

ಆಮೀರ್ ಖಾನ್ ಜತೆ ಅನುಷ್ಕಾ ಶರ್ಮ ಇನ್ನೊಂದು ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಇಂದು ನಿನ್ನೆಯದಲ್ಲ. ‘ಪಿಕೆ’ ಚಿತ್ರದಲ್ಲಿ ಅವರಿಬ್ಬರ ಜೋಡಿ ಹಿಟ್ ಆಗುತ್ತಿದ್ದಂತೆಯೇ, ಇನ್ನೂ ಒಂದು ಚಿತ್ರದಲ್ಲಿ ಅವರಿಬ್ಬರೂ ನಟಿಸುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಅದೀಗ ನಿಜವಾಗುತ್ತಿದೆ. ಸ್ಪಾನಿಶ್ ಚಿತ್ರ ‘ಚಾಂಪಿಯನ್ಸ್’ನ ಹಿಂದಿ ರಿಮೇಕ್ನಲ್ಲಿ ಆಮೀರ್ ಮತ್ತು ಅನುಷ್ಕಾ ಜತೆಯಾಗಿ ನಟಿಸುತ್ತಿದ್ದಾರಂತೆ.
2018ರಲ್ಲಿ ಬಿಡುಗಡೆಯಾಗಿದ್ದ ‘ಚಾಂಪಿಯನ್ಸ್’ ಚಿತ್ರ ನೋಡಿ ಮೆಚ್ಚಿದ್ದ ಆಮೀರ್, ಹಿಂದಿಯಲ್ಲಿ ರಿಮೇಕ್ ಮಾಡುವುದಕ್ಕೆ ನಿರ್ಧರಿಸಿದ್ದರು. ಆದರೆ, ಅದಕ್ಕೂ ಮುನ್ನ ಒಪ್ಪಿಕೊಂಡಿದ್ದ ‘ಲಾಲ್ ಸಿಂಗ್ ಛಡ್ಡಾ’ ಮುಗಿಸಬೇಕಿತ್ತು. ಕೋವಿಡ್ನಿಂದ ತಡವಾದ ಈ ಚಿತ್ರ, ಕೊನೆಗೂ ಈ ವರ್ಷ ಬಿಡುಗಡೆಯಾಗುತ್ತಿದೆ. ಆಗಸ್ಟ್ 11ರಂದು ಈ ಚಿತ್ರ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮುನ್ನವೇ ಆಮೀರ್ ಖಾನ್ ಅಭಿನಯದ ಹೊಸ ಚಿತ್ರ ಶುರುವಾಗಲಿದೆ.
ಆಮೀರ್ ಅಭಿನಯದ ಮುಂದಿನ ಚಿತ್ರ ಯಾವುದು ಎಂದರೆ ‘ಮೊಘಲ್’ ಸೇರಿ ಮೂರ್ನಾಲ್ಕು ಚಿತ್ರಗಳನ್ನು ಬಾಲಿವುಡ್ ಪಂಡಿತರು ತೋರಿಸುತ್ತಾರಾದರೂ, ಸ್ಪಾನಿಶ್ ಚಿತ್ರ ‘ಚಾಂಪಿಯನ್ಸ್’ನ ರಿಮೇಕ್ ಮೊದಲು ಶುರುವಾಗುತ್ತದೆ ಎಂದು ಹೇಳಲಾಗುತ್ತಿದೆ. ‘ಶುಭ್ ಮಂಗಲ್ ಸಾವಧಾನ್’ ನಿರ್ದೇಶಿಸಿದ್ದ ಆರ್.ಎಸ್. ಪ್ರಸನ್ನ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಈಗಾಗಲೇ ಬರವಣಿಗೆ ಕೆಲಸ ಮುಗಿದಿದೆಯಂತೆ. ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಶುರುವಾಗಿದ್ದು, ನಾಯಕಿಯಾಗಿ ಅನುಷ್ಕಾ ಶರ್ಮ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.