ಶಿವಣ್ಣ ಕಣ್ಣಲ್ಲಿ ಅಪ್ಪು; ಅವನಿಲ್ಲ ಎಂದು ನಾನೇಕೆ ಅಂದುಕೊಳ್ಳಲಿ?

Appu
Published on
‘ನಮ್ಮ ಮುಂದೆ ಆಡಿ ಬೆಳೆದ ಚಿಕ್ಕವರೆಲ್ಲ ಹೋಗುತ್ತಿದ್ದಾರೆ. ರಾಘು ಬಾಯಲ್ಲೂ ಸಾವಿನ ಮಾತುಗಳು ಬರುತ್ತಿವೆ. ಇವರೆಲ್ಲ ನನಗಿಂತ ಚಿಕ್ಕವರು. ಇದನ್ನೆಲ್ಲ ಕೇಳುತ್ತಿದ್ದರೆ ಮನೆಯ ಹಿರಿಯವನಾಗಿ ನನಗೆ ಹೇಗಾಗಿರಬೇಡ ...’ - ಪುನೀತ್ ಇಲ್ಲದ ಮೇಲೆ ಶಿವರಾಜಕುಮಾರ್ ಅಕ್ಷರಶಃ ಕುಗ್ಗಿದ್ದಾರೆ. ಮನದೊಳಗೆ ಮರೆಯಲಾರದ ನೋವಿದ್ದರೂ ಅದನ್ನು ಹೊರಹಾಕದೆ, ತಮಗೆ ತಾವೇ ಧೈರ್ಯ ತುಂಬಿಕೊಂಡು ಎಲ್ಲರನ್ನೂ ಮುನ್ನಡೆಸುತ್ತಿದ್ದಾರೆ. ಆದರೆ, ಆ ನೋವಿನ ಕಟ್ಟೆ ಅದೆಷ್ಟು ಅಂತ ಸಹಿಸಿಕೊಂಡೀತು ಅಲ್ಲವೇ? ಆಗಾಗ ಒಡೆಯುತ್ತಲೇ ಇರುತ್ತದೆ. ಪುನೀತ್ ಹುಟ್ಟುಹಬ್ಬದ ನಿಮಿತ್ತ ಅವರ ಅಭಿನಯದ ‘ಜೇಮ್್ಸ’ ಇಂದು (ಮಾ. 17) ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಈ ಸಂದರ್ಭದಲ್ಲಿ ಶಿವರಾಜಕುಮಾರ್ ಮತ್ತೆ ಪುನೀತ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

| ಮಂಜು ಕೊಟಗುಣಸಿ ಬೆಂಗಳೂರು

ಚಿಕ್ಕವನೇ ಮೊದಲು ನಡೆದ...

‘ಅಪ್ಪ-ಅಮ್ಮ ಹೋದಮೇಲೆ ಅವರಿಲ್ಲ ಎಂಬ ಕೊರಗಿನಲ್ಲಿದ್ದೆ. ಇದೀಗ ಚಿಕ್ಕವನೂ ಅಪ್ಪ-ಅಮ್ಮನ ಬಳಿ ಸೇರಿಕೊಂಡಿದ್ದಾನೆ. ನಾನು 13 ವರ್ಷದವನಿದ್ದಾಗ ಅಪು್ಪ ನನ್ನ ತೋಳಲ್ಲಿದ್ದ. ಇಡೀ ಮನೆ ಮಂದಿಯ ಮುದ್ದಿನ ಮಗು ಅವನು. ಮನೆಯಲ್ಲಿ ಅಪು್ಪ ಹುಟ್ಟಿದ ಮೇಲೆ ಸಂಭ್ರಮವೇ ಬೇರೆಯಿತ್ತು. ಇದೀಗ ಆ ಮುದ್ದಿನ ಮಗು ನಮ್ಮೊಂದಿಗಿಲ್ಲ ಎಂಬುದನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ. ನಗುತ್ತೇವೆ. ಸಿನಿಮಾದಲ್ಲಿ ನಟನೆ ಮಾಡುತ್ತೇವೆ. ಡಬ್ಬಿಂಗ್ ಸಹ ಮಾಡುತ್ತೇವೆ. ಅದೆಲ್ಲವನ್ನು ಅವನಿಲ್ಲ ಎಂಬ ನೋವನ್ನು ಒಳಗಿಟ್ಟುಕೊಂಡು ಮಾಡಲೇಬೇಕು. ಲಕ್ಷ್ಮೀ, ಪೂರ್ಣಿಮಾ, ನಾನು, ರಾಘು, ಅಪು್ಪ ಒಟ್ಟಿಗೆ ಬೆಳೆದವರು. ಆ ಐವರಲ್ಲಿ ಒಬ್ಬರಿಲ್ಲ ಎಂದಾಗ ತುಂಬ ನೋವಾಗುತ್ತದೆ. ಅಪ್ಪ, ಅಮ್ಮ ಹೋದ ಮೇಲೆ ಅವರ ಜತೆಯಲ್ಲಿ ಚಿಕ್ಕವನೂ ಹೋದ. ಆ ನೋವನ್ನು ಪದೇಪದೆ ಹೇಳುವುದಕ್ಕೆ ನನಗೂ ನೋವಾಗುತ್ತದೆ’ ಎನ್ನುತ್ತಾರೆ ಶಿವರಾಜಕುಮಾರ್.

