ಗಣೇಶ್​ ಜತೆ ಹನುಮಾನ್​ ಅಮೃತಾ; ದಶಕದ ಬಳಿಕ ನಿರ್ದೇಶನಕ್ಕೆ ಮರಳಿದ ಅರಸು ಅಂತಾರೆ

sdfsdv
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

"ಕೃಷ್ಣಂ ಪ್ರಣಯ ಸಖಿ' ಚಿತ್ರದ ಯಶಸ್ಸಿನ ಬಳಿಕ ನಟ ಗಣೇಶ್​ "ಪಿನಾಕ', "ಯುವರ್ಸ್​ ಸಿನ್ಸಿಯರ್ಲಿ ರಾಮ್​' ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಎರಡು ಚಿತ್ರಗಳಲ್ಲೂ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದು, ಸದ್ಯ ಚಿತ್ರೀಕರಣ ಭರದಿಂದ ಸಾಗಿದೆ. ಅದರ ನಡುವೆಯೇ ಗಣೇಶ್​ ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದು, ಮುಂದಿನ ಏ.6ರಂದು ಸಿನಿಮಾ ಮುಹೂರ್ತ ನೆರವೇರಲಿದೆ. ಈ ಚಿತ್ರಕ್ಕೆ ಕಥೆಗಾರ, ಸಂಭಾಷಣೆಕಾರ, ಚಿತ್ರಸಾಹಿತಿ, ನಿರ್ದೇಶಕ ಅರಸು ಅಂತಾರೆ ಆ್ಯಕ್ಷನ್​-ಕಟ್​ ಹೇಳಲಿದ್ದಾರೆ. 2014ರಲ್ಲಿ ನೀನಾಸಂ ಸತೀಶ್​, ಸಿಂಧು ಲೋಕನಾಥ್​ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ "ಲವ್​ ಇನ್​ ಮಂಡ್ಯ' ಚಿತ್ರದ ಮೂಲಕ ಅರಸು ಅಂತಾರೆ ಡೈರೆಕ್ಟರ್​ ಕ್ಯಾಪ್​ ಧರಿಸಿದ್ದರು. ಇದೀಗ 11 ವರ್ಷಗಳ ಬಳಿಕ ಎರಡನೇ ಚಿತ್ರಕ್ಕೆ ಆ್ಯಕ್ಷನ್​&ಕಟ್​ ಹೇಳಲು ರೆಡಿಯಾಗಿದ್ದಾರೆ.

"ಇದೇ ತಾಳ್ಮೆಗೆ ಇರುವ ತಾಕತ್ತು. ಪ್ರಯತ್ನ ಮಾಡುತ್ತಿದ್ದೆ ಆದರೆ, 10 ವರ್ಷ ಸಮಯ ಕೂಡಿ ಬಂದಿರಲಿಲ್ಲ. ಈಗ ಕಾಲ ಕೂಡಿಬಂದಿದೆ. ಗಣೇಶ್​ ಅವರ ಜತೆ ಸಿನಿಮಾ ಮಾಡುತ್ತಿದ್ದೇನೆ. ಅವರಿಗಾಗಿಯೇ ಮಾಡಿಕೊಂಡ ಕಥೆಯಿದು. ಅವರ ಬಳಿಯಿರುವ ಎಲ್ಲ ಅಸ್ತ್ರಗಳನ್ನೂ ಬಳಸಿಕೊಳ್ಳಲಿದ್ದೇವೆ. ಇದೊಂದು ಕಮರ್ಷಿಯಲ್​ ಫ್ಯಾಮಿಲಿ ಎಂಟರ್​ಟೇನ್ಮೆಂಟ್​ ಡ್ರಾಮಾ ಚಿತ್ರ. ಏ.6 ಮುಹೂರ್ತ ನೆರವೇರಿದ ಬಳಿಕ ಏ.7ರಿಂದಲೇ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ನೂರಕ್ಕೆ ಇನ್ನೂರು ಪರ್ಸೆಂಟ್​ ಇದೇ ವರ್ಷ ಸಿನಿಮಾ ರಿಲೀಸ್​ ಆಗಲಿದೆ' ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಅರಸು ಅಂತಾರೆ. ಕೆಲವೇ ದಿನಗಳಲ್ಲಿ ಚಿತ್ರದ ಟೈಟಲ್​ ರಿವೀಲ್​ ಮಾಡುವ ಆಲೋಚನೆ ನಿರ್ದೇಶಕರದು. ಭದ್ರಾವತಿ ಮೂಲದ ವಿತರಕ ರವಿ ಎಸ್​ಎನ್​ಟಿ ಎಂಟರ್​ಪೆಸಸ್​ ಬ್ಯಾನರ್​ನಲ್ಲಿ ಮೊದಲ ಬಾರಿಗೆ ಈ ಸಿನಿಮಾ ನಿರ್ಮಿಸಲಿದ್ದಾರೆ.

