

ಕಳೆದ ವರ್ಷದ ಜನವರಿಯಲ್ಲಿ ತಾಯಿಯಾದರು ಅನುಷ್ಕಾ ಶರ್ಮ. ಜನವರಿ 11ರಂದು ವಮಿಕಾ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡಿದ ಅನುಷ್ಕಾ, ಈ ಒಂದು ವರ್ಷದಲ್ಲಿ ಮಗುವಿನ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದರು. ಈ ಮಧ್ಯೆ, ಅವರು ನಟನೆಗೆ ಯಾವಾಗ ಮರಳುತ್ತಾರೆ? ಮತ್ತೆ ಯಾವಾಗ ಬಣ್ಣ ಹಚ್ಚುತ್ತಾರೆ ಎಂಬ ಪ್ರಶ್ನೆ ಕೇಳಿ ಬರುತ್ತಲೇ ಇತ್ತು. ಆ ಪ್ರಶ್ನೆಗೆ 2022ರಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ.
ಇನ್ನೇನು, ಮಗಳು ವಮಿಕಾಗೆ ಒಂದು ವರ್ಷ ತುಂಬಲಿದ್ದು, ಅನುಷ್ಕಾ ಸಹ ಮತ್ತೆ ಬಣ್ಣ ಹಚ್ಚುವುದಕ್ಕೆ ತಯಾರಾಗಿದ್ದಾರಂತೆ. ಮೂಲಗಳ ಪ್ರಕಾರ ಅನುಷ್ಕಾ ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದು, ಈ ಪೈಕಿ ಎರಡು ಚಿತ್ರಗಳು ನೇರವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದರೆ, ಇನ್ನೊಂದು ಒಟಿಟಿಯಲ್ಲಿ ಬಿಡುಗಡೆಯಾಗುತ್ತದಂತೆ. ಇತ್ತೀಚಿನ ದಿನಗಳಲ್ಲಿ ಕಥೆ ಕೇಳಿ ಓಕೆ ಮಾಡಿರುವ ಅನುಷ್ಕಾ, ಸದ್ಯದಲ್ಲೇ ಗ್ರೀನ್ ಸಿಗ್ನಲ್ ನೀಡಲಿದ್ದಾರಂತೆ. ಆ ನಂತರ ಒಂದರ ಹಿಂದೊಂದು ಚಿತ್ರಗಳು ಶುರುವಾಗಲಿದ್ದು, ಇಂದು ಚಿತ್ರ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಅನುಷ್ಕಾ ಅಭಿನಯದ ಚಿತ್ರಗಳ್ಯಾವವು, ಯಾರು ನಿರ್ವಿುಸಿ-ನಿರ್ದೇಶಿಸುತ್ತಾರೆ ಎಂಬ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. -ಏಜೆನ್ಸೀಸ್