

ಪರಭಾಷೆಯ ಚಿತ್ರಗಳಲ್ಲಿ ನಟಿಸಬಾರದು ಎಂಬ ಅವರ ನಿರ್ಧಾರದ ಹಿಂದೆ ಒಂದು ಕಾರಣವೂ ಇದೆ. ಅದೇನೆಂದರೆ, ಅವರ ಮೊದಲ ಚಿತ್ರ ‘ಬೇಡರ ಕಣ್ಣಪ್ಪ’ ತೆಲುಗಿನಲ್ಲಿ ‘ಕಾಳಹಸ್ತಿ ಮಹಾತ್ಮಂ’ ಎಂಬ ಹೆಸರಿನಲ್ಲಿ ನಿರ್ವಣವಾಯಿತು. ಈ ಸಂದರ್ಭದಲ್ಲಿ, ರಾಜಕುಮಾರ್ ಅವರಿಗೆ ತೆಲುಗಿನಲ್ಲಿ ಸಂಭಾಷಣೆ ಒಪ್ಪಿಸುವುದು ಬಹಳ ಕಷ್ಟವಾಯಿತಂತೆ. ಒಬ್ಬ ಕಲಾವಿದನಿಗೆ ಭಾಷೆ ಬರದಿದ್ದರೆ, ಪಾತ್ರಕ್ಕೆ ನ್ಯಾಯ ಸಲ್ಲಿಸುವುದಕ್ಕೆ ಕಷ್ಟ ಎಂದು ಆ ಸಂದರ್ಭದಲ್ಲಿ ಅರ್ಥವಾಯಿತಂತೆ. ಆದರೂ ಒಪ್ಪಿಕೊಂಡ ಕೆಲಸಕ್ಕೆ ಚ್ಯುತಿ ಬರಬಾರದು ಎಂಬ ಕಾರಣಕ್ಕೆ ಅವರು ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಮುಗಿಸಿದ್ದಾರೆ. ಆ ನಂತರ, ಇನ್ನೆಂದೂ ಪರಭಾಷಾ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ತೀರ್ವನವನ್ನು ತೆಗೆದುಕೊಂಡರಂತೆ. ಅಂದುಕೊಂಡಂತೆ ಕೊನೆಯವರೆಗೂ ನಡೆದುಕೊಂಡರು.
ಪರಭಾಷೆಯ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ರಾಜಕುಮಾರ್ ಅವರು ತೀರ್ಮಾನ ಮಾಡಿದ್ದರೂ, ಅವರಿಗೆ ಪರಭಾಷೆಗಳಿಂದ ಆಫರ್ಗಳು ಮಾತ್ರ ಆಗಾಗ ಬರುತ್ತಲೇ ಇದ್ದವು. ‘ಜೇಡರ ಬಲೆ’ ಚಿತ್ರವು ಸೂಪರ್ ಹಿಟ್ ಆದ ದಿನಗಳಲ್ಲಿ, ಆ ಚಿತ್ರವನ್ನು ನೋಡಿ ಬಹಳ ಪ್ರಭಾವಿತರಾಗಿದ್ದ ತಮಿಳಿನ ಖ್ಯಾತ ನಿರ್ವಪಕ ಚಿನ್ನಪ್ಪ ದೇವರ್, ಒಂದು ದಿನ ರಾಜಕುಮಾರ್ ಮನೆಗೆ ಹೋಗಿ, ರಾಜಕುಮಾರ್ ಮತ್ತು ಪಾರ್ವತಮ್ಮನವರನ್ನು ಭೇಟಿ ಮಾಡಿ, ಒಂದು ಕಾಲ್ಶೀಟ್ ಕೊಡುವುದಕ್ಕೆ ಕೇಳಿದರಂತೆ. ರಾಜಕುಮಾರ್ ಅಭಿನಯದಲ್ಲಿ ಒಂದು ತಮಿಳು ಚಿತ್ರ ನಿರ್ವಿುಸುವ ಆಸೆಯನ್ನೂ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ ನೋಟಿನ ಕಂತೆಗಳನ್ನು ಸುರಿದು ಒಪ್ಪಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದರಂತೆ.
