

ಡಾ. ರಾಜಕುಮಾರ್ ಅವರ ಮೊಮ್ಮಗಳು ಮತ್ತು ರಾಮ್‌ಕುಮಾರ್ ಅವರ ಮಗಳು ಧನ್ಯಾ ರಾಮ್‌ಕುಮಾರ್ ನಾಯಕಿಯಾಗಿ ಅಭಿನಯಿಸಿರುವ ಮೊದಲ ಚಿತ್ರ ‘ನಿನ್ನ ಸನಿಹಕೆ’ ಇಂದು (ಅ. 8) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದ ಧನ್ಯಾ, ಜನ ತನ್ನ ಅಭಿನಯದ ಬಗ್ಗೆ ಏನು ಹೇಳಬಹುದು ಎಂಬ ಕುತೂಹಲದಲ್ಲಿದ್ದಾರೆ.. ‘ಪ್ರೇಕ್ಷಕರು ನನ್ನನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲವಿದೆ. ಏಕೆಂದರೆ, ಇದುವರೆಗೂ ನನ್ನನ್ನು ಯಾರೂ ತೆರೆಯ ಮೇಲೆ ನೋಡಿಲ್ಲ. ನೋಡಿ ಏನನ್ನುತ್ತಾರೆ, ನನ್ನಿಂದ ಏನು ಬಯಸುತ್ತಾರೆ ಎಂಬ ಕುತೂಹಲ ಇದೆ. ಇಷ್ಟು ದಿನ ನನ್ನ ಪರಿಸ್ಥಿತಿ ಹೇಗಿತ್ತು ಎಂದರೆ, ನನ್ನ ಮುಂದೆ ಒಂದು ಕೇಕ್ ಇಟ್ಟು, ಅದನ್ನು ತಿನ್ನುವ ಹಾಗಿಲ್ಲ ಎಂದು ಹೇಳಿದಂತಿತ್ತು. ಚಿತ್ರ ಬಿಡುಗಡೆಗೆ ರೆಡಿಯಾಗಿತ್ತು. ಆದರೆ, ಕೋವಿಡ್ ನಿಂದ ಬಿಡುಗಡೆಯಾಗುವಂತಿರಲಿಲ್ಲ. ಯಾವಾಗ ಸಿನಿಮಾ ಬಿಡುಗಡೆಯಾಗುತ್ತದೆ ಎಂದು ಕಾಯುತ್ತಿದ್ದೆ. ಈಗ ಕೊನೆಗೂ ಆ ದಿನ ಬಂದಿದೆ’ ಎನ್ನುತ್ತಾರೆ ಧನ್ಯಾ.
‘ನಿನ್ನ ಸನಿಹಕೆ’ ಚಿತ್ರವನ್ನು ಧನ್ಯಾ, ತಮ್ಮ ತಾಯಿಯ ಜತೆಗೆ ನೋಡಿದ್ದಾರಂತೆ. ಅಷ್ಟೇ ಅಲ್ಲ, ಅಮ್ಮನಿಂದ ಮೆಚ್ಚುಗೆಯನ್ನೂ ಪಡೆದಿದ್ದಾರಂತೆ. ‘ಚಿತ್ರ ನೋಡಿದ ಅಮ್ಮ, ನಾನು ಹೊಸಬಳ ತರಹ ಅನಿಸುತ್ತಿಲ್ಲ, ಬಹಳ ಚೆನ್ನಾಗಿ ನಟಿಸಿದ್ದೀನಿ ಅಂತ ಹೇಳಿದ್ದರು. ಆದರೆ, ನನಗೆ ಕೆಲವು ತಪು್ಪಗಳು ಕಾಣಿಸಿದವು. ನಾನು ಹೇರ್ ಸ್ಟೈಲ್ ಬದಲಾಯಿಸಿಕೊಳ್ಳಬಹುದಿತ್ತು, ಮಾತಿನ ವೇಗ ಕಡಿಮೆ ಮಾಡಬೇಕಿತ್ತು ಅಂತ ಅನಿಸಿತು. ಮಿಕ್ಕಂತೆ ಚಿತ್ರ ನೈಜವಾಗಿ ಬಂದಿದೆ ಮತ್ತು ನನ್ನ ಹಾಗೂ ಸೂರಜ್ ಕೆಮಿಸ್ಟ್ರಿ ಬಹಳ ಚೆನ್ನಾಗಿ ಮೂಡಿಬಂದಿದೆ ಅಂತನಿಸಿತು. ಚಿತ್ರ ಮುಗಿದಾಗ ನಾನು ಅತ್ತುಬಿಟ್ಟೆ. ಏಕೆಂದರೆ, ನಾನು ಸ್ವಲ್ಪ ಎಮೋಷನಲ್’ ಎಂದು ಸಂಕೋಚದಿಂದಲೇ ಹೇಳಿಕೊಳ್ಳುತ್ತಾರೆ ಧನ್ಯಾ. ಇನ್ನು, ಒಂದಿಷ್ಟು ಸಿನಿಮಾ ಆಫರ್ ಗಳೂ ಅವರಿಗೆ ಬರುತ್ತಿವೆಯಂತೆ. ಆದರೆ, ಈ ಚಿತ್ರಕ್ಕೆ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ಮುಂದುವರಿಯುವುದಾಗಿ ಅವರು ಹೇಳುತ್ತಾರೆ.
ನಿನ್ನ ಸನಿಹಕೆ ಜತೆಗೆ ಎರಡು: ‘ನಿನ್ನ ಸನಿಹಕೆ’ ಚಿತ್ರವನ್ನು ಸೂರಜ್ ಗೌಡ ನಿರ್ದೇಶಿಸಿದ್ದು, ಅವರೇ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ವೈಟ್ ಆಂಡ್ ಗ್ರೇ ಪಿಕ್ಚರ್ಸ್ ನಡಿ ನಿರ್ವಣವಾಗಿರುವ ಈ ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ ಸಂಯೋಜಿಸಿದರೆ, ಮಂಜುನಾಥ ಹೆಗಡೆ, ಅರುಣಾ ಬಾಲರಾಜ್, ಚಿತ್ಕಲಾ ಬಿರಾದಾರ್ ಮುಂತಾದವರು ನಟಿಸಿದ್ದಾರೆ. ‘ನಿನ್ನ ಸನಿಹಕೆ’ ಜತೆಗೆ ಈ ವಾರ ಇನ್ನೂ ಎರಡು ಚಿತ್ರಗಳು ಬಿಡುಗಡೆಯಾಗುತ್ತಿವೆ. ‘ಇದು ಆಕಾಶವಾಣಿ ಬೆಂಗಳೂರು ನಿಲಯ’ ಒಂದಾದರೆ, ‘ತಿರುಗ್ಸೋ ಮೀಸೆ’ ಎರಡನೆಯದು. ಈ ಎರಡೂ ಚಿತ್ರಗಳಲ್ಲಿ ಸಂಪೂಣಧ ಹೊಸಬರೇ ತುಂಬಿದ್ದಾರೆ.