಂಡವರು’, ‘ರಂಗನಾಯಕಿ’, ‘ನಾಗರಹಾವು’ ಮೊದಲಾದ ಚಿತ್ರಗಳನ್ನು ನಿರ್ದೇಶನ ಮಾಡಿ ಪ್ರಸಿದ್ಧರಾದರು.