ಡೈಲಾಗ್ ಮೂಲಕ ಫಿಲಾಸಫಿ ...

‘ಜೇಮ್್ಸ’ ಚಿತ್ರದ ಸಂಭಾಷಣೆಯನ್ನು ನೆನಪಿಸಿಕೊಳ್ಳುವ ಅವರು, ‘ದೇವರು ಎಲ್ಲರನ್ನೂ ಇಷ್ಟ ಪಡ್ತಾನೆ. ಅದರಲ್ಲಿ ಕೆಲವರನ್ನು ತುಂಬ ಬೇಗ ಇಷ್ಟಪಟ್ಟು ಕರೆದುಕೊಂಡು ಬಿಡ್ತಾನೆ ...’ ಎಂಬ ಸಂಭಾಷಣೆ ‘ಜೇಮ್್ಸ’ ಚಿತ್ರದಲ್ಲಿದೆ. ಈ ಡೈಲಾಗ್ ಡಬ್ ಮಾಡುವಾಗ, ‘ಎಷ್ಟು ನಿಜ ಅಲ್ವಾ?’ ಎಂದು ನನಗೆ ಅನಿಸಿದ್ದುಂಟು. ಏಕೆಂದರೆ, ಅಪು್ಪ ಹಾಗೇ ಇದ್ದ. ನಿರ್ದೇಶಕರು ಅಷ್ಟೇ ಫಿಲಾಸಫಿಕಲ್ ಆಗಿ ಕೆಲವೊಂದಿಷ್ಟು ಸಂಭಾಷಣೆಗಳನ್ನಿಟ್ಟಿದ್ದಾರೆ. ಪ್ರತಿಯೊಂದು ಹಂತದಲ್ಲೂ ಅವು ಕನೆಕ್ಟ್ ಆಗುತ್ತಾ ಹೋಗುತ್ತವೆ’ ಎನ್ನುತ್ತಾರೆ ಶಿವರಾಜ ಕುಮಾರ್.

ಎಲ್ಲೆಲ್ಲೂ ಅವನಿದ್ದಾನೆ...

