

ಬೆಂಗಳೂರು: ಕನ್ನಡದ ‘ಹಿಟ್ಲರ್ ಕಲ್ಯಾಣ’, ‘ಭೈರವಿ’, ‘ಶಾಂಭವಿ’ ಸೇರಿ ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ಮೈಸೂರು ಮೂಲದ ನಟಿ ಅಪೂರ್ವ ಆರಾಧ್ಯ ಇದೀಗ ಕನ್ನಡ, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಸದ್ಯ ಅವರು ಕನ್ನಡದಲ್ಲಿ ಎರಡು ಚಿತ್ರಗಳಲ್ಲಿ ಅಭಿನಯಿಸಿದ್ದು, ಅದರಲ್ಲಿ ‘ಮಾತೊಂದ ಹೇಳುವೆ’ ನಾಳೆ ರಿಲೀಸ್ ಆಗುತ್ತಿದೆ. ಮಯೂರ್ ಕಡಿ ನಿರ್ದೇಶಿಸಿ, ನಟಿಸಿರುವ ಈ ವಿಭಿನ್ನ ಲವ್‌ಸ್ಟೋರಿಯಲ್ಲಿ ಅಪೂರ್ವ ಮುಖ್ಯಭೂಮಿಕೆಯಲ್ಲಿದ್ದು, ಕಾಕತಾಳೀಯ ಎಂಬಂತೆ ಮೈಸೂರು ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ.
ಮೊದಲ ಸಿನಿಮಾ ಬಿಡುಗಡೆಯ ಸಂಭ್ರಮದಲ್ಲಿರುವ ಅವರು, ‘ನಾನು ಮೂಲತಃ ಮೈಸೂರಿನ ಹುಡುಗಿ. ಕಾಕತಾಳೀಯ ಎಂಬಂತೆ ಈ ಚಿತ್ರದಲ್ಲೂ ಮೈಸೂರು ಹುಡುಗಿ ಪಾತ್ರದಲ್ಲೇ ನಟಿಸಿದ್ದೇನೆ. ಇದು ಹುಬ್ಬಳ್ಳಿ ಹುಡುಗ- ಮೈಸೂರು ಹುಡುಗಿ ನಡುವಿನ ಲವ್‌ಸ್ಟೋರಿಯಾಗಿದ್ದು, ಕಥೆಯಲ್ಲಿ ತಾಜಾತನವಿದೆ. ಧಾರಾವಾಹಿಯಲ್ಲಿ ನನ್ನ ನಟನೆ ನೋಡಿ ಈ ಚಿತ್ರದಲ್ಲಿ ಅವಕಾಶ ದೊರೆಯಿತು. ನಾನಿಲ್ಲಿ ಟೀಚರ್ ಆಗಿದ್ದೇನೆ. ತಂದೆ-ತಾಯಿ ಇಲ್ಲದೆ ಅಜ್ಜನ ಮಡಿಲಿನಲ್ಲಿ ಬೆಳೆದ ಹುಡುಗಿ ಮುಂದೆ ಯಾವೆಲ್ಲ ಸವಾಲುಗಳನ್ನು ಎದುರಿಸುತ್ತಾಳೆ ಎಂಬುದರ ಸುತ್ತ ಕಥೆ ಸಾಗುತ್ತದೆ. ಪ್ರಾರಂಭದಲ್ಲಿ ಪಾತ್ರಕ್ಕಾಗಿ ಕೆಲ ದಿನ ರಿಹರ್ಸಲ್ ಮಾಡಿದ್ದೆ. ಬಹುತೇಕ ಶೂಟಿಂಗ್ ಹುಬ್ಬಳ್ಳಿ, ಧಾರಾವಾಡದಲ್ಲಿ ನಡೆದಿರುವ ಕಾರಣ ಅಲ್ಲಿನ ಸಂಸ್ಕೃತಿ, ಆಹಾರ, ಜೀವನ ಪದ್ಧತಿ ಹಾಗೂ ಭಾಷೆಯ ಬಗ್ಗೆ ನನಗೆ ತಿಳಿಯಲು ಸಾಧ್ಯವಾಯಿತು. ಧಾರಾವಾಡದ ಕೆಎಲ್‌ಇ ಕಾಲೇಜು, ಸರ್ಕಲ್, ಚಿಗರಿ ಬಸ್ ಇನ್ನೂ ನನ್ನ ನೆನಪಿನಲ್ಲಿ ಹಾಗೇ ಉಳಿದಿವೆ. ಜೋಳದ ರೊಟ್ಟಿ ಊಟ ಹಾಗೂ ಮಂಡಕ್ಕಿ ನನ್ನ ´ಫೇವರಿಟ್’ ಎಂದು ಶೂಟಿಂಗ್ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಇನ್ನು ಅಪೂರ್ವ, ಕನ್ನಡದ ‘ಆಧುನಿಕ ಶ್ರವಣಕುಮಾರ’ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ತಮಿಳು ಹಾಗೂ ಮಲಯಾಳಂಗೂ ಡೆಬ್ಯೂ ಮಾಡಿದ್ದಾರೆ. ‘ತಮಿಳು ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಮಾಲಿವುಡ್ ಸಿನಿಮಾದ ಚಿತ್ರೀಕರಣ ಮೊದಲ ಹಂತದಲ್ಲಿದೆ. ಚಿತ್ರತಂಡಗಳಿಂದ ಅಧಿಕೃತವಾಗಿ ಘೋಷಣೆ ಆಗುವವರೆಗೂ ಹೆಚ್ಚು ಮಾಹಿತಿ ನೀಡುವಂತಿಲ್ಲ’ ಎನ್ನುತ್ತಾರೆ ಅಪೂರ್ವ.