Amritha Aiyer at Hanuman Teaser Launch
Amritha Aiyer at Hanuman Teaser Launch

ಕನ್ನಡಕ್ಕೆ ಹನುಮಾನ್​ ಅಮೃತಾ

"ಕಾಳಿ', "ಬಿಗಿಲ್​', "ರೆಡ್​' ಜತೆಗೆ ಕಳೆದ ವರ್ಷ ತೆರೆಕಂಡ ಹಿಟ್​ "ಹನುಮಾನ್​' ಸೇರಿ 10ಕ್ಕೂ ಹೆಚ್ಚು ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿರುವ ಅಮೃತಾ ಅಯ್ಯರ್​, ಅರಸು ಅಂತಾರೆ ನಿರ್ದೇಶಿಸಲಿರುವ ಹೊಸ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಲಿದ್ದಾರೆ.

ಅವರ ಆಯ್ಕೆಯ ಬಗ್ಗೆ, "ನಾಯಕಿಯ ಪಾತ್ರಕ್ಕೆ ಸ್ಪಷ್ಟವಾಗಿ ಕನ್ನಡ ಮಾತನಾಡುವ, ಚುರುಕಾಗಿ ನಟಿಸುವಂತಹ ಹೊಸ ಮುಖ ಬೇಕಿತ್ತು. "ಹನುಮಾನ್​' ಚಿತ್ರ ನೋಡಿದ್ದೆ. ಅದರಲ್ಲಿ ಅಮೃತಾ ತುಂಬ ಚೆನ್ನಾಗಿ ನಟಿಸಿದ್ದರು. ಅವರು ಕನ್ನಡದ ಹುಡುಗಿ ಅಂತ ಗೊತ್ತಾಗಿ, ಸಂಪರ್ಕಿಸಿದೆವು. ಅವರ ಕನ್ನಡ ತುಂಬ ಸ್ಪಷ್ಟವಾಗಿತ್ತು. ನಟನೆ, ಡೈಲಾಗ್​ ಡೆಲಿವರಿ, ಡಬ್ಬಿಂಗ್​ನಲ್ಲಿ ಎಲ್ಲವನ್ನೂ ಮಾಡುತ್ತಾರೆ ಅಂತ ಮನದಟ್ಟಾಯಿತು. ಅವರು ಕೂಡ ಮೊದಲ ಭೇಟಿಯಲ್ಲೇ ಕಥೆ ಒಪ್ಪಿಕೊಂಡರು. ಹೀಗಾಗಿ ನಾಯಕಿಗಾಗಿ ನಾವು ಹೆಚ್ಚು ಹುಡುಕಾಡಲಿಲ್ಲ' ಎನ್ನುತ್ತಾರೆ ಅರಸು ಅಂತಾರೆ. ಗಣೇಶ್​, ಅಮೃತಾ ಜತೆ ರಮೇಶ್​ ಇಂದಿರ, ರಂಗಾಯಣ ರು, ಕಾಕ್ರೋಚ್​ ಸುಧಿ ಪ್ರಮುಖ ತಾರಾಗಣದಲ್ಲಿ ನಟಿಸಲಿದ್ದು, ಚಿತ್ರಕ್ಕೆ ಸುಜ್ಞಾನ್​ ಛಾಯಾಗ್ರಹಣವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net