ಅಪು್ಪನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಲು ಮನಸ್ಸು ಬರಲ್ಲ ಎನ್ನುವ ಶಿವರಾಜಕುಮಾರ್, ‘ಆತ ಎಲ್ಲೂ ಹೋಗಿಲ್ಲ. ನಿತ್ಯ ಆತನನ್ನು ನೋಡದೆ ನನಗೆ ಬೆಳಕಾಗುವುದಿಲ್ಲ. ಮನೆಯಲ್ಲಿಯೂ ಅವನೇ ಕಾಣುತ್ತಾನೆ. ಹೊರ ಬಂದರೆ, ಪ್ರತಿ ಗಲ್ಲಿಗಲ್ಲಿಯಲ್ಲಿಯೂ ಅವನ ಬ್ಯಾನರ್​ಗಳಿವೆ. ಬೈಕ್, ಕಾರು ಎಲ್ಲದರ ಮೇಲೂ ಅಪು್ಪ ರಾರಾಜಿಸುತ್ತಿದ್ದಾನೆ. ಹೀಗಿರುವಾಗ ಅವನು ಇಲ್ಲ ಎಂದು ನಾನೇಕೆ ಅಂದುಕೊಳ್ಳಲಿ? ಅವನಿಲ್ಲ ಎಂಬುದನ್ನು ಮನಸ್ಸಿನಿಂದ ತೆಗೆಯಬೇಕು. ಇದೀಗ ‘ಜೇಮ್್ಸ’ ಸಿನಿಮಾ ಬರುತ್ತಿದೆ. ಇದೇ ಆತನ ಕೊನೇ ಚಿತ್ರ ಆಗಿರಬಹುದು. ಆದರೆ, ನಮ್ಮೊಳಗೆ, ನಾಡಿನ ಜನರ ಮನದಲ್ಲಿ ಆತನ ಸಿನಿಮಾಗಳೇ ಓಡುತ್ತಿರುತ್ತವೆ. ಜನರು ಕೊಟ್ಟ ಈ ಪ್ರೀತಿಯನ್ನು ಹೇಳಿಕೊಳ್ಳಲು ಅಸಾಧ್ಯ’ ಎಂದು ನೋವಿನಿಂದ ಹೇಳಿಕೊಳ್ಳುತ್ತಾರೆ ಅವರು.

ಶಿವಣ್ಣ ಮತ್ತು ಕುಟುಂಬವೇ ದೊಡ್ಡ ಆಸರೆ...

ಅಪು್ಪ ನಿಧನದ ಬಳಿಕ ಸಂಪೂರ್ಣ ಬ್ಲಾಂಕ್ ಆಗಿದ್ದ ಜೇಮ್್ಸ ಬಳಗಕ್ಕೆ ಶಕ್ತಿ ತುಂಬಿದವರೇ ಶಿವಣ್ಣ. ಅದನ್ನು ಸ್ವತಃ ನಿರ್ದೇಶಕರು ಹೇಳಿಕೊಂಡಿದ್ದಾರೆ. ‘ಅಪು್ಪ ಸಾರ್ ನಿಧನದ ಬಳಿಕ ನಮ್ಮ ಇಡೀ ತಂಡಕ್ಕೆ ದೊಡ್ಡ ಸಪೋರ್ಟ್ ಆಗಿದ್ದವರು ಶಿವಣ್ಣ. ಅವರು ಕೈ ಹಿಡಿದ ರೀತಿಯನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅದರಲ್ಲೂ ಡಬ್ಬಿಂಗ್ ವಿಚಾರದಲ್ಲಿ ಅವರಿಗೆ ನಾವು ಋಣಿ. ಬೇರೊಬ್ಬರ ಧ್ವನಿಗೆ ತಮ್ಮ ಧ್ವನಿ ಜೋಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಡಬ್ಬಿಂಗ್​ನಲ್ಲಿ ಕಲಾವಿದರು ಮತ್ತೆ ನಟಿಸಬೇಕು. ಶಿವಣ್ಣ ಅವರ ಅನುಭವದಿಂದಲೇ, ಪುನೀತ್ ಅವರ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ’ ಎಂದು ಸ್ಮರಿಸುತ್ತಾರೆ.

ನಾವೇ ಪುಣ್ಯವಂತರು!

ಜೇಮ್ಸ್​ ನಿರ್ದೇಶಕ ಚೇತನ್ ಕುಮಾರ್ ಮಾತು

‘ಪವರ್ ಸ್ಟಾರ್’ ಪುನೀತ್ ರಾಜ್​ಕುಮಾರ್ ನಟನೆಯ ಕೊನೆಯ ಚಿತ್ರವನ್ನು ನಿರ್ದೇಶಿಸಿದವರು ಚೇತನ್ ಕುಮಾರ್. 2015ರಲ್ಲಿಯೇ ಈ ಸಿನಿಮಾ ಘೋಷಣೆ ಆಗಿದ್ದರೂ, 2019ರಿಂದ ಸಿನಿಮಾ ಕೆಲಸಗಳು ಶುರುವಾದವು. ಅಲ್ಲಿಂದ ಇಲ್ಲಿಯವರೆಗೂ ಪುನೀತ್ ಜತೆ ಹೆಚ್ಚು ಸಮಯ ಕಳೆದವರೆಂದರೆ ಅದು ‘ಜೇಮ್್ಸ’ ನಿರ್ದೇಶಕ ಚೇತನ್ ಕುಮಾರ್. ‘ಈ ಎರಡೂ ವರ್ಷಗಳಲ್ಲಿ ಅವರ ಜತೆ ಮಾತನಾಡದ ದಿನವಿಲ್ಲ. ಆಗೊಂದು ಈಗೊಂದು ಮೀಟಿಂಗ್ ಇದ್ದಿದ್ದೇ. ಅವರ ಆಪ್ತರ ವಲಯದಲ್ಲಿ ನಮಗೊಂದು ಜಾಗ ಕೊಟ್ಟಿದ್ದರು. ನಮ್ಮ ಮೇಲೆ ಅವರಿಗೆ ಅಷ್ಟೊಂದು ಪ್ರೀತಿ ಇತ್ತು. ಎಷ್ಟೋ ಜನ ಅವರ ಒಂದೇ ಒಂದು ಫೋಟೋ ಸಲುವಾಗಿ ಕಾದ ಲಕ್ಷಾಂತರ ಉದಾಹರಣೆಗಳಿವೆ. ಪೋಸ್ಟ್ ಪ್ರೊಡಕ್ಷನ್ ಹೊತ್ತಲ್ಲಿ ಅವರ ವಿಡಿಯೋ ನೋಡುತ್ತಿದ್ದರೆ ಕರುಳು ಚುರ್ ಎನ್ನುತ್ತೆ. ಯಾವ ಜನ್ಮದ ಪುಣ್ಯವೋ ಏನೋ, ಅವರ ಕೊನೆಯ ದಿನಗಳಲ್ಲಿ ನಾವು ಅವರ ಜತೆಗಿದ್ದೆವು. ಆ ದೇವರ ಜತೆಗಿದ್ದ ನಾವೇ ಪುಣ್ಯವಂತರು’ ಎಂದು ನಿರ್ದೇಶಕ ಚೇತನ್ ಬೇಸರಿಸಿಕೊಳ್ಳುತ್ತಾರೆ.

ಖುಷಿ ಅನ್ನೋದೇ ಇಲ್ಲ

ಅಪ್ಪು ಅವರನ್ನು ಕಣ್ತುಂಬಿಕೊಳ್ಳಲು ಇಡೀ ದೇಶ ಕಾತರದಲ್ಲಿದೆ. ಆದರೆ, ನಿರ್ದೇಶಕ ಚೇತನ್​ಗೆ ಮಾತ್ರ ಆ ಖುಷಿ ಇಲ್ಲ. ‘ಸಿನಿಮಾ ಬಿಡುಗಡೆಯಾಗುತ್ತಿದೆ. ಆದರೆ, ಆ ಖುಷಿಗಿಂತ ನೋವೇ ಹೆಚ್ಚಿದೆ. ಏಕೆಂದರೆ, ಇಡೀ ಸಿನಿಮಾ ಒನ್ ಮ್ಯಾನ್ ಶೋ. ಪ್ರತಿ ಫ್ರೇಮ್ಲ್ಲೂ ಅವರೇ ಅಬ್ಬರಿಸುತ್ತಾರೆ. ಒಂದು ಸಿನಿಮಾ ಮಾಡುವುದೇ ನಿರ್ವಪಕರು ಮತ್ತು ನಾಯಕನ ಮುಖದಲ್ಲಿ ನಗು ನೋಡುವುದಕ್ಕೆ. ಆದರೆ, ಆ ನಗುವನ್ನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರ ಹುಟ್ಟುಹಬ್ಬಕ್ಕೆ ಸಿನಿಮಾ ಬರಲೇಬೇಕು ಎಂದುಕೊಂಡಿದ್ದೆವು. ಅದರಂತೆ ಬರುತ್ತಿದೆ. ಅದೊಂದು ತೃಪ್ತಿ ಇದೆ’ ಎನ್ನುತ್ತಾರೆ.