ದೊಡ್ಡ ನಿರ್ವಪಕರೊಬ್ಬರು ಕಂತೆ ಕಂತೆ ಹಣವನ್ನು ಸುರಿದರೂ ರಾಜಕುಮಾರ್ ಅವರ ಮನಸ್ಸು ಬದಲಾಗಿಲ್ಲ. ‘ನನಗೆ ಇಲ್ಲೇ ಕೈತುಂಬ ಕೆಲಸವಿದೆ. ಊಟ ಸಿಗುತ್ತಿದೆ. ಇಷ್ಟೆಲ್ಲ ಕೊಟ್ಟಿರುವ ನಮ್ಮ ಭಾಷೆಯನ್ನು ಬಿಟ್ಟು ಬರುವುದಿಲ್ಲ’ ಎಂದು ರಾಜಕುಮಾರ್ ಅವರಿಗೆ ಪ್ರತಿಕ್ರಿಯೆ ನೀಡಿದ್ದರು. ಆಗ ಚಿನ್ನಪ್ಪ ದೇವರ್, ‘ನೀನು ಕನ್ನಡದಲ್ಲಿ ಚೆನ್ನಾಗಿ ಬೆಳೆಯುತ್ತೀಯ’ ಎಂದು ಹಾರೈಸಿ ಹೋದರಂತೆ. ಆ ನಂತರವೂ ರಾಜಕುಮಾರ್ ತಮ್ಮ ಚಿತ್ರದಲ್ಲಿ ನಟಿಸಲಿ ಎಂದು ಬಯಸುವ ಬೇರೆ ಭಾಷೆಯ ಮಂದಿಯ ಸಂಖ್ಯೆಯಲ್ಲೇನೂ ಕಡಿಮೆಯಾಗಿಲ್ಲ. ಅದಾದ ನಂತರ ಮುಂದೊಂದು ದಿನ, ಬಾಲಿವುಡ್ ನಟ ಅಮಿತಾಭ್ ಬಚ್ಚನ್ ತಮ್ಮ ‘ಕೂಲಿ’ ಚಿತ್ರದ ಒಂದು ದೃಶ್ಯದಲ್ಲಿ ರಾಜಕುಮಾರ್ ನಟಿಸಬೇಕು ಎಂದು ಆಸೆಪಟ್ಟಿದ್ದು, ಈ ವಿಷಯವನ್ನು ಅವರು ನೇರವಾಗಿ ರಾಜಕುಮಾರ್ ಬಳಿಯೇ ಪ್ರಸ್ತಾಪಿಸಿದ್ದು ಮತ್ತು ಈ ವಿಷಯವನ್ನು ಅವರು ನಯವಾಗಿಯೇ ತಿರಸ್ಕರಿಸಿದ್ದು ಈಗಾಗಲೇ ಸಾಕಷ್ಟು ಬಾರಿ ಚರ್ಚೆಯಾಗಿದೆ.
ಬೇರೆ ಭಾಷೆಗಳಲ್ಲಿ ನಟಿಸದಿರುವುದಷ್ಟೇ ಅಲ್ಲ, ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದರೂ, ಅದರಲ್ಲಿ ಕನ್ನಡದಲ್ಲೇ ಮಾತನಾಡುತ್ತಿದ್ದುದು ರಾಜಕುಮಾರ್ ಅವರ ಇನ್ನೊಂದು ವೈಶಿಷ್ಟ್ಯ. ಅದೊಮ್ಮೆ, ಎಂ.ಜಿ.ಆರ್ ಅವರು ಭಾಗವಹಿಸಿದ್ದ ಸಮಾರಂಭವೊಂದರಲ್ಲಿ ರಾಜಕುಮಾರ್ ಅವರಿಗೂ ಆಹ್ವಾನಿಸಿ, ಅನೌನ್ಸ್ ಮಾಡಲಾಗಿತ್ತು. ಈ ಸಮಾರಂಭದಲ್ಲಿ ಭಾಗವಹಿಸಿದ ರಾಜಕುಮಾರ್, ಕನ್ನಡದಲ್ಲಿ ಮಾತನಾಡುವುದಕ್ಕೆ ಶುರು ಮಾಡುತ್ತಿದ್ದಂತೆ, ಜನರು ತಮಿಳಿನಲ್ಲಿ ಮಾತನಾಡುವುದಕ್ಕೆ ಒತ್ತಾಯ ಮಾಡಿದರಂತೆ. ಈ ಸಂದರ್ಭದಲ್ಲಿ ಮೈಕೆತ್ತಿಕೊಂಡ ಎಂಜಿಆರ್, ‘ಅವರು ಬೇರೆ ಭಾಷೆಯಲ್ಲೇನಾದರೂ ನಟಿಸಿದ್ದಿದ್ದರೆ ನಾವ್ಯಾರೂ ಇರುತ್ತಿರಲಿಲ್ಲ. ಅವರು ಕನ್ನಡವನ್ನೇ ಉಸಿರಾಗಿಸಿಕೊಂಡವರು. ಕನ್ನಡ ಬಿಟ್ಟು ಬೇರೆ ಯಾವ ಭಾಷೆಗೂ ಹೋಗದವರು. ಅವರು ಅವರ ಭಾಷೆಯಲ್ಲಿ ಮಾತನಾಡುತ್ತಾರೆ’ ಎಂದು ಎಲ್ಲರನ್ನು ಸುಮ್ಮನಿರಿಸಿದರಂತೆ. ಇದು ರಾಜಕುಮಾರ್ ಅವರು ಕನ್ನಡ ಭಾಷೆಯ ಮೇಲೆ ಇಟ್ಟಿದ್ದ ಪ್ರೀತಿ ಮತ್ತು ಗೌರವ. ಈ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ?