ಬೆಂಗಳೂರಿನಲ್ಲಿ ಲೈಗರ್; ಪುನೀತ್ ನೆನಪಿಸಿಕೊಂಡ ದೇವರಕೊಂಡ..

Arjun Devarakonda
Published on

ಬೆಂಗಳೂರು: ವಿಜಯ್ ದೇವರಕೊಂಡ ಅಭಿನಯದ, ಪುರಿ ಜಗನ್ನಾಥ್ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ‘ಲೈಗರ್’, ಇದೇ ಸೆ. 25ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಕೆಲವು ದಿನಗಳಿಂದ ಚಿತ್ರತಂಡದವರು ಬೇರೆ ಊರುಗಳಿಗೆ ಹೋಗಿ ಚಿತ್ರದ ಪ್ರಚಾರ ಮಾಡಿ ಬರುತ್ತಿದ್ದಾರೆ. ಈ ನಿಮಿತ್ತ ಬೆಂಗಳೂರಿಗೂ ಬಂದಿದ್ದರು ವಿಜಯ್ ದೇವರಕೊಂಡ. ಜತೆಗೆ ನಾಯಕಿ ಅನನ್ಯಾ ಪಾಂಡೆ ಸಹ ಇದ್ದರು. ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜಕುಮಾರ್ ಸಮಾಧಿಗೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿ, ಆ ನಂತರ ಚಿತ್ರದ ಬಗ್ಗೆ ಪ್ರಚಾರ ಮಾಡಿದರು.

‘ಲೈಗರ್’ ತಮ್ಮ ವೃತ್ತಿಜೀವನದ ಅತ್ಯಂತ ದೊಡ್ಡ ಸಿನಿಮಾ ಎನ್ನುವ ದೇವರಕೊಂಡ, ‘ಇದೊಂದು ಮಾಸ್ ಚಿತ್ರ. ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ಈ ಚಿತ್ರಕ್ಕೆ ಕನ್ನಡದಲ್ಲೇ ಡಬ್ ಮಾಡಲು ಪ್ರಯತ್ನಿಸಿದೆ. ಆದರೆ, ಅದು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ನನ್ನ ಪಾತ್ರಕ್ಕೆ ನಾನೇ ಡಬ್ ಮಾಡುತ್ತೇನೆ’ ಎಂದರು.

ಪುನೀತ್ ಜತೆಗಿನ ಒಡನಾಟವನ್ನು ಮೆಲುಕು ಹಾಕಿದ ಅವರು, ‘ನಾನು ಬೆಂಗಳೂರಿಗೆ ಬಂದಾಗಲೆಲ್ಲ ಪುನೀತ್ ಅವರನ್ನು ಭೇಟಿ ಮಾಡುತ್ತಿದ್ದೆ. ಅವರು ನನ್ನ ಸಿನಿಮಾಗಳನ್ನು ನೋಡಿ ಫೋನ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಶಿವಣ್ಣ ಸಹ ನನ್ನ ಸಿನಿಮಾ ನೋಡಿ, ಫೋನ್ ಮಾಡಿ ಮಾತನಾಡಿದ್ದಿದೆ’ ಎಂದು ಹೇಳಿದರು. ಸ್ಟಂಟ್ ದೃಶ್ಯಗಳಲ್ಲಿ ನಟಿಸಿದ್ದು ಬಹಳ ಭಯವನ್ನುಂಟು ಮಾಡಿತು ಎಂದ ಅನನ್ಯಾ, ವಿಜಯ್ ಜತೆಗೆ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು ಬಹಳ ಖುಷಿಕೊಟ್ಟಿತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net