

ಸಾಮಾನ್ಯವಾಗಿ ತಾನಾಯ್ತು, ತನ್ನ ಪಾಡಾಯ್ತು ಅಂತ ಸುಮ್ಮನಿರುವ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಸಿಟ್ಟಾಗಿದ್ದಾರೆ. ಅದಕ್ಕೆ ಕಾರಣ ‘ಮಸಕ್ಕಲಿ’ ಹಾಡು. ಎಲ್ಲರಿಗೂ ಗೊತ್ತಿರುವಂತೆ ಹಲವು ವರ್ಷಗಳ ಹಿಂದೆ ಬಿಡುಗಡೆಯಾದ ‘ದಿಲ್ಲಿ 6’ ಚಿತ್ರಕ್ಕೆ ಅವರೇ ಕಂಪೋಸ್ ಮಾಡಿರುವ ಹಾಡದು. ಹೀಗಿರುವಾಗ ಅವರ‌್ಯಾಕೆ ತಾವೇ ಸಂಯೋಜಿಸಿರುವ ಹಾಡಿನ ಮೇಲೆ ಸಿಟ್ಟಾಗಬೇಕು ಎಂಬ ಪ್ರಶ್ನೆ ಬರುವುದು ಸಹಜ.
ವಿಷಯ ಏನೆಂದರೆ, ಎರಡು ದಿನಗಳ ಹಿಂದೆ ‘ಮಸಕ್ಕಲಿ ...’ ಹಾಡಿನ ರೀಮಿಕ್ಸ್ ವರ್ಷನ್ ಬಂದಿದೆ. ಟಿ-ಸೀರೀಸ್ ಹೊರತಂದಿರುವ ಈ ವೀಡಿಯೋ ಸಾಂಗ್‌ನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ತಾರಾ ಸುತಾರಿಯಾ ಕಾಣಿಸಿಕೊಂಡಿದ್ದು, ಸಚೇತ್ ಟಂಡನ್ ಮತ್ತು ತುಳಸಿ ಕುಮಾರ್ ಹಾಡಿದ್ದಾರೆ. ಈ ಹಾಡು ಕೇಳಿರುವವರು ಭಯಂಕರ ರಾಂಗ್ ಆಗಿದ್ದಾರೆ. ಅದರಲ್ಲಿ ಎ.ಆರ್. ರೆಹಮಾನ್ ಸಹ ಒಬ್ಬರು. ಅದ್ಕಕೆ ಕಾರಣ, ಹಾಡು ಮೂಡಿ ಬಂದಿರುವ ರೀತಿ. ಒಂದು ಹಳೆಯ ಜನಪ್ರಿಯ ಹಾಡನ್ನು ರೀಮಿಕ್ಸ್ ಹೆಸರಿನಲ್ಲಿ ಕೆಡಸಿದರೆ ಸಹಜವಾಗಿಯೇ, ಆ ಹಾಡಿನ ಅಭಿಮಾನಿಗಳಿಗೆ ಮತ್ತು ಅದನ್ನು ಸಂಯೋಜಿಸಿದವರಿಗೆ ಸಿಟ್ಟು ಬರುತ್ತದೆ. ಈ ರೀತಿ ಹಿಂದೆ ಸಾಕಷ್ಟು ಬಾರಿಯಾಗಿದ್ದು, ಈಗ ಮತ್ತೆ ಪುನರಾವರ್ತನೆಯಾಗಿದೆ.
ಅದರಲ್ಲೂ ರೆಹಮಾನ್ ಅವರ ಕೆಲವು ಜನಪ್ರಿಯ ಹಾಡುಗಳು ಈ ಹಿಂದೆ ರೀಮಿಕ್ಸ್ ಆಗಿವೆ. ಆ ಬಗ್ಗೆ ಸಾಕಷ್ಟು ಟೀಕೆ-ಠಿಪ್ಪಣಿಗಳು ಕೇಳಿ ಬಂದಿವೆ. ಈ ಬಾರಿ ಸ್ವತಃ ರೆಹಮಾನ್ ಅವರೇ ಬೇಸರದಿಂದ, ರೀಮಿಕ್ಸ್‌ಗೆ ಪರ್ಯಾಯವಾಗಿ, ‘ಎಂಜಾಯ್ ದಿ ಒರಿಜಿನಲ್’ ಎಂದು ಹಳೆಯ ಹಾಡನ್ನು ಶೇರ್ ಮಾಡಿಕೊಂಡಿದ್ದಾರೆ. ಹಾಗೆಯೇ, ಒಂದು ಒಳ್ಳೆಯ ಹಾಡು ಮಾಡುವುದಕ್ಕೆ, ಎಷ್ಟೆಲ್ಲಾ ಕಷ್ಟಪಡಬೇಕಾಗುತ್ತದೆ ಎಂದು ಸಹ ಬರೆದುಕೊಂಡಿದ್ದಾರೆ.
ಬರೀ ರೆಹಮಾನ್ ಅಷ್ಟೇ ಅಲ್ಲ, ‘ದಿಲ್ಲಿ 6’ ಚಿತ್ರದ ನಿರ್ದೇಶಕ ರಾಕೇಶ್ ಓಂಪ್ರಕಾಶ್ ಮೆಹ್ರಾ ಮತ್ತು ‘ಮಸಕ್ಕಲಿ’ ಹಾಡು ಬರೆದಿರುವ ಪ್ರಸೂನ್ ಜೋಷಿ ಸಹ ರೀಮಿಕ್ಸ್ ಹಾಡಿನ ಕುರಿತು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.