apple cut movie review: ಆಸಕ್ತಿಕರ ವಿಷಯವಸ್ತುವಿನ ಸಾಧಾರಣ ನಿರೂಪಣೆ

appanna
Published on

ಬೆಂಗಳೂರು: ಆತ ಸತ್ಯ (ಸೂರ್ಯ ಗೌಡ) ವೃತ್ತಿಯಲ್ಲಿ ಮಾನವಶಾಸ್ತ್ರ ಪ್ರಾಧ್ಯಾಪಕ. ಮೇಲ್ನೋಟಕ್ಕೆ ಒಳ್ಳೆಯವನಂತೆ ಕಾಣಿಸುತ್ತಾನೆ. ಆದರೆ ಆತನಗೊಳಗೆ ಕ್ರೌರ್ಯ ಅಡಗಿದೆ. ವಿವಾಹ ಪೂರ್ವ ಸಂಬಂಧ ಹೊಂದಿದವರು, ಪ್ರೀತಿ-ಪ್ರೇಮ ಎಂದು ಮೋಸ ಮಾಡುವವರನ್ನು ಕೊಲೆ ಮಾಡುತ್ತಿರುತ್ತಾನೆ. ನೇರವಾಗಿ ಹೇಳುವುದಾದರೆ, ಈತನೊಬ್ಬ ಸೈಕೋ ಕಿಲ್ಲರ್. ಸ್ವಂತ ತಾಯಿ ಹಾಗೂ ಸ್ನೇಹಿತೆಯನ್ನೇ ಕೊಲೆ ಮಾಡಿದ ಪಾಪಿ. ಈತನ ಹಿಂದಿನ ಕಥೆ ಏನು? ಮಾನವಶಾಸ್ತ್ರ ಪ್ರಾಧ್ಯಾಪಕ ಸೈಕೋ ಕಿಲ್ಲರ್ ಆಗಲು ಕಾರಣವೇನು? ಈ ಎಲ್ಲ ಪ್ರಶ್ನೆಗಳಿಗೆ ‘ಆಪಲ್ ಕಟ್’ ಸಿನಿಮಾ ಮೂಲಕ ನಿರ್ದೇಶಕಿ ಸಿಂಧೂ ಗೌಡ ಉತ್ತರ ಕೊಡುವ ಪ್ರಯತ್ನ ಮಾಡಿದ್ದಾರೆ. ನಿರ್ದೇಶಕಿ ಸಿಂಧೂ ಗೌಡ ಆಯ್ಕೆ ಮಾಡಿಕೊಂಡಿರುವ ವಿಷಯ ವಸ್ತು ಚೆನ್ನಾಗಿದೆ. ಕಥೆಯಲ್ಲಿ ಸೈಕಾಲಜಿ, ಅಂಥ್ರಪಾಲಜಿ, ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್‌ನಂತಹ ಸೀಟಂಚಲ್ಲಿ ಕೂರಿಸುವ ಅಂಶಗಳನ್ನು ಸೇರಿಸಿದ್ದಾರೆ. ಆದರೆ ನಿರೂಪಣೆಯಲ್ಲಿ ಇನ್ನೊಂದಿಷ್ಟು ಜವಾಬ್ದಾರಿ ವಹಿಸಬೇಕಿತ್ತು. ಆಸಕ್ತಿದಾಯಕ ವಿಷಯಗಳಿಗೆ ಇನ್ನು ಹೆಚ್ಚು ಕಮರ್ಷಿಯಲ್ ಟಚ್ ನೀಡಬೇಕಿತ್ತು. ಒಂದೇ ಗತಿಯಲ್ಲಿ ಸಾಧಾರಣವಾಗಿ ನಿರೂಪಿಸಲಾಗಿದ್ದು, ಕಥೆಯು ಹೆಚ್ಚು ಹಿಡಿದಿಟ್ಟುಕೊಳ್ಳುವುದಿಲ್ಲ. ಈ ನಡುವೆ ಆಪಲ್ ಕಟ್ ಎಂಬ ರಾಸಾಯನಿಕ ಹಾಗೂ ವೈದ್ಯಲೋಕದ ಕೆಲವು ಪದಗಳನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. ಆ ಮೂಲಕ ವಿಶೇಷ ವಿಚಾರವನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಸೂರ್ಯ ಗೌಡ ಮೊದಲಿಗೆ ಮುಗ್ಧನಾಗಿ, ಕೊನೆಗೆ ಸೈಕೋ ಕಿಲ್ಲರ್ ಆಗಿ ಗಮನ ಸೆಳೆಯುತ್ತಾರೆ. ಅಶ್ವಿನಿ, ಅಪ್ಪಣ್ಣ ರಾಮದುರ್ಗ, ಅಮೃತಾ ಪವಾರ್ ಕೊಟ್ಟ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಬಲ ರಾಜವಾಡಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಕೆಲವು ಕಡೆ ನಗಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ವೀರ್ ಸಮರ್ಥ್ ಸಂಗೀತ ಹಾಗೂ ರಾಜೇಶ್ ಗೌಡ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿ ಮೂಡಿಬಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net