

ಬೆಂಗಳೂರು: ಐದಾರು ವರ್ಷಗಳ ಹಿಂದೆ ಕಂಠೀರವ ಸ್ಟುಡಿಯೋದಲ್ಲಿ ಪ್ರಾರಂಭವಾಗಿತ್ತು ಅರ್ಜುನ್ ಸರ್ಜಾ, ರಾಧಿಕಾ ಕುಮಾರಸ್ವಾಮಿ, ಜೆ.ಡಿ. ಚಕ್ರವರ್ತಿ ಅಭಿನಯದ ‘ಕಾಂಟ್ರಾಕ್ಟ್’ ಸಿನಿಮಾ. ಬೆಂಗಳೂರು, ಹೈದರಾಬಾದ್, ಕೊಲ್ಹಾಪುರ ಮುಂತಾದ ಕಡೆ ಚಿತ್ರೀಕರಣಗೊಂಡ ಈ ಚಿತ್ರ, ಕಾರಣಾಂತರಗಳಿಂದ ತಡವಾಯಿತು. ಇದೀಗ ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಅಷ್ಟೇ ಅಲ್ಲ, ಚಿತ್ರದ ಹೆಸರು ಸಹ ಬದಲಾಗಿದೆ. ಚಿತ್ರವು ‘ಒಪ್ಪಂದ’ ಹೆಸರಿನಲ್ಲಿ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಇತ್ತೀಚೆಗೆ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆಯಾಗಿದೆ. ಅರ್ಜುನ್ ಸರ್ಜಾ ಅವರು ವಿಡಿಯೋ ಮೂಲಕ ಚಿತ್ರತಂಡದವರಿಗೆ ಶುಭ ಕೋರಿದ್ದು ಬಿಟ್ಟರೆ, ಮಿಕ್ಕಂತೆ ಚಿತ್ರದಲ್ಲಿ ನಟಿಸಿದ ಬಹುತೇಕ ಕಲಾವಿದರು ಸಮಾರಂಭದಲ್ಲಿ ಹಾಜರಿರಲಿಲ್ಲ. ಈ ಚಿತ್ರವನ್ನು ನಿರ್ವಿುಸಿ-ನಿರ್ದೇಶಿಸಿದವರು ಸಮೀರ್. ‘ಅರ್ಜುನ್ ಸರ್ಜಾ, ಜೆಡಿ ಮತ್ತು ರಾಧಿಕಾ ಅವರ ಸಹಕಾರವಿಲ್ಲದೆ ಈ ಚಿತ್ರ ಚೆನ್ನಾಗಿ ಮೂಡಿಬರುವುದಕ್ಕೆ ಸಾಧ್ಯವಿರಲಿಲ್ಲ ಎನ್ನುವ ಸಮೀರ್, ಎಲ್ಲರೂ ಚೆನ್ನಾಗಿ ನಟಿಸಿದ್ದರಿಂದಲೇ ಚಿತ್ರ ಚೆನ್ನಾಗಿ ಮೂಡಿ ಬಂದಿದೆ’ ಎಂದರು.
‘ಒಪ್ಪಂದ’ದಲ್ಲಿ ಆರು ಹಾಡುಗಳಿದ್ದು, ಸುಭಾಷ್ ಆನಂದ್ ಸಂಗೀತ ಸಂಯೋಜಿಸಿದ್ದಾರೆ. ಬಾಲಿವುಡ್ ನಟ ಆಮೀರ್ ಖಾನ್ ಸಹೋದರ ಫೈಸಲ್ ಖಾನ್ ಈ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.