ಸ್ಯಾಂಡಲ್​ವುಡ್ ಸ್ಟಾರ್ ನಟರ 45 ಚಿತ್ರಕ್ಕೆ ಸಿಕ್ತು ಬಿಡುಗಡೆ ಭಾಗ್ಯ: ಕೊನೆಗೂ ದಿನಾಂಕ ನಿಗದಿ ಮಾಡಿದ ಚಿತ್ರತಂಡ

45 shiva
Published on

ಬೆಂಗಳೂರು: ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್‌ಬಿ. ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳುತ್ತಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘45’. ಎಲ್ಲವೂ ಅಂದುಕೊಂಡಂತಾಗಿದ್ದರೆ ಸಿನಿಮಾ ಆ. 15ರಂದು ತೆರೆಗೆ ಬರಬೇಕಿತ್ತು. ಆದರೆ, ವಿಎಫ್​ಎಕ್ಸ್ ಕೆಲಸಗಳು ಪೂರ್ಣಗೊಳ್ಳದ ಕಾರಣ ಬಿಡುಗಡೆ ತಡವಾಗಿದೆ. ಇದೀಗ ಹೊಸ ರಿಲೀಸ್ ಡೇಟ್ ಘೋಷಿಸಿರುವ ಚಿತ್ರತಂಡ, ಇದೇ ಕ್ರಿಸ್ಮಸ್ ಹಬ್ಬದ ದಿನ ಡಿ. 25ರಂದು ತೆರೆಗೆ ಬರಲಿದೆ. ‘45’ ಚಿತ್ರವು ಅತ್ಯಾಧುನಿಕ ತಂತ್ರಜ್ಞಾನದಿಂದ ಮೂಡಿಬರುತ್ತಿದ್ದು, ವಿಎಫ್​ಎಕ್ಸ್ ಹಾಗೂ ಸಿಜೆ ಕೆಲಸಗಳನ್ನು ಕೆನಡಾದ ಪ್ರತಿಷ್ಠಿತ ‘ಮಾರ್ಜ್’ ಸಂಸ್ಥೆ ಮಾಡುತ್ತಿದೆ. ಅಂದುಕೊಂಡ ಸಮಯಕ್ಕೆ ವಿಎಫ್​ಎಕ್ಸ್ ಕಾರ್ಯಗಳು ಪೂರ್ಣವಾಗಿಲ್ಲ. ಹೀಗಾಗಿ ಮೊದಲು ಘೋಷಿಸಿದ್ದ ದಿನ ಸಿನಿಮಾ ರಿಲೀಸ್ ಮಾಡಲಾಗಲಿಲ್ಲ. ಈ ಕಾರ್ಯಗಳು ಪೂರ್ಣಗೊಳ್ಳುವ ಸಮಯ ಹಾಗೂ ಪ್ರಚಾರದ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಇದೀಗ ಡಿ.25ಕ್ಕೆ ಸಿನಿಮಾ ರಿಲೀಸ್ ಮಾಡಲು ಮುಂದಾಗಿದೆ. ವರ್ಷಾಂತ್ಯದ ಮೂಡ್, ಸಾಲು ರಜೆಗಳನ್ನು ಸದುಪಯೋಗಿಸಿಕೊಳ್ಳಲು ಚಿತ್ರತಂಡ ಮುಂದಾಗುತ್ತಿದೆ. ಈ ಮೂಲಕ ಕನ್ನಡ ಸಿನಿಮಾಗಳಿಗೆ ಡಿಸೆಂಬರ್ ತಿಂಗಳ ಫೇವರಿಟ್ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ. ಕಳೆದ ವರ್ಷ ಇದೇ ದಿನ ಸುದೀಪ್ ಅವರ ‘ಮ್ಯಾಕ್ಸ್’ ರಿಲೀಸ್ ಆಗಿ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು.

ನಮ್ಮ ಚಿತ್ರದಲ್ಲಿ ವಿಎಫ್​ಎಕ್ಸ್ ಮಹತ್ವದ ಪಾತ್ರ ವಹಿಸುತ್ತದೆ. ಶೇ.40ರಷ್ಟು ಗ್ರಾಫಿಕ್ಸ್ ಇರೋ ಕಾರಣ ನುರಿತ ತಂಡದಿಂದ ಕೆಲಸ ನಡೆಯುತ್ತಿದೆ. ಈಗಾಗಲೇ ಶೇಕಡಾ 75ರಷ್ಟು ಕೆಲಸಗಳು ಮುಗಿದಿದ್ದು, ಇನ್ನು ಎರಡು ತಿಂಗಳಲ್ಲಿ ಸಿಜಿ ಕೆಲಸ ಪೂರ್ಣಗೊಳ್ಳಲಿದೆ. ತಡವಾದರೂ, ಎಲ್ಲರೂ ಮೆಚ್ಚಿಕೊಳ್ಳುವ ಚಿತ್ರ ನೀಡುವ ಉದ್ದೇಶ ನಮ್ಮದು. | ಅರ್ಜುನ್ ಜನ್ಯ, ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net