ಅಪ್ಪು ಅವರಲ್ಲಿತ್ತು ದೈವಿಕ ಶಕ್ತಿ

‘ಅಪ್ಪು ಸಾರ್ ಕೇವಲ ಒಬ್ಬ ನಟರಲ್ಲ. ಅದೊಂದು ಶಕ್ತಿ. ಅದೊಂದು ದೈವಿಕ ಭಾವ. ಏಕೆಂದರೆ, ಅವರಲ್ಲಿ ಸರಳತೆ ಇತ್ತು. ವಿನಯತೆ ಇತ್ತು. ಪ್ರಾಮಾಣಿಕತೆಯೂ ಇತ್ತು. ಈ ಮೂರು ಇದ್ದವರಿಗೆ ದೈವಿಕತೆ ಒಲಿಯುತ್ತದೆ. ಅದನ್ನು ನಾವು ಇದೀಗ ಎಲ್ಲೆಡೆ ನೋಡುತ್ತಿದ್ದೇವೆ. ಒಂದರ್ಥದಲ್ಲಿ ಎಲ್ಲೆಲ್ಲೂ ಅವರೇ ಕಾಣಿಸುತ್ತಿದ್ದಾರೆ. ರಥದ ಮೇಲೂ ಅವರೇ. ದೇವಸ್ಥಾನದಲ್ಲೂ ಅವರೇ. ಪ್ರತಿಯೊಬ್ಬರ ಮನ, ಮನೆಯ ಗೋಡೆಯ ಮೇಲೂ ಅಪು್ಪ ಕಾಣಿಸುತ್ತಾರೆ’ ಎಂಬುದು ಚೇತನ್ ಅವರ ಮಾತು.

5 ಭಾಷೆ ಕೆಲಸ ಸುಲಭವಲ್ಲ...

ಆರಂಭದಲ್ಲಿ ಒಂದೇ ಭಾಷೆಯಲ್ಲಿ ‘ಜೇಮ್್ಸ’ ಸಿನಿಮಾ ತೆರೆಗೆ ತರುವ ನಿಟ್ಟಿನಲ್ಲಿಯೇ ಇಡೀ ತಂಡ ಕೆಲಸ ಮಾಡುತ್ತಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಐದು ಭಾಷೆಗಳಲ್ಲಿ ಸಿನಿಮಾ ತರುವ ಪ್ಲಾನ್ ಆಯಿತಂತೆ. ‘ಫೆಬ್ರವರಿ 2ಕ್ಕೆ ಚಿತ್ರವನ್ನು ಐದು ಭಾಷೆಗಳಲ್ಲಿ ಬಿಡುಗಡೆ ಮಾಡಬೇಕು ಎಂದು ತೀರ್ವನವಾಯಿತು. ಅಲ್ಲಿಂದ ನಿತ್ಯ ನಮ್ಮದು 19ರಿಂದ 20 ತಾಸು ಕೆಲಸ. ಸಹಜವಾಗಿ ಒಂದು ದೊಡ್ಡ ಬಜೆಟ್​ನ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಏನಿಲ್ಲ ಅಂದರೂ ಆರು ತಿಂಗಳು ಬೇಕೇ ಬೇಕು. ನಾವಿಲ್ಲಿ ಕೇವಲ ಒಂದೂವರೆ ತಿಂಗಳಲ್ಲಿ ಮಾಡಿ ಮುಗಿಸಿದ್ದೇವೆ. ಅದರಲ್ಲಿ ಐದು ಭಾಷೆಯಲ್ಲಿ ಡಬ್ಬಿಂಗ್ ದೊಡ್ಡ ಸವಾಲಿನ ಕೆಲಸವಾಗಿತ್ತು. ಇದೀಗ ಅಂದುಕೊಂಡ ದಿನದಂದೇ ಸಿನಿಮಾ ಬಿಡುಗಡೆ ಮಾಡುತ್ತಿರುವುದು ತೃಪ್ತಿ ತಂದಿದೆ’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net